ಗುರುವಾರ , ಜನವರಿ 23, 2020
28 °C
ಬೆಳ್ಳುಂಡಗೆರೆ ತಿಮ್ಮಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಮಂದಗೆರೆ ಜಯರಾಮು ಆಗ್ರಹ

ರೈತರ ಕಬ್ಬು ಅರೆಸಲು ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ಉಪಚುನಾವಣೆಯ ಸಂದರ್ಭದಲ್ಲಿ ರೈತರಿಗೆ ನೀಡಿದ್ದ ಭರವಸೆಯಂತೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, ಬಾಕಿ ಉಳಿದಿರುವ ಜಿಲ್ಲೆಯ ರೈತರ ಕಬ್ಬನ್ನು ಶೀಘ್ರವಾಗಿ ಅರೆಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ನಿಧನರಾದ ರೈತ ನಾಯಕ ಬೆಳ್ಳುಂಡಗೆರೆ ತಿಮ್ಮಯ್ಯ ಅವರಿಗೆ ಶುಕ್ರವಾರ ಶ್ರದ್ಧಾಂಜಲಿ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂದಗೆರೆ ಜಯರಾಮು ಮಾತನಾಡಿ, ‘ಜಿಲ್ಲೆಯ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದಿರುವ ಅವಧಿ ಮುಗಿದಿರುವ ಕಬ್ಬು 20 ಲಕ್ಷ ಟನ್‌ಗಿಂತಲೂ ಹೆಚ್ಚಿದೆ. ಪ್ರಸ್ತುತ ಜಿಲ್ಲೆಯ ಮೂರೂ ಸಕ್ಕರೆ
ಕಾರ್ಖಾನೆಗಳು ಒಪ್ಪಂದ ಮಾಡಿ ಕೊಂಡಿರುವ ಕಬ್ಬನ್ನು ಅರೆಯಲು ಮೀನಮೇಷ ಎಣಿಸುತ್ತಿವೆ. ಕೋರಮಂಡಲ್ ಸಕ್ಕರೆ ಕಾರ್ಖಾನೆಯು 20 ತಿಂಗಳು ಅವಧಿ ಮೀರುತ್ತಿರುವ ಕಬ್ಬನ್ನೂ ಕಟಾವು ಮಾಡಲು ಒಪ್ಪಿಗೆ ನೀಡದೆ ಸತಾಯಿಸುತ್ತಿದೆ’ ಎಂದು ದೂರಿದರು.

ಕಬ್ಬಿನ ಕಟಾವಿಗೆ ನೀಡುವ ಕೂಲಿ ಮತ್ತು ಕಬ್ಬು ಸಾಗಣೆ ವೆಚ್ಚ ದುಬಾರಿಯಾಗಿದೆ. ಕಾರ್ಖಾನೆಗಳು ಇಷ್ಟಬಂದಂತೆ ದರ ನಿಗದಿ ಮಾಡಿ ಕೋಟ್ಯಂತರ ರೂಪಾಯಿಯನ್ನು ವಂಚಿಸುತ್ತಿವೆ. ಎಲ್ಲ ಹಣ ಕೂಲಿಕಾರ್ಮಿಕರು ಹಾಗೂ ಕಾರ್ಖಾನೆಯ ಪಾಲಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಕೂಲಿ ಮತ್ತು ಸಾಗಣೆ ವೆಚ್ಚವನ್ನು ಭರಿಸಿಕೊಡುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು. ಜಿಲ್ಲೆಯ ರೈತರ ಕಬ್ಬನ್ನು ಅರೆಯಲು ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು. ಜಿಲ್ಲೆಯ ಮೈಷುಗರ್ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

23ರಂದು ರೈತ ದಿನಾಚರಣೆ: ಇದೇ ಡಿ.23ರಂದು ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ನಡೆಯುತ್ತಿರುವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನಿಂದ 300ಕ್ಕೂ ಹೆಚ್ಚು ರೈತರು ಭಾಗವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಸ್ವಾಭಿಮಾನಿ ರೈತರು ಅನ್ನದಾತರ ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೈತ ನಾಯಕರಾದ ಕರೋಟಿ ತಮ್ಮಯ್ಯ, ಪಿ.ಬಿ. ಮಂಚನಹಳ್ಳಿ ನಾಗಣ್ಣ ಗೌಡ, ಕಾರಿಗನಹಳ್ಳಿ ಪುಟ್ಟೇಗೌಡ, ಮಿಲ್ ರಾಜಣ್ಣ, ನೀತಿಮಂಗಲ ಮಹೇಶ್, ನಗರೂರು ಕುಮಾರ್, ಚೌಡೇನಹಳ್ಳಿ ತಮ್ಮೇಗೌಡ ಇದ್ದರು.

‘ಪಕ್ಷಪಾತ ಧೋರಣೆ ನಿಲ್ಲಿಸಲಿ’

ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಇತ್ತೀಚಿನ ದಿನಗಳಲ್ಲಿ ಪಕ್ಷಪಾತ ಧೋರಣೆ ಮಾಡುತ್ತಿದೆ. ತಾಲ್ಲೂಕಿನ ಕಬ್ಬು ಬೆಳೆಗಾರರು ಬೆಳೆದಿರುವ ಒಪ್ಪಿಗೆ ಕಬ್ಬನ್ನು ಅರೆಯದೇ ನೆರೆಯ ತಾಲ್ಲೂಕುಗಳ ರೈತರು ಬೆಳೆದಿರುವ ಕಬ್ಬನ್ನು ಅರೆಯಲು ಮುಂದಾಗುತ್ತಿದೆ. ಮೊದಲು ಒಪ್ಪಿಗೆ ಮಾಡಿಕೊಂಡಿರುವ ಕಬ್ಬನ್ನು ಅರೆಯುವ ಬದ್ಧತೆಯನ್ನು ಕಾರ್ಖಾನೆ ಪ್ರದರ್ಶಿಸಬೇಕು. ಕಬ್ಬು ಕಟಾವಿನ ಕೂಲಿ ಮತ್ತು ಸಾಗಣೆ ವೆಚ್ಚದ ಗೊಂದಲವನ್ನು ಕೂಡಲೇ ಬಗೆಹರಿಸಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರುವಿನಹಳ್ಳಿ ಶಂಕರ್‌ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು