ಬುಧವಾರ, ಆಗಸ್ಟ್ 4, 2021
23 °C
ಮುಖ್ಯರಸ್ತೆಗೆ ಸುರಿದಿದ್ದ ಕಲ್ಲು– ಮಣ್ಣು ತೆರವುಗೊಳಿಸಿದ ತಾಲ್ಲೂಕು ಆಡಳಿತ

ಮಂಡ್ಯ: ಭೂವರಾಹಸ್ವಾಮಿ ದೇವಸ್ಥಾನ ದರ್ಶನಕ್ಕೆ ಅನುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಭೂವರಾಹಸ್ವಾಮಿ ದೇವಸ್ಥಾನವಿರುವ ಕಲ್ಲಹಳ್ಳಿಯಲ್ಲಿ ಬುಧವಾರ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಯನ್ನು ಕಲ್ಲು- ಮಣ್ಣು ಸುರಿದು ಬಂದ್ ಮಾಡಿದ್ದ ಘಟನೆ ನಡೆದಿದ್ದು, ತಾಲ್ಲೂಕು ಆಡಳಿತ ಸುರಿದಿದ್ದ ಕಲ್ಲು– ಮಣ್ಣನ್ನು ತೆರವು ಮಾಡಿ ದೇವರ ದರ್ಶನಕ್ಕೆ ಹೋಗಲು ಭಕ್ತರಿಗೆ ಅವಕಾಶ ಮಾಡಿಕೊಟ್ಟಿತು.

ಕೆಲ ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ಕೊರೊನಾ ನೆಪ ಹೇಳಿ ಅಭಿವೃದ್ಧಿಯನ್ನು ಸಹಿಸಲಾರದೆ ದೇವಸ್ಥಾನಕ್ಕೆ ಬರುವ ರಸ್ತೆಗೆ ಮಣ್ಣು ಸುರಿದು, ದೇವಸ್ಥಾನವನ್ನು ಮುಚ್ಚಿಸಿ ತೊಂದರೆ ನೀಡುತ್ತಿದ್ದರು. ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು, ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ. ಶಿವಮೂರ್ತಿ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್ಐ ಡಿ.ಲಕ್ಷ್ಮಣ್ ಮತ್ತು ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಯಂತ್ರ ಬಳಸಿ ಮಣ್ಣು ತೆರವು ಮಾಡಿ ದೇವಸ್ಥಾನದ ಬಾಗಿಲನ್ನು ತೆರೆಸಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ, ‘ಭೂವರಾಹನಾಥಸ್ವಾಮಿ ದೇವಸ್ಥಾನ ತಾಲ್ಲೂಕಿನ ಹೆಮ್ಮೆಯ ದೇವಸ್ಥಾನವಾಗಿದೆ. ಬೇರೆ ರಾಜ್ಯ, ದೇಶಗಳಿಂದ ಭಕ್ತರು ದರ್ಶನಕ್ಕೆ ಬರುತ್ತಾರೆ. ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ನೆರವು ನೀಡಿದೆ. ಆದ್ದರಿಂದ ದೇವಸ್ಥಾನದ ಮುಂಭಾಗದಲ್ಲಿ ಇಟ್ಟುಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು ಎಲ್ಲರಿಗೂ ಸೆಲ್ಟರ್ ಅನ್ನು ದೇವಸ್ಥಾನದ ವತಿಯಿಂದ ನಿರ್ಮಿಸಿಕೊಡಲಾಗುವುದು. ಆದರೆ ಒಂದಿಬ್ಬರು ತಮ್ಮ ಪೆಟ್ಟಿಗೆ ಅಂಗಡಿ ತೆರವುಗೊಳಿಸದೆ ತಾಲ್ಲೂಕು ಆಡಳಿತದ ತೀರ್ಮಾನದ ವಿರುದ್ಧ ನಡೆದುಕೊಂಡು ಇಂತಹ ಕೃತ್ಯ ನಡೆಸುತ್ತಿದ್ದಾರೆಂದು ತಿಳಿದುಬಂದಿದ್ದು, ಇದು ಅಪರಾಧ. ಈ ಪೆಟ್ಟಿಗೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಪಿಡಿಒ ಶೀಘ್ರವಾಗಿ ಮುಗಿಸಬೇಕು’ ಎಂದು ಸೂಚಿಸಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಮಂಜು ಹಾಗೂ ಗ್ರಾಮದ ಮುಖಂಡರನ್ನು ಸ್ಥಳಕ್ಕೆ ಕರೆಸಿದ ಅವರು ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕ ರಸ್ತೆ ಮತ್ತು ದೇವಸ್ಥಾನವನ್ನು ಬಂದ್ ಮಾಡುವುದು ಅಪರಾಧವಾಗುತ್ತದೆ. ನಿಮಗೆ ಸಮಸ್ಯೆಗಳಿದ್ದರೆ ತಾಲ್ಲೂಕು ಆಡಳಿತ, ಪೊಲೀಸರ ಗಮನಕ್ಕೆ ತರಬೇಕೇ ವಿನಃ ನೀವೇ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಇಂತಹ ಪ್ರಕರಣ ಮರುಕಳಿಸಬಾರದು’ ಎಂದು ಅವರು ಎಚ್ಚರಿಕೆ ನೀಡಿದರು.

ನಂತರ ಕೊರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಂದಾಯ ನಿರೀಕ್ಷಕ ರಾಜಮೂರ್ತಿ, ಪಿಡಿಒ ರವಿಕುಮಾರ್, ಕರವೇ ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ಬಜರಂಗದಳದ ತಾಲ್ಲೂಕು ಘಟಕದ ಅಧ್ಯಕ್ಷ ಮಣಿಕಂಠ, ಸತೀಶ್, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ನಾಗೇಶ್ ರಾವ್ , ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು