ಬುಧವಾರ, ಅಕ್ಟೋಬರ್ 23, 2019
21 °C
ಡಿಸಿ ಡಾ.ಎಂ.ವಿ. ವೆಂಕಟೇಶ್‌ ಹೇಳಿಕೆ, 6 ಸಾವಿರ ಜನ ಸೇರುವ ನಿರೀಕ್ಷೆ

ಬನ್ನಿಮಂಟಪದಿಂದ ಜಂಬೂಸವಾರಿ

Published:
Updated:
Prajavani

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಅ.3ರಿಂದ 4 ದಿನಗಳವರೆಗೆ ನಡೆಯಲಿರುವ ದಸರಾ ಉತ್ಸವದಲ್ಲಿ ಜಂಬೂಸವಾರಿ ಪ್ರಮುಖ ಆಕರ್ಷಣೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ತಾಲ್ಲೂಕಿನ ಕಿರಂಗೂರು ವೃತ್ತದ ಬನ್ನಿಮಂಟಪಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅ.3ರಂದು ಬನ್ನಿಮಂಟಪದ ಬಳಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬನ್ನಿಮಂಟಪದ ಬಳಿ ಅಂದು 6 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಆಸನ ಇತರ ವ್ಯವಸ್ಥೆ ಮಾಡಲಾಗುವುದು. ಉತ್ಸವದ ಜತೆ ಜಾನಪದ ಕಲಾ ತಂಡಗಳು, ಸ್ತಬ್ಧಚಿತ್ರ ಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.

ದಸರಾ ಉತ್ಸವಕ್ಕೆ ಈ ಬಾರಿ ₹2 ಕೋಟಿ ಬಂದಿದೆ. ಬನ್ನಿಮಂಟಪವನ್ನು ಪ್ರವಾಸಿ ತಾಣವನ್ನಾಗಿ ರೂಪಿಸ ಲಾಗುವುದು. ಪಕ್ಕದ ಕೊಳವನ್ನು ದುರಸ್ತಿಪಡಿಸಿ ಆಲಂಕಾರಿಕ ಗಿಡ, ಲಾನ್‌ ಬೆಳೆಸಲು ತೋಟಗಾರಿಕೆ ಇಲಾಖೆಗೆ ಸೂಚಿಸಲಾಗುವುದು. ಕೊಳದ ಎಲ್ಲೆಯನ್ನು ಗುರುತಿಸಿ ಬೇಲಿ ನಿರ್ಮಿಸಬೇಕು. ಕೊಳಚೆ ನೀರನ್ನು ಹೊರ ಹಾಕಿ ಸ್ವಚ್ಛಗೊಳಿಸಬೇಕು ಎಂದು ಸರ್ವೇಯರ್‌ಗಳಿಗೆ ಅವರು ಸೂಚಿಸಿದರು.

ಬನ್ನಿಮಂಟಪದ ಬಳಿ ಮರದಲ್ಲಿ ಜೇನುಗೂಡನ್ನು ಗುರುತಿಸಿದ ಜಿಲ್ಲಾಧಿಕಾರಿ ಅವರು, ಉತ್ಸವದ ದಿನ ಆನೆ ಅಥವಾ ಜನರ ಮೇಲೆ ಜೇನು ದಾಳಿ ಮಾಡಬಹುದು. ಹಾಗಾಗಿ ಜೇನುಗೂಡನ್ನು ತಕ್ಷಣ ತೆಗೆಸಿ ಎಂದು ತಹಶೀಲ್ದಾರ್‌ ಡಿ. ನಾಗೇಶ್‌ ಅವರಿಗೆ ಸೂಚಿಸಿದರು. ಒಣಗಿರುವ ತೆಂಗಿನ ಮರವನ್ನೂ ತೆಗೆಸಬೇಕು. ಮಂಟಪದ ಪಾಚಿ ಸ್ವಚ್ಛಗೊಳಿಸಬೇಕು ಎಂದು ಹೇಳಿದರು.

ತಾಲ್ಲೂಕಿನ ಶ್ರೀನಿವಾಸ ಅಗ್ರಹಾರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗ್ರಾಮಸ್ಥರ ಜತೆ ಚರ್ಚಿಸಿದರು. ಯುವ ಪೀಳಿಗೆ ಹಾಗೂ ಪ್ರವಾಸಿಗರಿಗೆ ಮಂಡ್ಯ ಆಹಾರ ಪದ್ಧತಿ, ಕೃಷಿ, ಹಾಲು ಕರೆಯುವುದು, ಬೆಣ್ಣೆ ತೆಗೆಯುವುದು, ರಾಗಿ ಬೀಸುವುದು, ಭತ್ತ ಕುಟ್ಟುವುದು, ಭತ್ತದ ನಾಟಿ, ಕಬ್ಬು ಕಡಿಯುವುದು, ಬೆಲ್ಲ ತಯಾರಿಕೆ ಇತರ ಚಟುವಟಿಕೆ ತಿಳಿಸಿಕೊಡಲು ಶ್ರೀನಿವಾಸ ಅಗ್ರಹಾರ ದಲ್ಲಿ ಹಳ್ಳಿ ದಸರಾ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್‌ ಡಿ. ನಾಗೇಶ್‌, ಪುರಸಭೆ ಮುಖ್ಯಾಧಿಕಾರಿ ಕೃಷ್ಣ, ತಾಲ್ಲೂಕು ಪಂಚಾಯಿತಿ ಪ್ರಭಾರಿ ಇಒ ಎಚ್‌.ಆರ್‌. ಸುರೇಶ್‌, ಎಂಜಿನಿಯರ್‌ ಶಿವು, ಉಪ ತಹಶೀಲ್ದಾರ್‌ ನಾಗರಾಜು, ಕಂದಾಯ ನಿರೀಕ್ಷಕ ಉಮೇಶ್‌ ಇದ್ದರು.

ಬೆಂಗಳೂರಿನಲ್ಲೂ ಪ್ರಚಾರ

ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕುರಿತು ವ್ಯಾಪಕ ಪ್ರಚಾರ ನಡೆಸಲಾಗುವುದು. ಪ್ರಚಾರಕ್ಕೆ ಮಾಧ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಳ್ಳಲಾಗುವುದು. ಬೆಂಗಳೂರು, ಮೈಸೂರು, ಮಂಡ್ಯ ನಗರಗಳಲ್ಲಿ ಕೂಡ ಶ್ರೀರಂಗಪಟ್ಟಣ ದಸರಾ ಬಗ್ಗೆ ಪ್ರಚಾರ ನಡೆಯಲಿದೆ. ಜಂಬೂ ಸವಾರಿ ಸಾಗುವ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಮುಗಿಯಲಿದೆ ಎಂದು ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)