ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಶಕ್ತಿ ತುಂಬುವುದೇ ಸಂಸದೆ ಸುಮಲತಾ ಬೆಂಬಲ? ವಿಶೇಷ ವರದಿ

ಲೋಕಸಭಾ ಚುನಾವಣೆ ವೇಳೆ ಇದ್ದ ಪ್ರಸಿದ್ಧಿ ಈಗಿಲ್ಲ, ಸಂಘಟನೆಯಲ್ಲೂ ಸಂಸದೆಯ ವಿಫಲ; ಆರೋಪ
Last Updated 13 ಮಾರ್ಚ್ 2023, 23:45 IST
ಅಕ್ಷರ ಗಾತ್ರ

ಮಂಡ್ಯ: ಸ್ವಾಭಿಮಾನದ ಪ್ರತೀಕ ಎಂದೇ ಗುರುತಿಸಿಕೊಂಡಿದ್ದ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವುದು ಜಿಲ್ಲೆಯಾದ್ಯಂತ ಚರ್ಚೆಯಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಬಿಜೆಪಿಗೆ ಎಷ್ಟು ಲಾಭ ತಂದುಕೊಡಲಿದ್ದಾರೆ ಎಂಬ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರದ ಪ್ರಮುಖ ನಿರ್ಧಾರ, ವಿವಿಧ ಕಾಯ್ದೆಗಳಿಗೆ ಸುಮಲತಾ ಬೆಂಬಲ ನೀಡುತ್ತಾ ಬಂದಿದ್ದು ಅವರು ಮಾನಸಿಕವಾಗಿ ಬಿಜೆಪಿಯ ಭಾಗವೇ ಆಗಿದ್ದರು. ಈಗ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ನೀಡಿರುವುದು ರಾಜಕೀಯ ಲೆಕ್ಕಚಾರವೇ ಹೊರತು ಬೇರೆನೂ ಅಲ್ಲ ಎಂಬುದು ರಹಸ್ಯವಾಗಿ ಉಳಿದಿಲ್ಲ.

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನಿಸುತ್ತಿರುವ ಬಿಜೆಪಿ ಮುಖಂಡರಿಗೆ ಸುಮಲತಾ ಸೇರ್ಪಡೆ ಸಂಜೀವಿನಿಯಾಗಿದೆ. ಹೊಂದಾಣಿಕೆ ಕಸರತ್ತು ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುವ ಉತ್ಸಾಹದಲ್ಲಿರುವ ಬಿಜೆಪಿ ಮುಖಂಡರಿಗೆ ಸುಮಲತಾ ಪ್ರಚಾರದಿಂದ ಶಕ್ತಿ ಬರುವುದು ನಿಶ್ಚಿತ. ಬಿಜೆಪಿ ಪರವಾದ ವಾತಾವರಣ ಸೃಷ್ಟಿಯಲ್ಲಿ ಸುಮಲತಾ ಸೇರ್ಪಡೆ ಅನುಕೂಲವಾಗುತ್ತದೆ. ಇದು ಕೇವಲ ಮಂಡ್ಯ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ವಾದ ಬಿಜೆಪಿ ವಲಯದಲ್ಲಿದೆ.

ಆದರೆ, ಸುಮಲತಾ ಅವರ ವರ್ಚಸ್ಸು ಜಿಲ್ಲೆಯಲ್ಲಿ ಮೊದಲಿನಂತಿದೆಯೇ ಎಂಬುದು ಪ್ರಶ್ನೆ. ಕ್ಷೇತ್ರದಲ್ಲಿ ತಮ್ಮದೇ ಆದ ಸಂಘಟನೆ ಕಟ್ಟುವಲ್ಲಿ ಅವರು ಸಂಪೂರ್ಣವಾಗಿ ವೈಫಲ್ಯ ಕಂಡಿದ್ದಾರೆ. ಅವರು ಜಿಲ್ಲೆಗೆ ಬಂದರೆ ಮೊದಲಿನಂತೆ ಅವರ ಹಿಂದೆ ಜನ ಬರುವುದಿಲ್ಲ, ಒಂದು ಗುಂಪಿನ ಸದಸ್ಯರಷ್ಟೇ ಅವರ ಹಿಂದಿರುತ್ತಾರೆ. ಲೋಕಸಭಾ ಚುನಾವಣೆ ಗೆದ್ದ ನಂತರ ಅವರು ಕ್ಷೇತ್ರಕ್ಕೆ ‘ಭೇಟಿ ಸಂಸದೆ’ಯಾಗಿ ಉಳಿದಿರುವುದೇ ಅವರ ಪ್ರಸಿದ್ಧಿ ಕುಗ್ಗಲು ಪ್ರಮುಖ ಕಾರಣ.

ಕಳೆದ ನಾಲ್ಕು ವರ್ಷಗಳಲ್ಲಿ ಒಂದು ದಿನವೂ ಜಿಲ್ಲೆಯಲ್ಲಿ ಅವರು ವಾಸ್ತವ್ಯ ಹೂಡಿಲ್ಲ. ಈ ಬಗ್ಗೆ ಜನರು ಸುಮಲತಾ ಅವರನ್ನು ಪ್ರಶ್ನಿಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಅವರು ಹಲವು ತಿಂಗಳು ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ, ಜನರು ಪ್ರಶ್ನೆ ಮಾಡಿದ ನಂತರವಷ್ಟೇ ಅವರು ಭೇಟಿ ಕೊಟ್ಟು ಹೋದರು.

ಲೋಕಸಭಾ ಚುನಾವಣೆಯಲ್ಲಿ ಸಣ್ಣ ಸಣ್ಣ ಸಮುದಾಯಗಳು, ರೈತ, ಕಾರ್ಮಿಕ, ದಲಿತ ಸಂಘಟನೆಗಳು ಅವರ ಜೊತೆಗೆ ನಿಂತಿದ್ದವು. ಸುಮಲತಾ ಅವರ ಪ್ರಸಿದ್ಧಿ ಉತ್ತುಂಗ ಸ್ಥಿತಿಯಲ್ಲಿತ್ತು, ಅದು ದೇಶದ ಗಮನವನ್ನೂ ಸೆಳೆದಿತ್ತು. ಅಂಬರೀಷ್‌ ಸಾವಿನ ಸಹಾನುಭೂತಿಯಿಂದ ಸುಮಲತಾ ಅವರನ್ನು ಪ್ರೀತಿಸುವವರ ಸಂಖ್ಯೆ ಅಸಂಖ್ಯಾತವಿತ್ತು.

ಆದರೆ, ಹಂತಹಂತವಾಗಿ ಸುಮಲತಾ ಅವರ ಪ್ರಸಿದ್ಧಿ ಕುಸಿದಿದೆ. ಮಂಡ್ಯ ಜಿಲ್ಲೆಯಿಂದ ಹೊರಗೆ ಅವರ ಪ್ರಸಿದ್ಧಿ ಈಗಲೂ ಹಿಂದಿನಂತೆಯೇ ಇರಬಹುದು, ಆದರೆ ಜಿಲ್ಲೆಯಲ್ಲಿ ಮಾತ್ರ ಅವರ ವರ್ಚಸ್ಸು ಕುಸಿದಿದೆ. ಅವರು ಬಿಜೆಪಿ ಬೆಂಬಲ ಘೋಷಣೆ ಮಾಡಿದ ವಿವಿಧ ಸಂಘಟನೆಗಳು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ‘ಮಂಡ್ಯ ಸ್ವಾಭಿಮಾನವನ್ನು ಸುಮಲತಾ ಬಿಜೆಪಿಗೆ ಮಾರಿಕೊಂಡರು’ ಎಂದೆಲ್ಲಾ ಆರೋಪಿಸಿವೆ.

‘ಮಂಡ್ಯದಲ್ಲಿ ನಿವೇಶನವಿದ್ದು ಮನೆ ಕಟ್ಟಿಸುವುದಾಗಿ ಸುಮಲತಾ ಚುನಾವಣೆ ವೇಳೆ ಹೇಳಿದ್ದರು. ಆದರೆ ಅವರು ಆ ಪ್ರಯತ್ನ ಮಾಡಲಿಲ್ಲ. ಮಂಡ್ಯದಲ್ಲಿ ಉಳಿಯುವ ಯಾವ ಆಸಕ್ತಿಯೂ ಅವರಿಗಿಲ್ಲ ಎಂಬುದು ಅವರ ನಡವಳಿಕೆಯಿಂದಲೇ ಬಹಿರಂಗವಾಗಿದೆ. ಹಿಂಬಾಲಕರು ಹೇಳಿದ್ದೇ ಅವರಿಗೆ ವೇದವಾಕ್ಯವಾಗಿದೆ, ಜನರ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತಿಲ್ಲ. ವೈಯಕ್ತಿಕ ಹಿತಕ್ಕಾಗಿ ಬಿಜೆಪಿಗೆ ಬೆಂಬಲಿಸಿದ್ದಾರೆ’ ಎಂದು ಕಾರ್ಮಿಕ ನಾಯಕಿ ಸಿ.ಕುಮಾರಿ ಆರೋಪಿಸಿದರು.

ಸುಮಲತಾ ವರ್ಚಸ್ಸಿನ ಕುಸಿತ ಗಮನಿಸಿದರೆ ಅವರಿಂದ ಜಿಲ್ಲಾ ಬಿಜೆಪಿಗೆ ಯಾವ ಲಾಭವೂ ಆಗದು, ಆದರೆ ಕ್ಷೇತ್ರದ ಹೊರಗೆ ಅವರ ಪ್ರಸಿದ್ಧಿ ಮೊದಲಿನಂತೆಯೇ ಇದ್ದು ಅದರಿಂದ ಬಿಜೆಪಿಗೆ ಲಾಭವಾಗಬಹುದು ಎಂದೇ ಬಣ್ಣಿಸಲಾಗುತ್ತಿದೆ.

****

ಸಂಸದೆ ‘ಒಬ್ಬಂಟಿ’ ಆಗಿದ್ದೇಕೆ?

ಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ ಸಂಸದೆ ಸುಮಲತಾ ‘ಕಳೆದ ನಾಲ್ಕು ವರ್ಷಗಳಿಂದ ನಾನು ಒಬ್ಬಂಟಿಯಾಗಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಲಕ್ಷಾಂತರ ಜನರು ವೋಟು ಹಾಕಿ ಗೆಲ್ಲಿಸಿದರೂ ಅವರು ಒಬ್ಬಂಟಿ ಹೇಗಾದರೂ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ.

‘ಅಂಬರೀಷ್‌ ಅವರಿಗೂ ಜಿಲ್ಲೆಯ ಜನರು ಸೋಲಿನ ರುಚಿ ತೋರಿಸಿದ್ದಾರೆ. ಸಂಸದೆ ಸುಮಲತಾ ವೈಯಕ್ತಿಕ ಹಿತಾಸಕ್ತಿ ಬಿಟ್ಟು ಜನಾಭಿಪ್ರಾಯ ಪರಿಗಣಿಸಬೇಕು’ ಎಂದು ವಕೀಲ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT