ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪೇಟೆ: ಟಿಎಪಿಸಿಎಂಎಸ್‌ ಅಧಿಕಾರ ಹಿಡಿಯಲು ತಂತ್ರ

ಸೆ.30ರಂದು ಚುನಾವಣೆ ನಿಗದಿ, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಬೆಂಬಲಿಗರಿಗೆ ಪ್ರತಿಷ್ಠೆ
Last Updated 23 ಸೆಪ್ಟೆಂಬರ್ 2020, 2:03 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಪ್ರತಿಷ್ಠಿತ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆ ಸೆ.30ರಂದು ನಡೆಯಲಿದ್ದು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.

ಒಟ್ಟು 14 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಿಯಮಾನುಸಾರ ಎ ಕ್ಲಾಸ್‌ನಲ್ಲಿನ 6 ನಿರ್ದೇಶಕ ಸ್ಥಾನಗಳನ್ನು ತಾಲ್ಲೂಕಿನ 30 ವ್ಯವಸಾಯ ಸೇವಾ ಸಹಕಾರ ಸಂಘಗಳ ವತಿಯಿಂದ ಆಯ್ಕೆ ಮಾಡಲಾಗುತ್ತದೆ. ಉಳಿದ 8 ಸ್ಥಾನಗಳನ್ನು 1,287 ಷೇರುದಾರರು, ರೈತ ಸದಸ್ಯರು ಆಯ್ಕೆ ಮಾಡಲಿದ್ದಾರೆ. ಈ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ 2 ಸ್ಥಾನ, ಸಾಮಾನ್ಯ ಮಹಿಳೆಗೆ 2 ಸ್ಥಾನ, ಹಿಂದುಳಿದ ವರ್ಗ ಎಗೆ 2 ಸ್ಥಾನ, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ತಲಾ ಒಂದೊಂದು ಸ್ಥಾನಗಳನ್ನು ಮೀಸಲಿಡಲಾಗಿದೆ.

ತಾಲೂಕಿನಲ್ಲಿ 30 ವ್ಯವಸಾಯ ಸೇವಾ ಸಹಕಾರ ಸಂಘಗಳಿದ್ದು, ಇವುಗಳಲ್ಲಿ 25 ಸಹಕಾರ ಸಂಘಗಳು ಮತದಾನದ ಹಕ್ಕು ಪಡೆದಿವೆ. ವಾರ್ಷಿಕ ಮಹಾ ಸಭೆಗೆ ಗೈರು ಹಾಜರಾಗಿರುವುದು ಮತ್ತು ಸಂಸ್ಥೆಯೊಂದಿಗೆ ಕನಿಷ್ಠ ವ್ಯವಹಾರ ನಡೆಸಿಲ್ಲದಿರುವ ತಾಲ್ಲೂಕಿನ ಹರಳಹಳ್ಳಿ, ಚಟ್ಟಂಗೆರೆ, ಬಲ್ಲೇನಹಳ್ಳಿ, ಬೀರುವಳ್ಳಿ ಮತ್ತು ಮಾದಾಪುರ ವ್ಯವಸಾಯ ಸೇವಾ ಸಹಕಾರ ಸಂಘಗಳ ಮತದಾನದ ಹಕ್ಕನ್ನು ರದ್ದುಪಡಿಸಲಾಗಿದೆ.

ಟಿಎಪಿಸಿಎಂಎಸ್‌ನಲ್ಲಿ 2537ಕ್ಕೂ ಅಧಿ ಷೇರುದಾರರಿದ್ದರೂ 1,250 ಸದಸ್ಯರು ಅನರ್ಹರಾಗಿದ್ದು ಪ್ರಸ್ತುತ 1,287 ಷೇರುದಾರರು ಮಾತ್ರ ಮತದಾನದ ಹಕ್ಕು ಹೊಂದಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಅಧಿಕಾರದ ಗದ್ದುಗೆ ಹಿಡಿಯಲು ಈ ಚುನಾವಣೆಯನ್ನು ವಿವಿಧ ಪಕ್ಷಗಳ ಬೆಂಬಲಿತರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

30 ವ್ಯವಸಾಯ ಸೇವಾ ಸಹಕಾರ ಸಂಘಗಳ ಪೈಕಿ 17ರಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಅಧಿಕಾರವನ್ನೊಂದಿದ್ದರೆ ಕಾಂಗ್ರೆಸ್ 6 ಮತ್ತು ಬಿಜೆಪಿ 2 ಸಹಕಾರ ಸಂಘಗಳಲ್ಲಿ ಹಿಡಿತ ಹೊಂದಿವೆ. ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಬಿಜೆಪಿಯು ಕ್ಷೇತ್ರದಲ್ಲಿ ತನ್ನ ನೆಲೆಯನ್ನು ಗಟ್ಟಿಗೊಳಿಸುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ನೇತೃತ್ವದಲ್ಲಿ ಹೋರಾಟ ತಂತ್ರ ರೂಪಿಸಿದೆ.

‘ಪ್ರಸ್ತುತ ನಮ್ಮದೇ ಪಕ್ಷದಲ್ಲಿ ಟಿಎಪಿಸಿಎಂಎಸ್‌ ಆಡಳಿತವಿದ್ದು ಮುಂದಿನ ಬಾರಿಯೂ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಪಕ್ಷ ನಿಷ್ಠರು ಹಾಗೂ ಸಹಕಾರ ತತ್ವಗಳನ್ನು ಅಳವಡಿಸಿಕೊಂಡವರನ್ನೇ ಕಣಕ್ಕಿಳಿಸಿದ್ದು, ಗೆಲುವು ಸುಲಭವಾಗಲಿದೆ’ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.

‘ಜೆಡಿಎಸ್ ರೈತರ ಪರವಾದ ಪಕ್ಷವಾಗಿದೆ. ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ. ಜನರ ನಿರೀಕ್ಷೆಗೆ ತಕ್ಕಂತೆ ಈ ಸಂಸ್ಥೆಯನ್ನು ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪಿಸಿದ್ದೇವೆ’ ಎಂದು ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಎ.ಎನ್.ಜಾನಕೀರಾಂ ಹೇಳೀದರು.

‘ಕ್ಷೇತ್ರದ ಶಾಸಕರೇ ಈಗ ಸಚಿವರಾಗಿರುವುದು ನಮಗೆ ವರದಾನವಾಗಿದೆ. ಅಭಿವೃದ್ದಿ ಕಾರ್ಯಗಳು ನಮ್ಮ ಕೈಹಿಡಲಿಯಲಿದೆ. ನಮ್ಮ ಪಕ್ಷ ಟಿಎಪಿಎಂಎಸ್‌ನಲ್ಲಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುವದು ನಿಶ್ಚಿತ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಮೇಶ್ ಅರವಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT