ಶನಿವಾರ, ನವೆಂಬರ್ 28, 2020
18 °C
ನಿವೇಶನ ಇದ್ದರೂ ಬಾಡಿಕೆ ಕಟ್ಟಡದಲ್ಲಿ ಕಾರ್ಯ

ಮಳವಳ್ಳಿ ಸಬ್‌ ರಿಜಿಸ್ಟರ್‌ ಕಚೇರಿಗಿಲ್ಲ ಸ್ವಂತ ಕಟ್ಟಡ

ಟಿ.ಕೆ.ಲಿಂಗರಾಜು Updated:

ಅಕ್ಷರ ಗಾತ್ರ : | |

Prajavani

ಮಳವಳ್ಳಿ: ನೋಂದಣಿ ಮತ್ತು ಮುದ್ರಾಂಕ (ಸಬ್ ರಿಜಿಸ್ಟರ್) ಇಲಾಖೆ ಸಾರ್ವಜನಿಕ ಸಂಪರ್ಕದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ನೀಡುವ ಇಲಾಖೆಗೆ ಇಲ್ಲಿ, ನಿವೇಶವಿದ್ದರೂ ಸ್ವಂತ ಕಟ್ಟಡ ಇಲ್ಲದಂತಾಗಿದೆ.

ಪಟ್ಟಣದ ಕೊಳ್ಳೇಗಾಲ ರಸ್ತೆಯ ಪುರ ಪೊಲೀಸ್ ಠಾಣೆ ಎದುರಿನ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಬ್ ರಿಜಿಸ್ಟರ್ ಕಚೇರಿ ನಡೆಯುತ್ತಿದೆ. ಪ್ರತಿ ತಿಂಗಳು ಸುಮಾರು ₹25 ಸಾವಿರ ಬಾಡಿಗೆ ಹಣ ನೀಡಲಾಗುತ್ತಿದೆ. ಪ್ರತಿ ವರ್ಷ ಸುಮಾರು ₹6 ಕೋಟಿ ಆದಾಯ ನೀಡುವ ತಾಲ್ಲೂಕಿನ ಸಬ್ ರಿಜಿಸ್ಟರ್ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ಮಾತ್ರ ಇಲಾಖೆಯು ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದೆ.

ಇದಕ್ಕೂ ಮುನ್ನ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದಲ್ಲಿ ಸರ್ಕಾರಿ ಜಾಗದಲ್ಲಿ ಸ್ವಂತ ಕಟ್ಟಡ ಇತ್ತು. ಕಟ್ಟಡ ಶಿಥಿಲಾವ್ಯವಸ್ಥೆಯಲ್ಲಿದ್ದ ಕಾರಣ ನಾಲ್ಕು ವರ್ಷಗಳಿಂದ ಹಿಂದೆ ಸಬ್ ರಿಜಿಸ್ಟರ್ ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮೂರು ಬಾರಿ ಅಂದಾಜುಪಟ್ಟಿ ತಯಾರಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚಿಗೆ ₹1.25 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಕಚೇರಿಯಲ್ಲಿ ಕಿರಿಕಿರಿ: ಬಾಡಿಗೆ ಕಟ್ಟಡದಲ್ಲಿ ಇರುವ ಕಚೇರಿ ಮೊದಲನೇ ಮಹಡಿಯಲ್ಲಿ ಇದ್ದು, ಅಲ್ಲದೇ ಚಿಕ್ಕದಾಗಿದೆ. ಕೋವಿಡ್ ಸಂದರ್ಭದಲ್ಲಿ ಅಂತರ ಕಾಪಾಡಿಕೊಳ್ಳಬೇಕಾದ ವೇಳೆಯಲ್ಲಿ ಜನರು ಗುಂಪು-ಗುಂಪಾಗಿ ನಿಂತ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ನೋಂದಣಿ ಮತ್ತು ಮುದ್ರಾಂಕ ಸೇವೆಯಲ್ಲಿ ಆನ್‌ಲೈನ್ ಪೋರ್ಟಲ್‌ ಸೇವೆ ಇಲಾಖೆಯಲ್ಲಿ ಸಾರ್ವಜನಿಕರಿಗೆ ಲಭ್ಯವಿದ್ದು, ಮನೆ, ಕಟ್ಟಡ, ನಿವೇಶನ, ಸಾಗುವಳಿ ಜಮೀನು ಒಪ್ಪಂದ ಪತ್ರ, ಕ್ರಯಪತ್ರ, ಸಾಲ ಅಡಮಾನ ಪತ್ರ, ಸಾಲ ತೀರುವಳಿ (ಖುಲಾಸೆ) ಪತ್ರ ವಿವಾಹ ನೋಂದಣಿ, ಹಣಬಾಧ್ಯತಾ ಪತ್ರ ಸೇರಿದಂತೆ ಅನೇಕ ಅಗತ್ಯ ಸೇವೆಗೆ ಬರುವ ಜನರು ಪರದಾಟ ನಡೆಸುತ್ತಿದ್ದಾರೆ. ಅಂಗವಿಕಲರು ಹಾಗೂ ವೃದ್ಧರು ಕಿರಿದಾದ ಮೆಟ್ಟಿಲಿನಲ್ಲಿ ಹೋಗಿ ಬರಲು ಸಂಕಷ್ಟಪಡುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು