ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ

ಭಾನುವಾರ, ಏಪ್ರಿಲ್ 21, 2019
32 °C
ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಒಡಕು: 2ನೇ ಹಂತದ ನಾಯಕರ ವಿರುದ್ಧ ಕ್ರಮ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ

Published:
Updated:

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಹೈಕಮಾಂಡ್‌ ಉಚ್ಛಾಟನೆ, ವಜಾ ಅಸ್ತ್ರ ಬೀಸಿದೆ. ಆದರೆ ವಾಸ್ತವವಾಗಿ ಅವರ ಬೆನ್ನಿಗೆ ನಿಂತವರನ್ನು ಬಿಟ್ಟು ಎರಡನೇ ಸಾಲಿನ ನಾಯಕರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಹಾಕಿದಂತಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್‌ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ನೇರವಾಗಿ ಕಾಣಿಸಿಕೊಳ್ಳದಿದ್ದರೂ ತೆರೆಮರೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಮಟ್ಟದ ಮುಖಂಡರು ಈ ನಾಯಕರನ್ನು ಮನವೊಲಿಸುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ನಿರ್ಲಿಪ್ತತೆಯ ಹೆಸರಿನಲ್ಲಿ ನಿತ್ಯವೂ ಸುಮಲತಾಗೆ ಬೆಂಬಲಿಸುತ್ತಿರುವ ಮುಖಂಡರ ವಿರುದ್ಧ ಕಾಂಗ್ರೆಸ್‌ ಹೈಕಮಾಂಡ್‌ ಕ್ರಮ ಕೈಗೊಂಡಿಲ್ಲ. ಮೈಸೂರು, ಹಾಸನ ಜಿಲ್ಲೆಗಳ ಮುಖಂಡರಿಗೆ ಎಚ್ಚರಿಕೆ ಕೊಟ್ಟಂತೆ ‘ಪಕ್ಷ ಬಿಟ್ಟು ಹೋಗಿ’ ಎಂದೂ ಹೇಳಿಲ್ಲ.

‘ಪಕ್ಷದಿಂದ ಹೊರ ಹಾಕಿದರೆ ಅದನ್ನು ಆಶೀರ್ವಾದ ಎಂದುಕೊಳ್ಳುವೆ’ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇನ್ನೂ ಕೆಲ ಮುಖಂಡರು ‘ತಾಕತ್ತು ಇದ್ದರೆ ನಮ್ಮನ್ನು ಹೊರ ಹಾಕಿ’ ಎಂದು ಸವಾಲು ಹಾಕಿದ್ದಾರೆ. ಆದರೆ ಹೈಕಮಾಂಡ್‌ ಕಾರ್ಯಕರ್ತರ ವಿರುದ್ಧ ಕ್ರಮ ಜರುಗಿಸಿದ್ದು, ಹಿರಿಯರನ್ನು ಮುಟ್ಟುವ ಮನಸ್ಸು ಮಾಡಿಲ್ಲ.

‘ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ ಸೋಲುಂಡ ಮುಖಂಡರು ಯಾವುದೇ ಹುದ್ದೆ ಹೊಂದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಹೇಳಿದರು.

ಧ್ವಜ ಸತ್ಯಾಗ್ರಹ: ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್‌ ಬಾವುಟ ಹಾರಾಡು
ವುದು ಮುಂದುವರಿದಿದೆ.  ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೂಡ ಕಾಂಗ್ರೆಸ್‌ ಧ್ವಜ ಹಾಗೂ ಇತರ ಪ್ರಚಾರ ಸಾಮಗ್ರಿ ಬಳಸದಂತೆ ಎಚ್ಚರಿಕೆ ನೀಡಿದ್ದರು. ಆದರೂ ಧ್ವಜ ಪ್ರದರ್ಶನ ಮುಂದುವರಿದಿದೆ.

‘ಇದು ಮಂಡ್ಯದ ಸ್ವಾಭಿಮಾನದ ಧ್ವಜ ಸತ್ಯಾಗ್ರಹ. ಸುಮಲತಾ ಅವರಿಗೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲ ಇದೆ. ಈ ಕಾರಣಕ್ಕೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡರೆ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಕಚೇರಿಗೆ ಬೀಗ ಹಾಕಬೇಕಾಗುತ್ತದೆ’ ಎಂದು ಉಚ್ಛಾಟಿತ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹೇಳಿದರು.

ಜೆಡಿಎಸ್‌ ಮುಖಂಡರಿಗೆ ಮುಖವಿಲ್ಲ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಎನ್‌.ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಅವರ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ‘ಬೆನ್ನಿಗೆ ಚೂರಿ ಹಾಕಿದವರ ಬೆಂಬಲ ಬೇಕಿಲ್ಲ’ ಎಂದು ಹರಿಹಾಯ್ದಿದ್ದಾರೆ.

ಜೆಡಿಎಸ್‌ ಮುಖಂಡರು ಅವರನ್ನು ‘ಸತ್ತ ಕುದುರೆಗಳು’ ಎಂದಿದ್ದಾರೆ. ಹೀಗೆಲ್ಲಾ ಅವಮಾನ ಮಾಡಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬನ್ನಿ ಎಂದು ಆಹ್ವಾನಿಸಲು ಮುಖ ಇಲ್ಲದಂತಾಗಿದೆ.

‘ನನಗೂ, ಚಲುವರಾಯಸ್ವಾಮಿ ಅವರಿಗೂ ಆಗಿ ಬರುವುದಿಲ್ಲ. ಹೀಗಾಗಿ ಪ್ರಚಾರಕ್ಕೆ ಕರೆಯುವುದಿಲ್ಲ’ ಎಂದು ನಾಗಮಂಗಲ ಶಾಸಕ ಸುರೇಶ್‌ಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !