ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕೂಟ ಉತ್ಸವ: ಹೋರಾಟಕ್ಕೆ ಸಂದ ಜಯ

ರಾಷ್ಟ್ರಕೂಟರ ರಾಜಧಾನಿ ಮಳಖೇಡ, ಕವಿರಾಜಮಾರ್ಗ ಕೃತಿ ನೀಡಿದ ನಾಡು
Last Updated 2 ಮಾರ್ಚ್ 2018, 10:47 IST
ಅಕ್ಷರ ಗಾತ್ರ

ಸೇಡಂ: ಸರ್ಕಾರದಿಂದ ರಾಷ್ಟ್ರಕೂಟ ಉತ್ಸವ ಆಚರಿಸುವಂತೆ ಒತ್ತಾಯಿಸಿ ಸುಮಾರು ವರ್ಷಗಳಿಂದ ನಡೆದ ಹೋರಾಟಕ್ಕೆ ಜಯ ಸಿಕ್ಕಿದೆ.

ತಾಲ್ಲೂಕಿನ ಮಳಖೇಡ ಕೋಟೆಯಲ್ಲಿ ಮಾರ್ಚ್ 4 ಮತ್ತು 5 ರಂದು ಸರ್ಕಾರದಿಂದ ರಾಷ್ಟ್ರಕೂಟ ಉತ್ಸವ ಆಚರಿಸಲಾಗುತ್ತಿದೆ. ಇದರಲ್ಲಿ ಕನ್ನಡ ನಾಡಿನ ಸಾಹಿತಿಗಳು, ಕವಿಗಳು, ಲೇಖಕರು, ಕಲಾವಿದರು ಪಾಲ್ಗೊಳ್ಳಲಿದ್ದಾರೆ.

‘ಕನ್ನಡ ಸಾಹಿತ್ಯದ ಪ್ರಥಮ  ಗ್ರಂಥ ‘ಕವಿರಾಜಮಾರ್ಗ’ ಕೃತಿ ನೀಡಿದ ನಾಡು ರಾಷ್ಟ್ರಕೂಟರ ಕವಿ ಶ್ರೀವಿಜಯ ಆಶ್ರಯ ಪಡೆದದ್ದು ಅಮೋಘವರ್ಷ ನೃತಪತುಂಗನ ಬಳಿ. ಇಂತಹ ಸಾಹಿತ್ಯದ ಬೇರು ಭೂಮಿಯನ್ನು ಹೊಂದಿರುವ ಮಳಖೇಡದಲ್ಲಿ ರಾಷ್ಟ್ರಕೂಟರ ಉತ್ಸವ ಆಚರಿಸಬೇಕು’ ಎಂಬುದು ಇಲ್ಲಿಯವರ ಕನಸಾಗಿತ್ತು.

‘ರಾಷ್ಟ್ರಕೂಟರು ಆಳಿದ ಮಳಖೇಡದ ಕೋಟೆ ವಿನಾಶದ ಅಂಚಿನಲ್ಲಿದೆ. ಅದನ್ನು ಜೀರ್ಣೋದ್ಧಾರ ಮಾಡಿ ಉತ್ಸವ ಆಚರಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ರಾಮಚಂದ್ರ ಗುತ್ತೇದಾರ, ಪದಾಧಿಕಾರಿಗಳು ಹಾಗೂ ನಮೋ ಬುದ್ಧ ಸೇವಾ ಕೇಂದ್ರದ ಅಧ್ಯಕ್ಷ ರಾಜು ಕಟ್ಟಿ ಇತರರು  ಮಳಖೇಡ ಕೋಟೆಯಿಂದ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿದ್ದರು.

ನಮೋ ಬುದ್ಧ ಸೇವಾ ಕೇಂದ್ರದ ಅಧ್ಯಕ್ಷ ರಾಜು ಕಟ್ಟಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ 4 ಸಾವಿರಕ್ಕೂ ಅಧಿಕ ಪತ್ರಗಳನ್ನು ಬರೆದು ಗಮನ ಸೆಳೆದಿದ್ದರು. ಸರ್ಕಾರ ವಿಶೇಷ ಕಾಳಜಿ ವಹಿಸದೇ ಇದ್ದಾಗ, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಕಳೆದ 7 ವರ್ಷ ಸ್ವಯಂ ಪ್ರೇರಿತವಾಗಿ ರಾಷ್ಟ್ರಕೂಟರ ವೈಭವ ಕಾರ್ಯಕ್ರಮ ನಡೆಸಿದ್ದರು.

ಭವ್ಯ ಸ್ವಾಗತ: ಪಟ್ಟಣಕ್ಕೆ ಗುರುವಾರ ಆಗಮಿಸಿದ ರಾಷ್ಟ್ರಕೂಟರ ಉತ್ಸವದ ರಥಯಾತ್ರೆಗೆ ಸೇಡಂ ನಾಗರಿಕರು, ಸಾಹಿತಿಗಳು ಭವ್ಯ ಸ್ವಾಗತ ಕೋರಿದರು.

ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ನಾಗನಾಥ ತೆರಗೆ, ಹಿರಿಯ ಮುಖಂಡ ಸಿದ್ದಪ್ಪ ತಳ್ಳಳ್ಳಿ ರಥಯಾತ್ರೆಗೆ ಪೂಜೆ ಸಲ್ಲಿಸಿ, ತೆಂಗು ಒಡೆದು ಶುಭಕೋರಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ತಾಲ್ಲೂಕಿನ ಮಳಖೇಡದಲ್ಲಿ ಸರ್ಕಾರ ಮಾರ್ಚ್ 4 ಮತ್ತು 5ರಂದು ರಾಷ್ಟ್ರಕೂಟರ ಉತ್ಸವ ಆಚರಿಸುತ್ತಿದೆ.

ಕನ್ನಡದ ನೆಲದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರಕೂಟರ ಉತ್ಸವದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಯಾವುದೇ ಕಾರಣಕ್ಕೂ ಬೇರೆ ಕಡೆಯಿಂದ ಆಗಮಿಸುವ ಜನತೆಗೂ ಸಹಕರಿಸುವ ಅವಶ್ಯಕತೆ ಇರುತ್ತದೆ. ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ರಾಷ್ಟ್ರಕೂಟರ ನೆಲ ಮಳಖೇಡದ ಇತಿಹಾಸ ಕುರಿತು ಜಿಲ್ಲೆಯ ಜನತೆ ತಿಳಿಸುವ ನಿಟ್ಟಿನಲ್ಲಿ ರಥಯಾತ್ರೆಯ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಸುತ್ತಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದ ತಾಲ್ಲೂಕುಗಳಿಗೆ ತೆರಳಿ ಸಂದೇಶ ರವಾನಿಸಲಾಗುತ್ತದೆ’ ಎಂದರು.

ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಮಡಿವಾಳಪ್ಪ ನಾಗನಹಳ್ಳಿ, ರಾಜಶೇಖರ ಸಿಂಧನೂರು, ಅನಿಲ ಸಕ್ರಿ, ಜನಾರ್ದನರೆಡ್ಡಿ ತುಳೇರ, ನೀಲಕಂಠ ಮುತ್ತಗಿ, ಗುರುನಾಥ ವಿಶ್ವಕರ್ಮ, ವೀರಯ್ಯಸ್ವಾಮಿ ಮಠಪತಿ, ರಾಜು ಹಡಪದ, ಲಕ್ಷ್ಮಣ ಭೋವಿ, ಅನಂತಯ್ಯ ಮುಸ್ತಾಜರ, ಬಸವರಾಜ ನವಲಗಟ್ಟಿ, ಬಸವರಾಜ ತಡಕಲ್, ಸಾಗರ ದುದ್ದೇಲಿ ಇದ್ದರು.
***
‘ಜವಾಬ್ದಾರಿ ನಿರ್ವಹಿಸಿ’

ಕಲಬುರ್ಗಿ: ಮಳಖೇಡದಲ್ಲಿ ಮಾ.4 ಮತ್ತು 5ರ ರಂದು ಆಯೋಜಿಸಿರುವ ರಾಷ್ಟ್ರಕೂಟ ಉತ್ಸವದ ಯಶಸ್ಸಿಗೆ ಆಯಾ ಸಮಿತಿಯವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಇಲ್ಲಿ ಉತ್ಸವದ ಸಿದ್ಧತಾ ಸಭೆ ನಡೆಸಿದ ಅವರು, ಎಲ್ಲ ಸಮಿತಿಗಳ ಮೇಲುಸ್ತುವಾರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ನೇತೃತ್ವದಲ್ಲಿ ಸಂಘಟನಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಅಧೀನದಲ್ಲಿ ಉಳಿದ ಸಮಿತಿಗಳು ಕಾರ್ಯನಿರ್ವಹಿಸಬೇಕು ಎಂದರು.

ಉತ್ಸವಕ್ಕೆ ಹೊರ ಜಿಲ್ಲೆಗಳಿಂದ ಬರುವ ಅತಿಥಿಗಳು ಮತ್ತು ಕಲಾವಿದರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಉತ್ಸವದ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT