ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಒಂಟಿ ಮಹಿಳೆಯ ವಿನಮ್ರ ಸೇವೆ, ಬಡವರ ಸೇವೆಗೆ ಮೂರು ಗಂಟೆ ಮೀಸಲು

Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ವರ್ಕ್‌ ಫ್ರಂ ಹೋಂನಲ್ಲಿರುವ ಮಹಿಳಾ ಉದ್ಯೋಗಿಯೊಬ್ಬರು ಕಳೆದ ಎರಡು ವಾರಗಳಿಂದ ಒಬ್ಬಂಟಿಯಾಗಿ ನಿರ್ಗತಿಕರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನ ಬನಶಂಕರಿಯ ಸಂಸ್ಥೆಯೊಂದರಲ್ಲಿ ಆರ್ಕಿಟೆಕ್ಟ್‌ ಆಗಿರುವ, ಪಟ್ಟಣದವರೇ ಆದ ತನ್ಮಯ ಬೆಳಗಿನ ಮೂರು ತಾಸು ಸಮಯವನ್ನು ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿರುವವರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಮುಂಜಾನೆ 7 ಗಂಟೆಗೆ ತಮ್ಮ ಸ್ಕೂಟರ್‌ನಲ್ಲಿ ಟೀ, ಬಿಸ್ಕೆಟ್‌, ಬ್ರೆಡ್‌ ಇರುವ ಬಾಕ್ಸ್‌ ಇಟ್ಟುಕೊಂಡು ಹೊರಡುವ ಇವರು 10 ಗಂಟೆಯವರೆಗೆ ಪಟ್ಟಣ ಮತ್ತು ಆಸುಪಾಸಿನಲ್ಲಿರುವ ನಿರಾಶ್ರಿತರನ್ನು ಹುಡುಕಿ ಅವರಿಗೆ ಆಹಾರ ಹಂಚುತ್ತಾರೆ.

ಪ್ರತಿ ದಿನ ಸುಮಾರು 200 ಜನರಿಗೆ ತನ್ಮಯ ಅವರು ಕಾಫಿ, ಟೀ, ಬ್ರೆಡ್‌, ಬಿಸ್ಕೆಟ್‌ ಹಂಚುತ್ತಿದ್ದಾರೆ. ಪಟ್ಟಣದ ಖಾಸಗಿ ಬಸ್‌ ನಿಲ್ದಾಣ, ಕಿರಂಗೂರು ಬನ್ನಿ ಮಂಟಪ ಸರ್ಕಲ್‌, ರೈಲು ನಿಲ್ದಾಣ, ಶ್ರೀರಂಗನಾಥ ದೇವಾಲಯದ ಉದ್ಯಾನ, ಕಾವೇರಿ ನದಿ ಸೋಪಾನಕಟ್ಟೆ, ಆಂಜನೇಯನ ಗುಡಿ ಇತರೆಡೆ ಇರುವ ನಿರಾಶ್ರಿತರಿಗೆ ಬ್ರೆಡ್‌, ಬಿಸ್ಕಿಟ್‌ ವಿತರಿಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ ಐದಾರು ಸಾವಿರ ಹಣವನ್ನು ಅವರು ಖರ್ಚು ಮಾಡುತ್ತಿದ್ದಾರೆ.

ಚೋಪಡಿಗಳಲ್ಲಿ ಇರುವ ಅಲೆಮಾರಿ ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ರಾಗಿ ಹಿಟ್ಟು ಕೊಡುತ್ತಿದ್ದಾರೆ. ಈ ಜನರಲ್ಲಿರುವ ಅಪೌಷ್ಟಿಕತೆಯನ್ನು ಗುರುತಿಸಿದ್ದು, ಹಾಲು ಮತ್ತು ಕೋಳಿ ಮೊಟ್ಟೆಗಳನ್ನೂ ನೀಡುತ್ತಿದ್ದಾರೆ. ಮಕ್ಕಳು ಇರುವ ಕುಟುಂಬಗಳಿಗೆ ಒಂದು ವಾರಕ್ಕೆ ಆಗುವಷ್ಟು ತಿಂಡಿ– ತಿನಿಸು ಕೊಟ್ಟು ಬರುತ್ತಾರೆ. ಕಳೆದ 10 ದಿನಗಳಿಂದ ತನ್ಮಯ ಅವರ ಸೇವೆ ನಿರಂತರವಾಗಿ ನಡೆಯುತ್ತಿದೆ. ಮೇ 3ರ ವರೆಗೂ ತಮ್ಮ ಈ ಕೆಲಸ ಮುಂದುವರೆಯಲಿದೆ ಎಂದು ಅವರು ಹೇಳುತ್ತಾರೆ.

‘ನನಗೆ ಮೊದಲಿನಿಂದಲೂ ಬಡವರ ಬಗ್ಗೆ ಕಾಳಜಿ. ಎರಡು ವರ್ಷಗಳ ಈಚೆಗೆ ಹಣ ಸಂಪಾದಿಸುತ್ತಿದ್ದು, ದುಡಿದ ದುಡ್ಡಿನಲ್ಲಿ ಶೇ 5ರಷ್ಟು ಹಣವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತೇನೆ. ಸದ್ಯ ಕೊರೊನಾ ವೈರಸ್‌ ಕಾರಣದಿಂದ ಉಂಟಾಗಿರುವ ಲಾಕ್‌ಡೌನ್‌ ಸ್ಥಿತಿಯಿಂದ ತೊಂದರೆಗೆ ಸಿಲುಕಿರುವ ಜನರಿಗೆ ನನ್ನದು ಸಣ್ಣ ಸೇವೆ ಅಷ್ಟೇ’ ಎಂಬುದು ತನ್ಮಯ ಅವರ ವಿನಮ್ರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT