ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: ಲಾರಿ ಸಂಚಾರ ವಿಚಾರಕ್ಕೆ ಗಲಾಟೆ, ದಲಿತ ವ್ಯಕ್ತಿ ಸಾವು

Last Updated 13 ಮೇ 2022, 2:24 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಮನೆ ಮುಂದಿನ ರಸ್ತೆಯಲ್ಲಿ ಮಣ್ಣು ತುಂಬಿದ ಲಾರಿ ಸಂಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ, ದಲಿತ ಸಮುದಾಯದ ಶಿವಕುಮಾರ್ (39) ಬುಧವಾರ ರಾತ್ರಿ ಮೃತಪಟ್ಟರು.

ಪ್ರಕರಣದ ಪ್ರಮುಖ ಆರೋಪಿ, ಗ್ರಾಮ ಪಂಚಾಯಿತಿ ಸದಸ್ಯ ಬಿ.ಆರ್.ಅಶೋಕ್ ರಾಜೇ ಅರಸು ಎಂಬುವರನ್ನು ಕಿರುಗಾವಲು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಧಿಕ ಭಾರ ಹೊತ್ತ ಲಾರಿಗಳ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಶಿವಕುಮಾರ್‌ ಲಾರಿಗಳನ್ನು 15 ದಿನಗಳ ಹಿಂದೆ ತಡೆದಿದ್ದರು. ಈ ವೇಳೆ ಬಿ.ಆರ್.ಅಶೋಕ್ ರಾಜೇ ಅರಸು, ಮತ್ತೊಬ್ಬ ಗ್ರಾ.ಪಂ ಸದಸ್ಯ ಹಾಗೂ ಶಿವಕುಮಾರ್ ನಡುವೆ ಗಲಾಟೆ ನಡೆದಿತ್ತು. ತಳ್ಳಾಟ, ನೂಕಾಟ ದಿಂದ ಕೆಳಗೆ ಬಿದ್ದ ಶಿವಕುಮಾರ್ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು.

ಗುರುವಾರ ಮಧ್ಯಾಹ್ನ ಮೃತರ ಸಂಬಂಧಿಕರು ಬಿ.ಆರ್.ಅಶೋಕ್ ರಾಜೇ ಅರಸು ಮನೆ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಬ್ಬ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು.

ಗ್ರಾಮಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಡಿವೈಎಸ್ಪಿ ಎಚ್.ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT