ಬುಧವಾರ, ನವೆಂಬರ್ 20, 2019
21 °C

'ಸುಮಲತಾರನ್ನು ಅಭ್ಯರ್ಥಿ ಮಾಡಿದ್ದೇ ಕಾಂಗ್ರೆಸ್‌'

Published:
Updated:

ಮಂಡ್ಯ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಲು ಕಾಂಗ್ರೆಸ್‌ ಮುಖಂಡರ ಬೆಂಬಲವೇ ಕಾರಣ. ನಾವೇ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆವು’ ಎಂದು ಕಾಂಗ್ರೆಸ್‌ ಮುಖಂಡ ಕೆ.ಬಿ.ಚಂದ್ರಶೇಖರ್‌ ಭಾನುವಾರ ಹೇಳಿದರು.

ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಹಾಲಿ ಸಂಸದರಾಗಿದ್ದ ಎಲ್‌.ಆರ್‌.ಶಿವರಾಮೇಗೌಡರಿಗೆ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ ಮುಖಂಡರು ಕೇಳಿಕೊಂಡೆವು. ಆದರೆ ಜೆಡಿಎಸ್‌ನವರು ಒಪ್ಪಲಿಲ್ಲ. ದೇವೇಗೌಡರೇ ಸ್ಪರ್ಧಿಸಲಿ, ಅತ್ಯಧಿಕ ಬಹುಮತದಿಂದ ಗೆಲ್ಲಿಸಿಕೊಡುತ್ತೇವೆ ಎಂದು ಕೇಳಿಕೊಂಡರೂ ಅವರು ಒಪ್ಪಲಿಲ್ಲ. ನಮ್ಮ ಮಾತು ಕೇಳದೆ ನಿಖಿಲ್‌ ಅವರನ್ನು ಅಭ್ಯರ್ಥಿ ಮಾಡಿದರು’ ಎಂದರು.


ಕಾಂಗ್ರೆಸ್‌ ಮುಖಂಡ ಕೆ.ಬಿ.ಚಂದ್ರಶೇಖರ್‌

‘ಕಾಂಗ್ರೆಸ್‌ ಮುಖಂಡರೆಲ್ಲರೂ ಕುಳಿತು ಚರ್ಚೆ ಮಾಡಿ ಸುಮಲತಾ ಅವರಿಗೆ ಬೆಂಬಲ ನೀಡುವ ನಿರ್ಧಾರ ಮಾಡಿದೆವು. ಸುಮಲತಾ ಅವರ ಗೆಲುವಿನಲ್ಲಿ ಶೇ 99ರಷ್ಟು ಕಾಂಗ್ರೆಸ್‌ ಪಾಲು ಇದೆ. ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲೆಯಾದ್ಯಂತ ಸುಮಲತಾ ಪರ ಕೆಲಸ ಮಾಡಿದರು. ಅವರು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮುಂದಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ಸಂಸದರನ್ನು ಕೇಳಿಕೊಳ್ಳುತ್ತೇವೆ. ಬೆಂಬಲ ನೀಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)