ಭಾನುವಾರ, ಅಕ್ಟೋಬರ್ 20, 2019
27 °C
ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮ

ಟೀಕೆಗಳಿಗೆ ಉತ್ತರ ಕೊಡಲು ಸಮಯವಿಲ್ಲ: ಸಂಸದೆ ಎ. ಸುಮಲತಾ ತಿರುಗೇಟು

Published:
Updated:
Prajavani

ಶ್ರೀರಂಗಪಟ್ಟಣ: ‘ರಾಜಕೀಯ ಪ್ರೇರಿತ ಟೀಕೆಗಳಿಗೆ ಪ್ರತಿಕ್ರಿಯೆ ಕೊಡುತ್ತ ಸಮಯ ವ್ಯರ್ಥ ಮಾಡಲು ನನ್ನಲ್ಲಿ ಸಮಯ ಇಲ್ಲ’ ಎಂದು ಸಂಸದೆ ಎ. ಸುಮಲತಾ ಹೇಳಿದರು.

ಇಲ್ಲಿನ ಶ್ರೀರಂಗ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಸಿರಿ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಜಿಲ್ಲೆಯ ಜನರಿಗೆ ಮಾತ್ರ ಜವಾಬ್ದಾರಳು. ರಾಜಕಾರಣಿಗಳ ಟೀಕೆಗಳಿಗೆ ಜನರು ತಲೆ ಕೆಡಿಸಿಕೊಳ್ಳಬಾರದು. ಮಾಧ್ಯಮದವರು ಟೀಕೆಗಳಿಗೆ ಪ್ರತಿಕ್ರಿಯೆ ಕೇಳಿದಾಗ ಬೇಜಾರಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿದ್ದೇನೆ. ಪಾರ್ಲಿಮೆಂಟ್‌ನಲ್ಲಿ ಜನರ ದನಿಯಾಗಿದ್ದೇನೆ. ಈ ಮೊದಲು ಇದ್ದ ಸಂಸದರು ಏಕೆ ಜಿಲ್ಲೆಯ ಬಗ್ಗೆ ದನಿ ಎತ್ತಲಿಲ್ಲ’ ಎಂದು ಅವರು ಪ್ರಶ್ನಿಸಿದರು.

‘ನಾನು ಅಂಬರೀಷ್‌ ಅವರ ಪತ್ನಿ. ಅಂಬರೀಷ್‌ ಅವರನ್ನು 3 ಬಾರಿ ಸಂಸದರನ್ನಾಗಿ, ಒಮ್ಮೆ ಸಚಿವರನ್ನಾಗಿ ಮಂಡ್ಯ ಜನರು ಆಯ್ಕೆ ಮಾಡಿದ್ದಾರೆ. ಸದ್ಯ ಜಿಲ್ಲೆಯ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರು ಕಷ್ಟದಿಂದ ಪಾರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

‘ಶ್ರೀರಂಗಪಟ್ಟಣವನ್ನು ದೇಶದ ಅತ್ಯುತ್ತಮ ಪ್ರವಾಸಿ ತಾಣ ಮಾಡುವ ಆಸೆ ನನ್ನದು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದು, ಅವರ ಜತೆಗೂಡಿ ಶ್ರಮಿಸುತ್ತೇನೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್‌, ಹೆಚ್ಚುವರಿ ಡಿಸಿ ಟಿ. ಯೋಗೇಶ್‌, ಉಪ ವಿಭಾಗಾಧಿಕಾರಿ ಶೈಲಜಾ ಇದ್ದರು.

ಶ್ರೀಹರ್ಷ ಹಾಡಿನ ಮೋಡಿ
ಹಿನ್ನೆಲೆ ಗಾಯಕ ಶ್ರೀ ಹರ್ಷ ಮತ್ತು ತಂಡ ‘ತರವಲ್ಲ ತಗಿ ನಿನ್ನ...’, ‘ತಾಳಿ ಕಟ್ಟುವ ಶುಭ ವೇಳೆ...’, ‘ಏರಿ ಮೇಲೆ ಏರಿ...’, ‘ಸಾಗರಿಯೇ ಸಾಗರಿಯೇ...’, ‘ಕೇಳದೆ ನಿಮಗೀಗ....’, ‌‘ಓ ಗೆಳೆಯಾ ಜೀವದ್ಗೆಳೆಯ...’ ಸೇರಿದಂತೆ ವಿವಿಧ ಹಾಡುಗಳನ್ನು ಹಾಡಿದ್ದು, ಪ್ರೇಕ್ಷಕರ ಮನಗೆದ್ದಿತು.

Post Comments (+)