ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆಗಾಗಿ ಹಾತೊರೆಯುತ್ತಿರುವ ಕಲಾಕೃತಿಗಳು

ಅಳಿವಿನಂಚಿನಲ್ಲಿ ರಾಷ್ಷ್ರಕೂಟರ ಕಾಲದ ದೇವಾಲಯ
Last Updated 14 ಮೇ 2018, 11:21 IST
ಅಕ್ಷರ ಗಾತ್ರ

ನರೇಗಲ್: ನಿರ್ಲಕ್ಷ್ಯದಿಂದಾಗಿ ಅಲ್ಲಲ್ಲಿ ಚದುರಿ ಬಿದ್ದು ಮಣ್ಣಾಗುತ್ತಿರುವ ಸುಂದರ ಶಿಲಾಶಾಸನಗಳು. ಸೆಳೆಯುವ ರಾಷ್ಷ್ರಕೂಟರ ಕಾಲದ ಕಲ್ಲಿನ ಕೆತ್ತನೆಗಳು. ಆಕರ್ಷಿಸುವ ಪುರಾತನ ಕಂಬಗಳು, ದೇವರ ಮೂರ್ತಿಗಳು. ರಕ್ಷಣೆಗಾಗಿ ಹಾತೊರೆಯುತ್ತಿರುವ ವಿಶಿಷ್ಟ ಶೈಲಿಯ ಕುರುಹುಗಳು, ಸುಂದರ ಕಲಾಕೃತಿಗಳು..!

ಇದು ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದ ಕುಷ್ಟಗಿ ಹಾಗೂ ಕಡತೋಟದ ಓಣಿಯ ಮಧ್ಯಭಾಗದಲ್ಲಿ ಮರೆಯಾಗಿರುವ ಐತಿಹಾಸಿಕ ಲಕ್ಷ್ಮೀ ನಾರಾಯಣ ದೇವಸ್ಥಾನದ ದುಃಸ್ಥಿತಿ.

ನರೇಗಲ್‌ ಪಟ್ಟಣದಲ್ಲಿನ ತ್ರಿಪುರಾಂಕೇಶ್ವರ, ಸೋಮೇಶ್ವರ, ಕಲ್ಮೇಶ್ವರ, ನಾರಾಯಣದೇವ, ಚಂದ್ರಮೌಳೇಶ್ವರ ಮುಂತಾದ ಸ್ಥಳಗಳಲ್ಲಿನ ಐತಿಹಾಸಿಕ ಶಾಸನಗಳು ಮತ್ತು ದೇವಾಲಯಗಳು ಅಳಿವಿನಂಚಿನಲ್ಲಿವೆ.

ಲಕ್ಷ್ಮೀ ನಾರಾಯಣ ದೇವಸ್ಥಾನದ ಹಿನ್ನೆಲೆ: ಉತ್ತರಾಭಿಮುಖವಾಗಿರುವ ಈ ದೇವಾಲಯವು ಪ್ರಾರಂಭದಲ್ಲಿ ಜೈನಬಸದಿಯಾಗಿತ್ತು. ಇಲ್ಲಿ 24 ತೀರ್ಥಂಕರರಿದ್ದ ಪೀಠಗಳಿವೆ. ದೇವರ ಗುಡಿಯು ವಿಶಾಲವಾದ ರಾಷ್ಟ್ರಕೂಟರ ಶೈಲಿಯ ಮೂಲ ರಚನೆಯಿದ್ದು ಗರ್ಭಗೃಹವು ಚೌಕಾಕಾರವಾಗಿದ್ದು ಒಳಗೆ ಜೈನ ಲಕ್ಷಣವಿರುವ ಪೀಠದ ಮೇಲೆ ಶಿವಲಿಂಗವಿದೆ.

ನವರಂಗದಲ್ಲಿ ಸರಳವಾದ ರಾಷ್ಟ್ರಕೂಟ ಶೈಲಿಯ ಕಲ್ಲಿನ ಕಂಬಗಳಿವೆ. ಸಭಾಮಂಟಪದಲ್ಲಿ ನಕ್ಷತ್ರಾಕಾರದ ಹಾಗೂ ಕಮಲಾಕಾರದ 30 ಕಂಬಗಳಿವೆ. ಪ್ರತಿ ಎರಡು ಕಂಬಗಳಿಗೆ ಕೆತ್ತನೆಯ ಶೈಲಿ ಬದಲಾಗುತ್ತಾ ಹೋಗುತ್ತದೆ. ಇದು ರಾಷ್ಟ್ರಕೂಟರ ದೊರೆ ಮೂರನೆ ಕೃಷ್ಣನ ರಾಣಿ ಪದ್ಧಬ್ಬರಸಿಯಿಂದ ನಿರ್ಮಾಣವಾಗಿರುವುದರ ಕುರಿತು ಉಲ್ಲೇಖಗಳಿವೆ. ಆದರೆ ನರೇಗಲ್‌ನ ಕೆಲ ಶಾಸನಗಳ ಪ್ರಕಾರ ಕಲ್ಯಾಣದ ಚಾಲುಕ್ಯರ ಎರಡನೆ ದೊರೆ ಜಯಸಿಂಹ ಆಡಳಿತಾವಧಿಯಲ್ಲಿ ತಿಪ್ಪಣ್ಣ ದಂಡನಾಯಕನ ಕಾಲದಲ್ಲಿ ಈ ಪಟ್ಟಣದಲ್ಲಿ ದೇವಸ್ಥಾನಗಳು ನಿರ್ಮಾಣವಾಗಿರುವ ಪ್ರತೀತಿ ಇದೆ. ನರೇಗಲ್‌ ಪ್ರಾಚೀನ ವಿದ್ಯಾ ಕೇಂದ್ರ ಹಾಗೂ ಕೃಷಿ ಕೇಂದ್ರವಾಗಿ ಪ್ರಸಿದ್ಧಿ ಪಡೆದ ಅಗ್ರಹಾರವಾಗಿತ್ತು ಎಂಬ ಪ್ರತೀತಿಯೂ ಇದೆ ಎಂದು ಅರ್ಚಕ ಕೃಷ್ಣ ಗ್ರಾಮಪುರೋಹಿತ್ ತಿಳಿಸಿದರು.

ಈ ದೇವಸ್ಥಾನದ ದಕ್ಷಿಣದ ಗರ್ಭಭಾಗದಲ್ಲಿ ಸೋಮೇಶ್ವರ ಮೂರ್ತಿ, ಪಶ್ಚಿಮದಲ್ಲಿ ನಾರಾಯಣ ನಿಂತಿರುವ ಹಾಗೂ ಲಕ್ಷ್ಮೀ ಕುಂತಿರುವ ಮೂರ್ತಿಗಳು, ಪೂರ್ವಕ್ಕೆ ಈಶ್ವರನ ಮೂರ್ತಿಗಳಿವೆ. ಪೂರ್ವ ಹಾಗೂ ಪಶ್ಚಿಮದಲ್ಲಿ ಎರಡು ಚಿಕ್ಕ ಕೊಣೆಗಳು ಇದ್ದು ಅವು 8X10 ಸೈಜ್‌ನ ಗುಹೆಗಳನ್ನು ಹೊಂದಿವೆ. ಪೂರ್ವದ ಗುಹೆ ಕಲ್ಮೇಶ್ವರ ಹಾಗೂ ಪಶ್ಚಿಮದ ಗುಹೆ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸುರಂಗಮಾರ್ಗ ಹೊಂದಿವೆ ಎಂಬ ನಂಬಿಕೆ ಇದೆ. ಕೆಲ ವರ್ಷಗಳ ಹಿಂದೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿಗರು ಅದರ ಬಾಗಿಲನ್ನು ಒಡೆದು ತೆರೆದಿದ್ದಾರೆ. ಇಲ್ಲಿ ನಿಧಿ ಆಸೆಗಾಗಿ ಮೂರ್ತಿಗಳನ್ನು, ಶಿಲಾಶಾಸನಗಳನ್ನು ವಿಘ್ನಗೊಳಿಸಿರುವುದರಿಂದ ಐತಿಹಾಸಿಕ ದೇವಸ್ಥಾನ ಹಾಗೂ ಸುಂದರ ಕಲಾಕೃತಿಗಳು ಅಳವಿನಂಚಿನಲ್ಲಿವೆ ಎಂದು ಅರ್ಚಕರು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ದೇವಸ್ಥಾನದ ಹೊರಮೈ ಗೋಡೆ ಸಂಪೂರ್ಣವಾಗಿ ಶಿಥಿಲಗೊಂಡಿದೆ. ದೇವಸ್ಥಾನದ ಛಾವಣಿ ಕುಸಿದಿದ್ದು, ಹಿಂಭಾದ ಗೊಡೆಯೂ ಬಿದ್ದಿದೆ. ಛಾವಣಿಯಿಂದ ಮಣ್ಣು ಬೀಳುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ದೇವಸ್ಥಾನದ ತುಂಬಾ ತುಂಬಿಕೊಳ್ಳುತ್ತದೆ.

ದೇವಸ್ಥಾನದ ಗೊಡೆಗಳು ಕುಸಿದಿರುವುದರಿಂದ ಅಕ್ಕ ಪಕ್ಕದಲ್ಲಿನ ಮನೆಯವರಿಗೆ ಜೀವ ಭಯ ಕಾಡುತ್ತಿದೆ. ಇದರ ಸಮೀಪ ಆಟವಾಡಲು ಮಕ್ಕಳನ್ನೂ ಬಿಡದಂತಾಗಿದೆ.

ರಾಜ ಮನೆತನಗಳ ವೈಭವ ಸಾರುವ ಅಪ್ರತಿಮ ಐತಿಹಾಸಿಕ ದೇವಾಲಯ ಪಾಳು ಬಿದ್ದಿರುವುದಕ್ಕೆ ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯ ಕಾರಣವಾಗಿದೆ.

ಆಯ್ಕೆಯಾಗುವ ಜನಪ್ರತಿನಿಧಿಗಳು, ಅಧಿಕಾರಿಗಳು ಮುತುವರ್ಜಿ ವಹಿಸಿ ಜೀರ್ಣೋದ್ಧಾರಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರಾದ ಉಮೇಶ ಕುಷ್ಟಗಿ, ಕಲ್ಲಪ್ಪ ಹುಯಿಲ್‌ಗೋಳ, ಚನ್ನಬಸಪ್ಪ ಮಾಳವಾಡ, ಅಂದಪ್ಪ ತೋಟಗೇರ, ಸಂಗಪ್ಪ ಕಾಮನಕೇರಿ ಆಗ್ರಹಿಸಿದ್ದಾರೆ.

ಕೆರೆಯಲ್ಲಿ ಸಿಕ್ಕ ಸಿಂಹದ ಮೂರ್ತಿ: ಈಚೆಗಷ್ಟೇ ಪಟ್ಟಣದ ಹಿರೇಕೆರೆಯಲ್ಲಿ ಗರಸು ತೆಗೆಯುತ್ತಿರುವಾಗ ಜೆಸಿಬಿ ಯಂತ್ರಕ್ಕೆ ಮಲಗಿರುವ ಸಿಂಹದ ಕಲ್ಲಿನ ಮೂರ್ತಿ ಪತ್ತೆಯಾಗಿತ್ತು. ಕೆರೆಯ ಹೂಳು ಸಂಪೂರ್ಣವಾಗಿ ತೆಗೆಸಿದರೆ ಮಣ್ಣಿನಲ್ಲಿ ಅಡಗಿರುವ ಕಲ್ಯಾಣ ಚಾಲುಕ್ಯರ ಕಾಲದ ದೇವಸ್ಥಾನದ ಅವಶೇಷಗಳು ಪತ್ತೆಯಾಗಬಹುದು.

ಇದು ಐತಿಹಾಸಿಕ ಕೆರೆಯಾಗಿದ್ದರಿಂದ ಸೋಮೇಶ್ವರ ದೇವಸ್ಥಾನಕ್ಕೆ ಒಳ ಸಂಪರ್ಕ ಇರಬಹುದು ಎಂಬ ಸಂಶಯವಿದೆ. ಆದ್ದರಿಂದ ಪಟ್ಟಣದಲ್ಲಿ ಐತಿಹಾಸಿಕ ಹಿನ್ನೆಲೆಯುವುಳ್ಳ ಸ್ಥಳಗಳ ಹಾಗೂ ಕೆರೆಯ ಬಗ್ಗೆ ಅಧ್ಯಯನ ನಡೆಸುವ ಅಗತ್ಯವಿದೆ ಎಂಬುದು ಜನತೆಯ ಆಶಯವಾಗಿದೆ.

**
ರಾಷ್ಟ್ರಕೂಟರ ಕುರುಹು ಇರುವ ಐತಿಹಾಸಿಕ ದೇವಾಲಯ ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿದೆ. ದೇವಸ್ಥಾನ ಪಾಳು ಬಿದ್ದಿರುವುದಕ್ಕೆ ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯ ಕಾರಣ
- ಲಕ್ಷ್ಮಣ ಗ್ರಾಮಪುರೋಹಿತ್, ನಿವೃತ್ತ ಶಿಕ್ಷಕ

ಚಂದ್ರು ಎಂ. ರಾಥೋಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT