ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಮಡಿಲು ತುಂಬಿದ ಮಹಿಳೆಯರು

ಮದ್ದೂರು ತಾಲ್ಲೂಕಿನಲ್ಲಿ ಬಿರುಸಿನ ಪ್ರಚಾರ ನಡೆಸಿದ ಪಕ್ಷೇತರ ಅಭ್ಯರ್ಥಿ; ಆರತಿ ಮಾಡಿ ಸ್ವಾಗತ
Last Updated 29 ಮಾರ್ಚ್ 2019, 17:51 IST
ಅಕ್ಷರ ಗಾತ್ರ

ಕೊಪ್ಪ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಕೊಪ್ಪ ಭಾಗದಲ್ಲಿ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.

ರೈತ ಸಂಘ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬಂಡಾಯ ಕಾರ್ಯಕರ್ತರು ಪಟಾಕಿ ಸಿಡಿಸಿ, ಬೆಲ್ಲದ ಆರತಿ ಮಾಡಿ, ಹೂವಿನ ಹಾರ ಹಾಕಿ, ತಮಟೆ ನಗಾರಿಗಳೊಂದಿಗೆ ಸಂಭ್ರಮದಿಂದ ಸುಮಲತಾ ಅವರನ್ನು ಸ್ವಾಗತಿಸಿದರು. ಮರಳಿಗ ಗ್ರಾಮದ ಮಹಿಳೆಯರು ಸುಮಲತಾ ಅವರಿಗೆ ಮಡಿಲು ಅಕ್ಕಿ ತುಂಬಿ ಹರಸಿ ಆಶೀರ್ವದಿಸಿದರು.

ಸಮೀಪದ ಮರಳಿಗ ಗ್ರಾಮದಲ್ಲಿ ಮಾತನಾಡಿದ ಸುಮಲತಾ, ‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೂರು ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಹಿಂಬಾಗಿಲಿನ ರಾಜಕಾರಣ ಮಾಡುತ್ತಿದ್ದಾರೆ. ನಾನು ಚುನಾವಣೆಗೆ ನಿಲ್ಲುತ್ತೇನೆ ಎಂದು ಘೋಷಣೆ ಮಾಡಿದ ದಿನದಿಂದ ಒಂದಲ್ಲ ಒಂದು ಅವಮಾನ, ಕುತಂತ್ರ ಮಾಡುತ್ತಿದ್ದಾರೆ. ಮಹಿಳೆಯಾದ ನನ್ನನ್ನು ಗುರಿಯಾಗಿಟ್ಟುಕೊಂಡು ಜರಿಯುತ್ತಿದ್ದಾರೆ’ ಎಂದು ಹೇಳಿದರು.

‘ನಾನು ದೊಡ್ಡ ಮಟ್ಟದ ಸವಾಲು ಸ್ವೀಕರಿಸಿದ್ದೇನೆ. ಈ ಸವಾಲಿನಲ್ಲಿ ಗೆಲ್ಲಲು ನಿಮ್ಮ ಆಶೀರ್ವಾದ, ಪ್ರೀತಿ, ಆರೈಕೆ ಬೇಕಾಗಿದೆ. ನಿಮ್ಮನ್ನು ನಂಬಿಕೊಂಡೇ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನನಗೆ ರೈತ ಸಂಘ, ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ. ಜಿಲ್ಲೆಯ ಜನತೆ ಈಗ ತೋರುತ್ತಿರುವ ಪ್ರೀತಿಯನ್ನು ಏ. 18 ರಂದು ನಡೆಯುವ ಚುನಾವಣೆಯಲ್ಲಿ ತೋರಿಸಬೇಕು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಅಂಬರೀಷ್‌ ಅವರ ಅಭಿಮಾನ, ಜಿಲ್ಲೆಯ ಸ್ವಾಭಿಮಾನವನ್ನು ದೇಶಕ್ಕೆ ತೋರಿಸಬೇಕು’ ಎಂದರು.

‘ನನ್ನ ಪರ ಕೆಲಸ ಮಾಡುತ್ತಿರುವ ಮುಖಂಡರನ್ನು ಗುರಿ ಮಾಡುತ್ತಿದ್ದಾರೆ. ದರ್ಶನ್, ಯಶ್ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಮಹಿಳೆಯರ ಬಗ್ಗೆ ಜೆಡಿಎಸ್ ನಾಯಕರಿಗೆ ಸ್ಪಲ್ಪವಾದರೂ ಗೌರವವಿದೆಯೇ ಎಂಬ ಸಂಶಯ ಮೂಡುತ್ತಿದೆ. ನನ್ನ ಮುಖದಲ್ಲಿ ನೋವು ಕಾಣುತ್ತಿಲ್ಲವಂತೆ, ನನ್ನ ನೋವನ್ನು ನಾನು ಪ್ರದರ್ಶನ ಮಾಡಿಕೊಳ್ಳುತ್ತಿಲ್ಲ. ನನ್ನ ನೋವು ಅವಮಾನಗಳನ್ನು ಜನರಿಗಾಗಿ ಸಹಿಸಿಕೊಂಡಿದ್ದೇನೆ’ ಎಂದರು.

ಹೋಬಳಿಯ ಚಾಪುರದೊಡ್ಡಿ, ಶಂಕರಪುರ, ಬೆಸಗರಹಳ್ಳಿ ಅಡ್ಡರಸ್ತೆ, ಪಣ್ಣೆದೊಡ್ಡಿ ಗೇಟ್, ಮರಳಿಗ, ಗುಡಿದೊಡ್ಡಿ, ಕೋಣಸಾಲೆ, ಗೂಳೂರು, ಮೂಡಲದೊಡ್ಡಿ, ಬಿದರಕೋಟೆ, ನಂಬಿನಾಯಕನಹಳ್ಳಿ, ಆಬಲವಾಡಿ, ಕೊಪ್ಪ ಸೇರಿದಂತೆ ಇತರ ಕಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಗುಡಿದೊಡ್ಡಿ ಗ್ರಾಮದಚನ್ನಕೇಶ್ವರ ಬೀರೇಶ್ವರ ಸ್ವಾಮಿಯ ದೇಗುಲದಲ್ಲಿ ಸುಮಲತಾ ಅಂಬರೀಷ್‌ ಮತ್ತು ಅಭಿಷೇಕ್ ಅವರು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಆಶಾಗೋಪಿ, ಗ್ರಾ.ಪಂ. ಸದಸ್ಯರಾದ ಸಹಾನಾ ನಂಜೇಶ್, ಗೋವಿಂದು, ಪುಟ್ಟಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಬಿ. ವಿವೇಕಾನಂದ, ಮುಖಂಡರಾದ ಯೋಗಾನಂದ, ಮರಳಿಗ ಸ್ವಾಮಿ, ಜವಹರ್ ಲಾಲ್, ಕೊಪ್ಪ ದಿವಾಕರ್, ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಅಶೋಕ್, ಉಮೇಶ್ ಇದ್ದರು.

ಜೆಡಿಎಸ್‌ ಮುಖಂಡರ ಬೆಂಬಲ

ಕೊಪ್ಪ ಭಾಗದಲ್ಲಿ ನಡೆದ ಸುಮಲತಾ ಪ್ರಚಾರದಲ್ಲಿ ಕೆಲ ಜೆಡಿಎಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜೆಡಿಎಸ್‌ ಮುಖಂಡರ ಮಾತುಗಳಿಂದ ಬೇಸತ್ತು ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವುದಾಗಿ ಅವರು ತಿಳಿಸಿದರು. ಬೆಸಗರಹಳ್ಳಿ ಅಡ್ಡರಸ್ತೆಯಲ್ಲಿ ಸುಮಲತಾ ಅವರಿಗೆ ಹಾರ ಹಾಕಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT