ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದಾಗ 2 ಬಾರಿ ಹಲ್ಲೆಗೆ ಯತ್ನ: ಸುಮಲತಾ ಆರೋಪ

ಮೋದಿ ನಾಯಕತ್ವದಲ್ಲಿ ಸ್ವಚ್ಛಮಂಡ್ಯ ಅಭಿಯಾನ, ಜೆಡಿಎಸ್‌ ಮುಖಂಡರ ವಿರುದ್ಧ ಸುಮಲತಾ ವಾಗ್ದಾಳಿ
Last Updated 10 ಮಾರ್ಚ್ 2023, 14:14 IST
ಅಕ್ಷರ ಗಾತ್ರ

ಮಂಡ್ಯ: ‘ನಾನು ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದಾಗ ನನ್ನ ಮೇಲೆ 2 ಬಾರಿ ಹಲ್ಲೆ ಯತ್ನಗಳು ನಡೆದಿವೆ. ಕೆ.ಆರ್‌.ನಗರದಲ್ಲಿ ಒಮ್ಮೆ, ಶ್ರೀರಂಗಪಟ್ಟಣದಲ್ಲಿ ಇನ್ನೊಮ್ಮೆ ಹಲ್ಲೆಗೆ ಯತ್ನ ಮಾಡಿದ್ದರು’ ಎಂದು ಸುಮಲತಾ ಆರೋಪಿಸಿದರು.

‘ಇಷ್ಟೆಲ್ಲಾ ಸವಾಲುಗಳನ್ನು ಎದುರಿಸಿ ನಾನು ಮುಂದೆ ಬಂದಿದ್ದೇನೆ. ಮುಂದೆಯೂ ನನ್ನ ಹಾದಿ ಸವಾಲಿನಿಂದ ಕೂಡಿದೆ’ ಎಂದರು.

ಮಂಡ್ಯ ಶುದ್ಧೀಕರಣಕ್ಕಾಗಿ ಬಿಜೆಪಿಗೆ ಬೆಂಬಲ

‘ರಾಜಕೀಯವಾಗಿ ಜಿಲ್ಲೆಯ ವಾತಾವರಣ ಕಲುಷಿತಗೊಂಡಿದೆ, ಜಿಲ್ಲೆಯನ್ನು ಭದ್ರಕೋಟೆ ಮಾಡಿಕೊಂಡವರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮಂಡ್ಯ ಶುದ್ಧೀಕರಣಗೊಳಿಲು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ’ ಎಂದು ಸಂಸದೆ ಸುಮಲತಾ ಶುಕ್ರವಾರ ಘೋಷಣೆ ಮಾಡಿದರು.

‘ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿ, ಆದರೆ ಚುನಾವಣೆ ನಂತರವೂ ಸ್ಥಳೀಯ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದು ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ. ಜಿಲ್ಲೆಯ ಹಿತವನ್ನು ಕಡೆಗಣಿಸಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಜಿಲ್ಲೆಯನ್ನು ಭದ್ರಕೋಟೆ ಎನ್ನುವವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಇವರ ವಿರುದ್ಧ ಹೋರಾಟ ಮಾಡಲು ಬಿಜೆಪಿ ಜೊತೆ ನಿಲ್ಲುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜಕೀಯ ಪಕ್ಷ ಸೇರುವ ನಿರ್ಧಾರವನ್ನು ನಾನು ಮೊದಲೇ ತೆಗೆದುಕೊಳ್ಳಬಹುದಾಗಿತ್ತು, ಆದರೆ ಸ್ವಾರ್ಥಿಯಾಗಲು ಇಷ್ಟವಿರಲಿಲ್ಲ. ಬಿಜೆಪಿ ಬೆಂಬಲಿಸುವ ನಿರ್ಧಾರ ನನ್ನ ಭವಿಷ್ಯಕ್ಕಾಗಿ ಅಲ್ಲ. ಇದು ಮಂಡ್ಯ ಜಿಲ್ಲೆಯ ಭವಿಷ್ಯಕ್ಕಾಗಿ ಕೈಗೊಂಡ ನಿರ್ಧಾರವಾಗಿದೆ. ಎಂಎಲ್‌ಸಿಯಾಗುವ ಅವಕಾಶ ಒಲಿದು ಬಂದಿತ್ತು. ಆದರೆ ಸುಲಭದ ಹಾದಿಯನ್ನು ಬಿಟ್ಟ ಕಷ್ಟದ ಹಾದಿ ಆಯ್ಕೆ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ’ ಎಂದರು.

‘ಮುಂದೆ ನನ್ನ ಹಾದಿಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ಯೋಚಿಸಿಯೇ ನಾನು ಬಿಜೆಪಿ ಬೆಂಬಲಿಸುವ ನಿರ್ಧಾರ ಮಾಡಿದ್ದೇನೆ. ಹಲವು ಪಕ್ಷಗಳಿಂದ ನನಗೆ ಆಹ್ವಾನ ಬಂದಿತ್ತು, ದೆಹಲಿ ಮಟ್ಟದಲ್ಲೂ ಮಾತುಕತೆ ನಡೆಸಿದ್ದರು. ಆದರೆ ಅಂಬರೀಷ್‌ ಅವರ ಹೆಸರು ಕಾಪಾಡುವುದು ನನ್ನ ಜವಾಬ್ದಾರಿಯಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡುವ ನಾಯಕತ್ವ ನನಗೆ ಬೇಕಿತ್ತು. ಅಂತಹ ನಾಯಕತ್ವ ನರೇಂದ್ರ ಮೋದಿ ಅವರಲ್ಲಿದ್ದು ಬಿಜೆಪಿ ಬೆಂಬಲಿಸುತ್ತಿದ್ದೇನೆ’ ಎಂದರು.

‘ಪ್ರಧಾನಮಂತ್ರಿ ಸ್ವಚ್ಛಭಾರತ ಅಭಿಯಾನ ನಡೆಸಿದರು. ಅದೇ ರೀತಿಯಾಗಿ ಮಂಡ್ಯ ರಾಜಕಾರಣವನ್ನು ಶುದ್ಧಗೊಳಿಸುವ ಸ್ವಚ್ಛ ಮಂಡ್ಯ ಅಭಿಯಾನ ನಡೆಸುವ ಅವಶ್ಯಕತೆ ಇದೆ. ಅಂಬರೀಷ್‌ ಇದ್ದ ಪಕ್ಷಕ್ಕೆ ನಾನು ಹೋಗಿದ್ದರೆ ಎಲ್ಲವೂ ಸುಗಮವಾಗುತ್ತಿತ್ತು. ಆದರೆ ಮಂಡ್ಯ ಅಭಿವೃದ್ಧಿಯ ದೃಷ್ಟಿಯಿಂದ ನಾನು ಬಿಜೆಪಿ ಬೆಂಬಲಿಸುವುದು ಸರಿ ಎನಿಸಿದೆ’ ಎಂದರು.

‘ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ, ನನ್ನ ಹಾದಿ ಸುಗಮವಾಗಿರಲಿಲ್ಲ. ಹಾಲಿ ಮುಖ್ಯಮಂತ್ರಿ, ಅವರ ಮಗ, ಸಚಿವ ಸಂಪುಟವನ್ನೇ ಎದುರು ಹಾಕಿಕೊಂಡು ಗೆದ್ದು ಬಂದೆ. ನನಗೆ ಭವಿಷ್ಯದ ಯೋಚನೆ ಇರಲಿಲ್ಲ, ಆದರೆ ಜಿಲ್ಲೆಯ ಜನರು ಅಂಬರೀಷ್‌ ಅವರಂತೆಯೇ ನನಗೂ ಆಶೀರ್ವಾದ ಮಾಡಿದರು. ಆದರೂ ಇಲ್ಲಿಯ ರಾಜಕಾರಣಿಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು, ಸಂಬಂಧವೇ ಇಲ್ಲದ ವಿಚಾರಗಳನ್ನು ಎಳೆದು ತಂದು ನನ್ನನ್ನು ನಿಂದಿಸಿದರು’ ಎಂದರು.

‘ಸಂಸದೆಯಾದ ನಂತರ ಸ್ಥಳೀಯ ರಾಜಕಾರಣಿಗಳು ಸಭೆ ನಡೆಸಲು ಬಿಡಲಿಲ್ಲ, ಅವುಗಳು ರಾಜಕೀಯ ಸಭೆ ಅಲ್ಲ, ಅಭಿವೃದ್ಧಿ ಸಭೆ ನಡೆಸಲೂ ಬಿಡಲಿಲ್ಲ. ಅದರ ನಡುವೆಯೂ ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಮಿತಿ ಸಭೆಗಳನ್ನು ನಡೆಸಿದೆ. ಭ್ರಷ್ಟಾಚಾರದ ವಿರುದ್ಧ ಪ್ರಶ್ನೆ ಮಾಡುತ್ತಿರುವ ಕಾರಣ ಅವರಿಗೆ ಭಯ ಕಾಡುತ್ತಿದೆ. ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಕೇಳುವ ಸಮಯ ಈಗ ಬಂದಿದೆ’ ಎಂದರು.

‘ಜಲಜೀವನ ಮಿಷನ್‌, ಅಮೃತ್‌ ಯೋಜನೆ, ಪ್ರಧಾನ ಮಂತ್ರಿ ಗಾಮೀಣ ರಸ್ತೆ ಯೋಜನೆ, ಕೇಂದ್ರೀಯ ವಿದ್ಯಾಲಯ, ಆಯುಷ್ಮಾನ್‌ ಭಾರತ್‌, ತಾಯಿ ಮಕ್ಕಳ ಆಸ್ಪತ್ರೆ, ಎಸ್‌ಸಿಪಿ–ಟಿಎಸ್‌ಪಿ ಯೋಜನೆಗೆ ಹಣ ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳು ಕಳೆದ 4 ವರ್ಷಗಳಲ್ಲಿ ನಡೆದಿವೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ದೇಶದಲ್ಲೇ ಮೊದಲು 4 ತಿಂಗಳ ನನ್ನ ವೇತನವನ್ನು ಪ್ರಧಾನಮಂತ್ರಿ ನಿಧಿಗೆ ಅರ್ಪಿಸಿದ್ದೇನೆ. ಎಂ.ಪಿ ಅನುದಾನ ಬಳಕೆಯಲ್ಲಿ ರಾಜ್ಯದಲ್ಲೇ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಪಕ್ಷೇತರ ಎಂಪಿಯಾಗಿ ನಾನು ಇಷ್ಟೆಲ್ಲಾ ಮಾಡಿದ್ದೇನೆ, ನೀವು ಜಿಲ್ಲೆಗೆ ಏನು ಮಾಡಿದ್ದೀರಿ’ ಎಂದು ಜೆಡಿಎಸ್‌ ಶಾಸಕರನ್ನು ಕೆಣಕಿದರು.

‘ಸ್ಥಳೀಯ ಶಾಸಕರು ಮಾಡುವ ಕೆಲಸಗಳನ್ನೂ ನಾನೇ ಮಾಡಿದ್ದೇನೆ. ಅಂಬರೀಷ್‌ ಅವರು ಸಚಿವರಾಗಿದ್ದಾಗ ಆರಂಭಿಸಿದ್ದ ಹಾಲಹಳ್ಳಿ ಕೊಳೆಗೇರಿಯ ನಿವಾಸಿಗಳಿಗೆ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಶ್ರಮಪಟ್ಟೆ. ಆ ಮೂಲಕ ಅಂಬರೀಷ್‌ ಕನಸು ನನಸು ಮಾಡಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಬಿಜೆಪಿ ಜೊತೆ ನಿಲ್ಲುತ್ತೇನೆ’ ಎಂದರು.

***

ಬೆಂಬಲಿಗರಿಗೆ ಮೋಸ ಮಾಡಲ್ಲ

‘ಲೋಕಸಭಾ ಚುನಾವಣೆ ವೇಳೆ ನನ್ನ ಜೊತೆ ನಿಂತಿದ್ದ ನನ್ನ ಬೆಂಬಲಿಗರಿಗೆ, ಅಂಬರೀಷ್‌ ಅಭಿಮಾನಿಗಳಿಗೆ ನಾನು ಮೋಸ ಮಾಡುವುದಿಲ್ಲ. ಅವರೆಲ್ಲರ ಹಿತ ಕಾಪಾಡುವುದು ನನ್ನ ಪ್ರಥಮ ಆದ್ಯತೆಯಾಗಿದೆ’ ಎಂದು ಸುಮಲತಾ ಹೇಳಿದರು.

‘ನನ್ನನ್ನು ರಾಜಕಾರಣಕ್ಕೆ ಕರೆತಂದ ಬೆಂಬಲಿಗರನ್ನು ಬಿಟ್ಟು ನಾನು ಹೋಗುತ್ತಿಲ್ಲ. ಅವರ ಜೊತೆ ಸದಾ ನಾನು ಇರುತ್ತೇನೆ. ಅಂಬರೀಷ್‌ ಅವರು ಪಕ್ಷಾತೀತ ನಾಯಕರಾಗಿದ್ದರು, ಅವರ ಹಾದಿಯಲ್ಲೇ ನಾನೂ ನಡೆಯುತ್ತೇನೆ’ ಎಂದರು.

**

ನನ್ನಿಂದಲೇ ಮೈಷುಗರ್‌...

‘ಸ್ಥಗಿತಗೊಂಡಿದ್ದ ಮೈಷುಗರ್‌ ಪುನಾರಂಭಗೊಳಿಸಲು ನಾನು ಹೋರಾಟ ನಡೆಸಿದ್ದೇನೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೆ. ಅವರು ಕಾರ್ಖಾನೆ ಆರಂಭಕ್ಕೆ ಭರವಸೆ ನೀಡಿದ್ದರು’ ಎಂದರು.

‘ಬಸವರಾಜ ಬೊಮ್ಮಾಯಿ ಅವರ ಮುಖ್ಯಮಂತ್ರಿಯಾದ ನಂತರ ಅವರಿಗೂ ಮನವಿ ಮಾಡಿದ್ದ. ಮನವಿಗೆ ಸ್ಪಂದಿಸಿದ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಮೈಷುಗರ್ ಪುನಶ್ಚೇತನಕ್ಕೆ ₹ 50 ಕೋಟಿ ಘೋಷಿಸಿದರು’ ಎಂದರು.

***

ಕಾಂಗ್ರೆಸ್‌ ವರಿಷ್ಠರ ಬೆಂಬಲ ಇಲ್ಲ

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜ್ಯ ಮುಖಂಡರ ಬೆಂಬಲ ನನಗೆ ಇರಲಿಲ್ಲ. ಸ್ಥಳೀಯ ಕಾಂಗ್ರೆಸ್‌ ಮುಖಂಡರಷ್ಟೇ ನನಗೆ ಬೆಂಬಲ ನೀಡಿದರು’ ಎಂದು ಸುಮಲತಾ ಹೇಳಿದರು.

‘ಕಾಂಗ್ರೆಸ್‌ ಕೂಡ ಅಂಬರೀಷ್‌ ಅವರಿಗೆ ಅನ್ಯಾಯ ಮಾಡಿದೆ, ಮಂತ್ರಿಸ್ಥಾನದಿಂದ ಅಂಬರೀಷ್‌ ಅವರನ್ನು ಕಿತ್ತು ಹಾಕಿತ್ತು’ ಎಂದು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT