ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

7

ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Published:
Updated:
Deccan Herald

ಶ್ರೀರಂಗಪಟ್ಟಣ: ಶೌಚಾಲಯ, ಶುದ್ಧ ಕುಡಿಯುವ ನೀರು ಇತರ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕಾಲೇಜಿನ ಎದುರು ಸುಮಾರು ಒಂದು ತಾಸು ಪ್ರತಿಭಟನೆ ನಡೆಸಿದರು. ಕಾಲೇಜಿನ ಪ್ರಾಂಶುಪಾಲ ಹಾಗೂ ಪ್ರಥಮ ದರ್ಜೆ ಸಹಾಯಕರ ವಿರುದ್ಧ ಘೋಷಣೆ ಕೂಗಿದರು. ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡುವವರೆಗೆ ಧರಣಿ ಮುಂದುವರಿಸುತ್ತೇವೆ ಎಂದು ಪಟ್ಟು ಹಿಡಿದರು.

‘ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿನಿಯರು ಇದ್ದೇವೆ. ಶೌಚಾಲಯ ವ್ಯವಸ್ಥೆ ಸರಿ ಇಲ್ಲದ ಕಾರಣ ನಿಸರ್ಗಕರೆಗೆ ಮನೆಗೇ ಹೋಗಬೇಕು. ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಪಕ್ಕದ ಅಡುಗೆ ಎಣ್ಣೆ ಉತ್ಪಾದನಾ ಘಟಕದಿಂದ ದೂಳು ಕಾಲೇಜಿನ ಕೊಠಡಿಗಳಿಗೆ ಬರುತ್ತಿದೆ. ದೂಳು ಗುಡಿಸುತ್ತಿಲ್ಲ. ಕುಡಿಯುವ ನೀರೂ ಸಿಗುತ್ತಿಲ್ಲ. ಸಮಸ್ಯೆ ಕುರಿತು ಪ್ರಾಂಶುಪಾಲರಿಗೆ ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ವಿದ್ಯಾರ್ಥಿನಿಯರು ದೂರಿದರು.

‘ಪ್ರಾಂಶುಪಾಲ ಬಸವರಾಜು ವಿದ್ಯಾರ್ಥಿನಿಯರ ಜತೆ ಅಗೌರವದಿಂದ ನಡೆದುಕೊಳ್ಳುತ್ತಾರೆ. ಅವ್ಯವಸ್ಥೆ ಕುರಿತು ಪ್ರಶ್ನೆ ಮಾಡುವವರಿಗೆ ವರ್ಗಾವಣೆ ಪತ್ರದಲ್ಲಿ ಯೋಗ್ಯರಲ್ಲ ಎಂದು ಬರೆಯುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಹತ್ತಾರು ವಿದ್ಯಾರ್ಥಿಗಳ ಎದುರು ಹುಡುಗಿಯರನ್ನು ಏಕವಚನದಲ್ಲಿ ಸಂಬೋಧಿಸಿ ಮುಜುಗರ ಉಂಟುಮಾಡುತ್ತಿದ್ದಾರೆ. ಪ್ರಾಂಶುಪಾಲರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಬಂಧಿಸಿದವರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಕಾಲೇಜಿನ ಉಪನ್ಯಾಸಕರು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್‌ ಪಡೆದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !