ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಸ್ಟೋನ್‌ ಕ್ರಷರ್‌ಗಳಿಗೆ ಬೀಗ

Last Updated 17 ಆಗಸ್ಟ್ 2019, 19:32 IST
ಅಕ್ಷರ ಗಾತ್ರ

ಪಾಂಡವಪುರ: ಕಲ್ಲು ಗಣಿಗಾರಿಕೆ ನಡೆಯುತ್ತಿರುವ, ತಾಲ್ಲೂಕಿನ ಬೇಬಿ ಬೆಟ್ಟದಲ್ಲಿನ 35ಕ್ಕೂ ಹೆಚ್ಚು ಸ್ಟೋನ್ ಕ್ರಷರ್‌ಗಳನ್ನು ಶನಿವಾರ ಸ್ಥಗಿತಗೊಳಿಸಿ, ಬೀಗ ಜಡಿಯಲಾಯಿತು.

ತಹಶೀಲ್ದಾರ್ ಪ್ರಮೋದ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ, ಶಾಸಕ ಸಿ.ಎಸ್.ಪುಟ್ಟರಾಜು ಅವರ ಅಣ್ಣನ ಮಕ್ಕಳಿಗೆ ಸೇರಿದ ಎಸ್‌ಟಿಜಿ ಸ್ಟೋನ್ ಕ್ರಷರ್‌, ರಾಮಾಂಜನೇಯ ಸ್ಟೋನ್‌ ಕ್ರಷರ್, ಬಾಲಾಜಿ ಸ್ಟೋನ್ ಕ್ರಷರ್‌, ಕೃಷ್ಣ ಸ್ಟೋನ್ ಕ್ರಷರ್, ಎಸ್‌ವಿಟಿ ಸ್ಟೋನ್ ಕ್ರಷರ್, ಎಸ್‌ಟಿಸಿ ಸ್ಟೋನ್ ಕ್ರಷರ್, ಆರ್.ಎ.ಎನ್‌ ಸ್ಟೋನ್‌ ಕ್ರಷರ್, ಜ್ಯೋತಿ ಸ್ಟೋನ್ ಕ್ರಷರ್ ಸೇರಿದಂತೆ 35ಕ್ಕೂ ಹೆಚ್ಚು ಸ್ಟೋನ್ ಕ್ರಷರ್‌ಗಳಿಗೆ ಬೀಗ ಹಾಕಿತು.

‘ಬೇಬಿ ಬೆಟ್ಟದಲ್ಲಿರುವ ಸ್ಟೋನ್ ಕ್ರಷರ್‌ಗಳನ್ನು ಮುಂದಿನ ಟಾಸ್ಕ್‌ ಪೋರ್ಸ್‌ ಸಮಿತಿಯ ಆದೇಶದವರೆಗೆ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆದೇಶಿಸಿದ್ದಾರೆ. ಹೀಗಾಗಿ, ಇಲ್ಲಿನ ಕ್ರಷರ್‌ಗಳಿಗೆ ಬೀಗ ಜಡಿದಿದ್ದೇವೆ’ ಎಂದು ಪ್ರಮೋದ್ ಪಾಟೀಲ್‌ ತಿಳಿಸಿದರು.

ಈ ಬೆಟ್ಟದಲ್ಲಿ 10ಕ್ಕೂ ಹೆಚ್ಚು ಕಲ್ಲು ಕ್ವಾರಿಗಳು ನಡೆಯುತ್ತಿವೆ. ‘ಸಿ’ ಮಾನ್ಯತೆ ಪಡೆದಿರುವ 18 ಸ್ಟೋನ್ ಕ್ರಷರ್‌ಗಳು ಹಾಗೂ ‘ಬಿ–1’ ಮಾನ್ಯತೆ ಪಡೆದಿರುವ 17 ಸ್ಟೋನ್ ಕ್ರಷರ್‌ಗಳು ನಡೆಯುತ್ತಿವೆ. ಇವೆಲ್ಲವನ್ನೂ ಸ್ಥಗಿತಗೊಳಿಸಲಾಗುತ್ತಿದೆ. ಇದಲ್ಲದೆ ಅಕ್ರಮ ಗಣಿಗಾರಿಕೆ, ಸ್ಟೋನ್ ಕ್ರಷರ್‌ಗಳ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿ ಮುತ್ತಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಸುಧಾಕರ್, ಕಂದಾಯ ಪರಿವೀಕ್ಷಕ ಗಣೇಶ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಡಾ.ನಟಶೇಖರ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸವಿತಾ, ಪಲ್ಲವಿ, ಎಎಸ್ಐ ಬಿ.ಜೆ. ರವಿ, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಇದ್ದರು.

ಭಾರಿ ಸ್ಫೋಟಕಗಳ ಬಳಕೆ: ಆರೋಪ

ಆ.16ರಂದು ರಾತ್ರಿ ಕೆಆರ್‌ಎಸ್ ಅಣೆಕಟ್ಟೆ ಬಳಿ ಭಾರಿ ಶಬ್ದ ಕೇಳಿಬಂದಿತ್ತು. ಇದು ಅಣೆಕಟ್ಟೆಯ ಸುತ್ತಲಿನ ಗ್ರಾಮಗಳ ಜನರ ಆತಂಕಕ್ಕೆ ಕಾರಣವಾಗಿತ್ತು. ಅಣೆಕಟ್ಟೆಯಿಂದ 6 ಕಿ.ಮೀ ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಭಾರಿ ಸ್ಫೋಟಕಗಳನ್ನು ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದರು.

ಹೀಗಾಗಿ, ಈ ಭಾಗದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್‌ಗಳನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆದೇಶಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಎರಡು ಬಾರಿ ಭಾರಿ ಶಬ್ದ ಕೇಳಿಬಂದಿದ್ದರಿಂದ ಅಂದಿನ ಜಿಲ್ಲಾಧಿಕಾರಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT