ಸೋಮವಾರ, ಅಕ್ಟೋಬರ್ 21, 2019
22 °C
ರೈತರ ಪ್ರಶ್ನೆಗಳಿಗೆ ಉತ್ತರ ನೀಡದ ಸಿಬ್ಬಂದಿ, ಕಂಗಾಲಾದ ಕಬ್ಬು ಬೆಳೆಗಾರರು, 20 ತಿಂಗಳತ್ತ ಕಬ್ಬು

ಕಬ್ಬು: ಕಂಟ್ರೋಲ್‌ ರೂಂ, ಸಂಚಾರಿ ದಳದ ಸ್ಪಂದನೆ ಇಲ್ಲ

Published:
Updated:
Prajavani

ಮಂಡ್ಯ: ಜಿಲ್ಲಾ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ಹೊರ ಜಿಲ್ಲೆಗಳ ಕಾರ್ಖಾನೆಗೆ ಸಾಗಿಸಲು ಜಿಲ್ಲಾಡಳಿತ ಕಂಟ್ರೋಲ್‌ ರೂಂ, ಸಂಚಾರಿ ದಳ ರಚನೆ ಮಾಡಿದೆ. ಆದರೆ ಅಲ್ಲಿಯ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದನೆ ನೀಡದ ಕಾರಣ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ.

ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವ ಅನುಮತಿ ನೀಡುವ ಸಲುವಾಗಿ ಜಿಲ್ಲಾಡಳಿತ ಮೈಷುಗರ್‌ ಕಾರ್ಖಾನೆ ಆವರಣದಲ್ಲಿ ಕಂಟ್ರೋಲ್‌ ರೂಂ ಸ್ಥಾಪಿಸಿದೆ. ಜೊತೆಗೆ ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ವಿಭಾಗವಾರು ಸಂಚಾರಿ ದಳ (ಫ್ಲೈಯಿಂಗ್‌ ಸ್ಕ್ವಾಡ್‌) ರಚಿಸಲಾಗಿದೆ. 15 ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿ ಅವರ ಮೊಬೈಲ್‌ ಸಂಖ್ಯೆ ಸಂಪರ್ಕಿಸಲು ಪ್ರಕಟಣೆ ಹೊರಡಿಸಲಾಗಿದೆ. ಇದಾಗಿ 10 ದಿನ ಕಳೆದರೂ ಸಿಬ್ಬಂದಿ ರೈತರ ಮನವಿಗೆ ಸ್ಪಂದನೆ ನೀಡುತ್ತಿಲ್ಲ.

ಕಂಟ್ರೋಲ್‌ ರೂಂಗೆ ಬರುವ ರೈತರಿಂದ ಅರ್ಜಿ ಸ್ವೀಕರಿಸಿ ಅವರ ಕಬ್ಬನ್ನು ಯಾವ ಕಾರ್ಖಾನೆಗೆ ಪೂರೈಸಬೇಕು ಎಂಬ ಬಗ್ಗೆ ಜೇಷ್ಠತೆ ಆಧಾರದ ಮೇಲೆ ಅನುಮತಿ ನೀಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಆ ಜವಾಬ್ದಾರಿಯನ್ನು ಆಹಾರ ಇಲಾಖೆ ಸಿಬ್ಬಂದಿಗೆ ವಹಿಸಲಾಗಿದೆ. ಆದರೆ ಇಲ್ಲಿಯವರೆಗೆ ಸಿಬ್ಬಂದಿ ಕಂಟ್ರೋಲ್‌ ರೂಂ ಕಚೇರಿಗೆ ಕಾಲಿಟ್ಟಿಲ್ಲ. ಕೇವಲ ಫೀಲ್ಡ್‌ಮ್ಯಾನ್‌ಗಳು ಮಾತ್ರ ಬಂದು ಹೋಗುತ್ತಿದ್ದಾರೆ. ಆದರೆ ಫೀಲ್ಡ್‌ಮ್ಯಾನ್‌ಗಳಿಂದ ರೈತರಿಗೆ ಯಾವುದೇ ಭರವಸೆ ಸಿಗುತ್ತಿಲ್ಲ.

‘ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿರುವ ಕಬ್ಬಿಗೆ 19 ತಿಂಗಳಾಗಿದೆ. ಈಗಾಗಲೇ ನಾಲ್ಕೈದು ಬಾರಿ ಫೀಲ್ಡ್‌ಮ್ಯಾನಗಳಿಗೆ ಸಂಪರ್ಕಿಸದರೂ ನಮ್ಮ ಕಬ್ಬು ಕಡಿಸುವ ಯಾವುದೇ ಮುನ್ಸೂಚನೆ ನೀಡುತ್ತಿಲ್ಲ. ಜಿಲ್ಲಾಡಳಿತ ತೆರೆದಿರುವ ಕಂಟ್ರೋಂಲ್‌ ರೂಂಗೆ ಬಂದರೆ ಅಲ್ಲಿ ಯಾರೂ ಇರುವುದಿಲ್ಲ. ಈಗ ಮುಂದೇನೂ ಮಾಡಬೇಕು ಎಂಬುದು ದಿಕ್ಕೇ ತೋಚದಾಗಿದೆ’ ಎಂದು ಕೆರಗೋಡು ಗ್ರಾಮದ ರೈತ ಲಿಂಗೇಗೌಡ ಹೇಳಿದರು.

ಕರೆ ಸ್ವೀಕರಿಸದ ಸಂಚಾರಿ ದಳದ ಸಿಬ್ಬಂದಿ: ವಿಭಾಗವಾರು ರಚಿಸಲಾಗಿರುವ ಸಂಚಾರಿ ದಳದ ಸಿಬ್ಬಂದಿ ರೈತರ ಕರೆಗೆ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ಬಹುತೇಕ ಮೊಬೈಲ್‌ ಸಂಖ್ಯೆಗಳು ಸ್ವಿಚ್ ಆಫ್‌ ಆಗಿವೆ. ಕೆಲವರು ಕರೆ ಸ್ವೀಕರಿಸಿದರೂ ರೈತರ ಸಮಸ್ಯೆಗೆ ಉತ್ತರ ನೀಡುತ್ತಿಲ್ಲ. ಹಲವರು ಆ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರೆ ಕೆಲವರು, ತಹಶೀಲ್ದಾರ್‌ ಸಂಪರ್ಕಿಸುವಂತೆ ಉತ್ತರ ನೀಡುತ್ತಿದ್ದಾರೆ.

‘ಫೀಲ್ಡ್‌ ಮ್ಯಾನ್‌ಗಳು ನಮ್ಮ ಸಮಸ್ಯೆ ಆಲಿಸಲು ನಿರಾಕರಿಸುತ್ತಾರೆ. ಹಣ ಕೊಡುವ ರೈತರಿಗೆ ಮಾತ್ರ ಪರ್ಮಿಟ್‌ ನೀಡುತ್ತಿದ್ದಾರೆ, ಬಡ ರೈತರ ಕಬ್ಬನ್ನು ಯಾರೂ ಮುಟ್ಟುತ್ತಿಲ್ಲ. ಕಬ್ಬಿನ ಜಲ್ಲೆಗಳು ನೆಲಕ್ಕೆ ಬಿದ್ದು ಮೊಳಕೆಯೊಡೆಯುತ್ತಿವೆ, ಇದರಿಂದ ಇಳುವರಿ ಕುಸಿಯುವ ಭೀತಿ ಇದೆ’ ಎಂದು ರೈತ ನಾಗರಾಜು ತಮ್ಮ ನೋವು ತೋಡಿಕೊಂಡರು.

ಕಾರ್ಖಾನೆ ಕಚೇರಿ ಸ್ಥಾಪನೆ: ನಂಜನಗೂಡಿನ ಬಣ್ಣಾರಿ ಅಮ್ಮನ್‌, ಕೊಳ್ಳೆಗಾಲದ ಕುಂತೂರು ಸಕ್ಕರೆ ಕಾರ್ಖಾನೆಗಳು ನಗರದಲ್ಲಿ ಪ್ರತ್ಯೇಕ ಕಚೇರಿಗಳನ್ನು ಸ್ಥಾಪಿಸಿವೆ. ಆದರೆ ಕಚೇರಿಗಳಿಗೆ ಬೀಗ ಹಾಕಲಾಗಿದ್ದು ರೈತರ ಸಮಸ್ಯೆ ಆಲಸುವವರೇ ಇಲ್ಲವಾಗಿದ್ದಾರೆ.

‘ಕುಂತೂರು ಕಾರ್ಖಾನೆ ಕಚೇರಿಯ ಕಚೇರಿ ಮೊದಲು ನಗರದ ಕ್ಯಾತುಂಗೆರೆಯಲ್ಲಿ ಇತ್ತು. ಆದರೆ ಈಗ ಅದು ಕೊತ್ತತ್ತಿಗೆ ಸ್ಥಳಾಂತರಗೊಂಡಿದೆ ಎನ್ನುತ್ತಾರೆ. ಅಲ್ಲಿಗೆ ತೆರಳಿ ವಿಚಾರಿಸಿದರೆ ಅಲ್ಲಿ ಯಾವುದೇ ಕಚೇರಿ ಇಲ್ಲ’ ಎಂದು ರೈತರೊಬ್ಬರು ಹೇಳಿದರು.

ಡಿಸಿ ಕಚೇರಿಯಲ್ಲಿ 100 ಅರ್ಜಿ ಸ್ವೀಕಾರ

ಜಿಲ್ಲಾಧಿಕಾರಿ ಕಚೇರಿಯಲ್ಲೂ ಕಂಟ್ರೋಲ್‌ ರೂಂ ತೆರೆಯಲಾಗಿದ್ದು ಇಲ್ಲಿಯವರೆಗೆ 100 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. ಅರ್ಜಿ ಸ್ವೀಕರಿಸಿ ಅವುಗಳನ್ನು ಬೇರೆ ಜಿಲ್ಲೆಗಳ ಕಾರ್ಖಾನೆಗಳಿಗೆ ರವಾನಿಸಲಾಗಿದೆ. ನಂತರ ಆಯಾ ಕಾರ್ಖಾನೆಯ ಫೀಲ್ಡ್‌ಮ್ಯಾನ್‌ಗಳು ಪರಿಶೀಲಿಸಿದ ನಂತರ ರೈತರು ಕಾರ್ಖಾನೆಗೆ ಕಬ್ಬು ಸಾಗಿಸಬೇಕು. ಆದರೆ ಇಲ್ಲಿಯವರೆಗೆ ಎಷ್ಟು ರೈತರು ಕಾರ್ಖಾನೆಗೆ ಕಬ್ಬು ಪೂರೈಸಿದ್ದಾರೆ ಎಂಬ ಮಾಹಿತಿ ಕಂಟ್ರೋಲ್‌ ರೂಂ ಸಿಬ್ಬಂದಿ ಬಳಿ ಇಲ್ಲ.

‘ಸಿಬ್ಬಂದಿ ಕೊರತೆಯಿಂದ ರೈತರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಬೇರೆ ಕೆಲಸಗಳ ನಡುವೆ ರೈತರ ಅರ್ಜಿ ಸ್ವೀಕಾರ ಮಾಡುತ್ತಿದ್ದೇವೆ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

***

ಮೈಷುಗರ್‌ ಆವರಣದಲ್ಲಿರುವ ಕಂಟ್ರೋಲ್‌ ರೂಂಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುವುದು. ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಸೂಚನೆ ನೀಡಲಾಗುವುದು

– ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)