ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಲೋಹದ ಉತ್ಸವಮೂರ್ತಿ ಆಕರ್ಷಣೆ

ಶ್ರೀರಂಗಪಟ್ಟಣ ದಸರಾ: ಚಾಮುಂಡೇಶ್ವರಿ ದೇವಿ ಮೆರವಣಿಗೆ
Last Updated 23 ಅಕ್ಟೋಬರ್ 2020, 2:33 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶುಕ್ರವಾರ ನಡೆಯಲಿರುವ ದಸರಾ ಉತ್ಸವದಲ್ಲಿ ಪಂಚ ಲೋಹದ ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿ ಪ್ರಮುಖ ಆಕರ್ಷಣೆ ಆಗಿದೆ.

ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿರುವ ಈ ಉತ್ಸವ ಮೂರ್ತಿಯನ್ನು ದಸರಾ ಆಚರಣೆ ವೇಳೆ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತದೆ. ಪೀಠದಿಂದ ತುದಿಯವರೆಗೆ 5 ಅಡಿ ಎತ್ತರವಿರುವ ದೇವಿಯ ವಿಗ್ರಹ 250 ಕೆ.ಜಿ ತೂಕವಿದೆ. 2008ರಿಂದ ನಡೆದಿರುವ ದಸರಾ ಉತ್ಸವದಲ್ಲಿ 8 ಬಾರಿ ಅಭಿಮನ್ಯು ಆನೆ ಈ ಉತ್ಸವ ಮೂರ್ತಿಯನ್ನು ಹೊತ್ತು ಸಾಗಿದ ಹೆಗ್ಗಳಿಕೆ ಉಂಟು. ಸಿಂಹ ವಾಹಿನಿಯಾಗಿರುವ ಚಾಮುಂಡೇಶ್ವರಿ ದೇವಿಯ ಮೂರ್ತಿ ಎಂಟು ಕೈಗಳನ್ನು (ಅಷ್ಟಭುಜೆ) ಹೊಂದಿದೆ. ಕೈಗಳಲ್ಲಿ ಶಂಖ, ಚಕ್ರ, ಗದೆ, ಧನಸ್ಸು, ಭೂಸುಂಡಿ, ತ್ರಿಶೂಲ, ಕಮಲ ಹಿಡಿದಿದ್ದಾಳೆ. ಮತ್ತೊಂದು ಕರದಲ್ಲಿ ದೇವಿಯು ಭಕ್ತರಿಗೆ ಅಭಯ ನೀಡುತ್ತಿದ್ದಾಳೆ.

ತಮಿಳುನಾಡು ನಂಟು: ತಮಿಳುನಾಡಿನ ಕುಂಭಕೋಣಂನಿಂದ 2005ರಲ್ಲಿ ಈ ವಿಶಿಷ್ಟ ವಿಗ್ರಹವನ್ನು ತರಿಸಲಾಗಿದೆ. ಪಟ್ಟಣದ ಸುರೇಶ್‌ ಎಂಬುವವರು ಇದನ್ನು ಉತ್ಸವದ ಉದ್ದೇಶಕ್ಕಾಗಿ, ₹1.5 ಲಕ್ಷ ವೆಚ್ಚದಲ್ಲಿ ಮಾಡಿಸಿಕೊಟ್ಟಿದ್ದಾರೆ. ಮೂಲ ವಿಗ್ರಹದ ಜತೆಗೆ ಉತ್ಸವ ಮೂರ್ತಿಗೆ ಪ್ರತಿ ದಿನ ಇಲ್ಲಿ ಪೂಜೆ ನಡೆಯುತ್ತದೆ. ಚಾಮುಂಡಿ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಈ ಉತ್ಸವ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

400 ವರ್ಷಗಳ ಇತಿಹಾಸ: ‘ಚಾಮುಂಡೇಶ್ವರಿ ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ಈ ದೇಗುಲದಲ್ಲಿ ನಾಲ್ಕು ಶತಮಾನಗಳ ಹಿಂದಿನ, ದೇವಿಯ ಮೂಲ ಮೂರ್ತಿ ಇದೆ. 16 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರ ಕಂಡಿದೆ.

‘ಚಾಮುಂಡೇಶ್ವರಿ ದೇವಿ ಉತ್ಸವ ಮೂರ್ತಿಯನ್ನು ಶುಕ್ರವಾರ ನಡೆಯಲಿರುವ ದಸರಾ ಉತ್ಸವದಲ್ಲಿ ಕಾಷ್ಠ ರಥದಲ್ಲಿರಿಸಿ ಮೆರವಣಿಗೆ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಬನ್ನಿ ಮಂಟಪಕ್ಕೆ ಕೊಂಡೊಯ್ದು, ಸಿಂಗರಿಸಿ, ಪೂಜಿಸಿ ಸಂಜೆ 4 ಗಂಟೆಗೆ ಅಲ್ಲಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಮೆರವಣಿಗೆಯಲ್ಲಿ ತರಲಾಗುತ್ತದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್‌.ಲಕ್ಷ್ಮೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT