ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಬಸ್‌ ಪಾಸ್‌ ಪಡೆಯಲು ವಿದ್ಯಾರ್ಥಿಗಳ ಪರದಾಟ

ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ‘ಸಕಾಲ’ ಮಾಹಿತಿ ಇಲ್ಲ, ಶಿಕ್ಷಣ ಸಂಸ್ಥೆಗಳಿಂದ ಸಹಾಯ ಸಿಕ್ಕಿಲ್ಲ
Last Updated 28 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಕೋವಿಡ್‌ ರಜೆಯ ಬಳಿಯ ಶಾಲಾ–ಕಾಲೇಜು ಆರಂಭವಾಗಿದ್ದು ಗ್ರಾಮೀಣ ವಿದ್ಯಾರ್ಥಿಗಳು ಬಸ್‌ ಪಾಸ್‌ಗಾಗಿ ನಿಲ್ದಾಣದ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಆದರೆ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸಕಾಲದಲ್ಲಿ ಪಾಸ್‌ ದೊರೆಯದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳು ಪಾಸ್‌ಗಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕೆಲ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲೇ ಅರ್ಜಿಸಿದರೆ ಬಹುತೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಗಳಲ್ಲಿ ಹಣ ಪಾವತಿ ಮಾಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಮಂಡ್ಯ ಒನ್‌ನಲ್ಲೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಶಾಲಾ ಮುಖ್ಯಶಿಕ್ಷಕರು, ಕಾಲೇಜು ಪ್ರಾಂಶುಪಾಲರ ಸೀಲ್‌, ಸಹಿ ಪಡೆದು ಸಾರಿಗೆ ಸಂಸ್ಥೆಗೆ ಸಲ್ಲಿಸಬೇಕು. ಸಕಾಲ ನಿಯಮದಡಿ ಅರ್ಜಿ ಸಲ್ಲಿಸಿದ ನಂತರ ಸಾರಿಗೆ ಸಂಸ್ಥೆಗೆ ಸಲ್ಲಿಸಲು 7 ದಿನ ಸಮಯಾವಕಾಶ ಇರುತ್ತದೆ.

ನಿಯಮಾನುಸಾರ ಅರ್ಜಿ ಸಲ್ಲಿಸಿದ ನಂತರ ಆಯಾ ಕಾಲೇಜಿನ ಸಿಬ್ಬಂದಿ ಎಲ್ಲಾ ಅರ್ಜಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಅವರೇ ಸಾರಿಗೆ ಸಂಸ್ಥೆಗೆ ಸಲ್ಲಿಸಬೇಕು. ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ಸಂಸ್ಥೆಗೆ ಸಲ್ಲಿಸಬೇಕು. ಪಾಸ್‌ ಸಿದ್ಧಗೊಂಡ ನಂತರ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕು. ಆದರೆ ಶಿಕ್ಷಣ ಸಂಸ್ಥೆಗಳು ಈ ಜವಾಬ್ದಾರಿಯನ್ನು ವಿದ್ಯಾರ್ಥಿಗಳ ಮೇಲೆ ಹಾಕಿವೆ.

‘ನಮ್ಮ ವಿವಿ ಮುಖ್ಯಸ್ಥರು ಕೇವಲ ಸೀಲ್‌, ಸಹಿ ಮಾತ್ರ ಮಾಡುತ್ತಾರೆ. ಏನೇ ಸಮಸ್ಯೆ ಹೇಳಿಕೊಂಡರೂ ಕೇಸ್‌ ವರ್ಕರ್‌ ಕೇಳಿ ಎನ್ನುತ್ತಾರೆ, ಕೇಸ್‌ ವರ್ಕರ್‌ಗಳೂ ಉತ್ತರ ನೀಡುವುದಿಲ್ಲ. ಹೀಗಾಗಿ ಕಾಲೇಜು ಆರಂಭವಾಗಿದ್ದರೂ ಇನ್ನೂ ಪಾಸ್‌ ಸಿಕ್ಕಿಲ್ಲ’ ಎಂದು ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಸಕಾಲ ಮಾಹಿತಿ ಇಲ್ಲ: ಪಾಸ್‌ ವಿತರಣೆ ಮಾಡುವ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ‘ಸಕಾಲ’ ಮಾಹಿತಿ ಇಲ್ಲದ ಕಾರಣ ವಿದ್ಯಾರ್ಥಿಗಳ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ ದಿನವೇ ಡೌನ್‌ಲೋಡ್‌ ಮಾಡಿದ ಅರ್ಜಿಯನ್ನು ಸಂಸ್ಥೆಗೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ.

ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಶಾಲಾ–ಕಾಲೇಜಿನ ಮುಖ್ಯಸ್ಥರ ಸೀಲ್‌, ಸಹಿ ಪಡೆದು ಸಂಜೆ 5.30ರೊಳಗೆ ಸಾರಿಗೆ ಸಂಸ್ಥೆಗೆ ಸಲ್ಲಿಸಬೇಕು. ಅಷ್ಟರೊಳಗೆ ಸಲ್ಲಿಸಲು ಸಾಧ್ಯವಾಗದಿದ್ದರೆ ಮತ್ತೆ ಮರುದಿನ ಸೇವಾಸಿಂಧುವಿನಲ್ಲಿ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಸಿಎಸ್‌ಸಿಗಳಿಗೆ ಮತ್ತೆ ₹ 100 ತೆರಬೇಕು.

ಸಕಾಲ ಅಡಿ ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅದಕ್ಕೆ 7 ದಿನಗಳ ಸಮಯಾವಕಾಶವಿರುತ್ತದೆ. ಈ ಮಾಹಿತಿ ಇಲ್ಲದ ಸಾರಿಗೆ ಸಂಸ್ಥೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಈ ವಿಚಾರ ಇ ಆಡಳಿತ ಇಲಾಖೆ ಸಿಬ್ಬಂದಿಯ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.

‘ಈ ಬಗ್ಗೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲಾಗುವುದು. 7 ದಿನ ಸಮಯ ಇರುವ ಕಾರಣ ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ ಎಂಬ ವಿಚಾರ ತಿಳಿಸಲಾಗುವುದು’ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಮಹಾಲಿಂಗು ಹೇಳಿದರು.

ಉಚಿತ ಪ್ರಯಾಣ ವ್ಯವಸ್ಥೆ ವಿಸ್ತರಿಸಿ
ಶಾಲಾ, ಕಾಲೇಜುಗಳಲ್ಲಿ ಶುಲ್ಕ ಪಾವತಿಸಿರುವ ರಶೀತಿ ತೋರಿಸಿ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶ ಜ.31ಕ್ಕೆ ಮುಗಿಯಲಿದೆ. ಪಾಸ್ ವಿತರಣೆ ಇನ್ನೂ ಪೂರ್ಣಗೊಳ್ಳದ ಕಾರಣ ಉಚಿತ ಪ್ರಯಾಣ ಸೌಲಭ್ಯವನ್ನು ಇನ್ನೂ 15 ದಿನ ವಿಸ್ತರಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

***

ಏನೇ ಸಮಸ್ಯೆ ಇದ್ದರೂ ಕೂಡಲೇ ಬಗೆಹರಿಸುವಂತೆ ಡಿಪೊ ವ್ಯವಸ್ಥಾಪಕರಿಗೆ ತಿಳಿಸುತ್ತೇನೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
– ಕಿರಣ್‌ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT