ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬುತ್ತಿದೆ ಜಾಗತೀಕರಣದ ವಿಷ ಬಳ್ಳಿ

ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ; ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ವಿಷಾದ
Last Updated 28 ಡಿಸೆಂಬರ್ 2022, 12:37 IST
ಅಕ್ಷರ ಗಾತ್ರ

ಮಂಡ್ಯ: ‘ತೊಂಬತ್ತರ ನಂತರ ಆರಂಭವಾದ ಜಾಗತೀಕರಣದ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇನ್ನು 10–15 ವರ್ಷದಲ್ಲಿ ಖಾಸಗೀಕರಣ, ನಗರೀಕರಣದ ವಿಷ ಬಳ್ಳಿ ತೀವ್ರವಾಗಿ ಹಬ್ಬಲಿದ್ದು ದುರಂತಮಯ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ’ ಎಂದು ಚಿಂತಕ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಿಷಾದಿಸಿದರು.

ಪ್ರೊ.ಎಚ್‌.ಎಲ್‌.ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬುಧವಾರ ನಡೆದ 5ನೇ ವರ್ಷದ ಎಚ್ಚೆಲ್ಕೆ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಅಪಾರ ಬಂಡವಾಳ, ತಾಂತ್ರಿಕ ಪಾರಮ್ಯದಲ್ಲೂ ಖಾಸಗೀಕರಣದ ವಿಷ ವರ್ತುಲ ವಿಸ್ತಾರಗೊಳ್ಳುತ್ತಿದೆ. ಆಧುನಿಕ ಕಾಲಘಟ್ಟದಲ್ಲೂ ಚಾತುರ್ವರ್ಣ ವ್ಯವಸ್ಥೆಯನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. 2014ರ ನಂತರ ಎಲ್ಲದರ ನೀಲನಕ್ಷೆ ತಯಾರಿಸಿಕೊಂಡೇ ಹೇರಲಾಗುತ್ತಿದೆ. ಇದರಿಂದಾಗಿ ನೆಲ ಸಂಸ್ಕೃತಿ, ಶೈಕ್ಷಣಿಕ ವ್ಯವಸ್ಥೆ ಹಾಳಾಗುತ್ತಿದೆ. ಹೇರಿಕೆಯ ವಿರುದ್ಧ ಪ್ರತಿರೋಧ ಒಡ್ಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕಾಗಿದೆ. ವೈಯಕ್ತಿಕವಾಗಿ, ಸಾಮುದಾಯಿಕವಾಗಿ ಪ್ರತಿಭಟಿಸಬೇಕಾಗಿದೆ’ ಎಂದರು.

‘150 ವರ್ಷಗಳ ಹಿಂದಿನ ದೋಷಪೂರಿತ ಶಿಕ್ಷಣ ವ್ಯವಸ್ಥೆಯನ್ನು ಮತ್ತೆ ಹೇರುವ ಪ್ರಯತ್ನಗಳು ನಡೆಯುತ್ತಿವೆ. ಮಕ್ಕಳಿಗೆ ಏನು ಕಲಿಸಬೇಕು ಎಂಬ ಗೊಂದಲ ನಿರ್ಮಾಣವಾಗಿದೆ. ಪಠ್ಯಪುಸ್ತಕಗಳ ಪರಿಷ್ಕರಣೆ ಎಂಬುದು ಕೇವಲ ರಾಜಕೀಯ ನಾಟಕವಾಗಿದೆ. ಇಂದಿನ ಕಲಿಕೆಗೂ ಮುಂದಿನ ಭವಿಷ್ಯಕ್ಕೂ ಸಂಬಂಧವೇ ಇಲ್ಲದಾಗಿದೆ. ಪ್ರಾಜ್ಞರು, ಸಮುದಾಯ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ’ ಎಂದರು.

‘ಕವಿ ಪರಂಪರೆ ಕೂಡ ಶಿಕ್ಷಣದ ಬಗ್ಗೆ ಗಮನ ನೀಡುತ್ತಿಲ್ಲ, ಮಕ್ಕಳ ಬಗ್ಗೆ ಏನೂ ಬರೆಯದವರು ಇಂದು ದೊಡ್ಡ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ಶಸ್ತ್ರಾಸ್ತ್ರ ಮಾರಾಟ ಮಾಡಿ ಜೀವನ ಕಟ್ಟಿಕೊಂಡಿರುವ ಸ್ವೀಡನ್‌ ದೇಶದ ಜನರಿಗೆ ಆ ದೇಶದ ಪ್ರಧಾನಿಯಾಗುವುದು ಬಲು ಸುಲಭ, ಆದರೆ ಶಿಕ್ಷಕರಾಗುವುದು ಬಹಳ ಕಷ್ಟ. ಕಡೆಗಾಲದಲ್ಲಾದರೂ ಶಿಕ್ಷಕನಾಗಿ ಮಕ್ಕಳಿಗೆ ಅಕ್ಷರ ಕಲಿಸಬೇಕು ಎಂಬ ಕನಸು ಆದೇಶದ ಜನರದ್ದಾಗಿದೆ’ ಎಂದರು.

‘ಶಿಕ್ಷಣವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವಂತಿರಬೇಕು. ಆದರೆ ವರ್ಗಾಯಿಸಲಾರಷ್ಟು ಜಡತ್ವ ಇಂದು ಶಿಕ್ಷಣದಲ್ಲಿ ಕಾಡುತ್ತಿದೆ. ಜೀವನದಿಯ ಜಾಡು ಹಿಡಿದು ಮಕ್ಕಳ ಹೊಸ ಭವಿಷ್ಯ ಹುಡುಕಬೇಕಾಗಿದೆ. ಅದಕ್ಕೆ ಮೊದಲು ಕಿರು ಝರಿಯನ್ನು ಹುಡುಕಬೇಕಾಗಿದೆ. ನೆಲಪದ ಸಂಸ್ಕೃತಿ ಶಿಕ್ಷಣದ ಭಾಗವಾಗಬೇಕು, ಕಲಿಕೆಗೆ ಇದು ನಿಕ್ಷೇಪದಂತಿದ್ದು ಮುಂದಿನ ಪೀಳಿಗೆಯ ಮಕ್ಕಳಿಗೆ ಬೆಳಕಾಗುತ್ತದೆ’ ಎಂದರು.

ಸಾಹಿತಿ ಡಾ.ಜಗದೀಶ ಕೊಪ್ಪ ಮಾತನಾಡಿ ‘ವಿಕೃತಿಗಳಿಗೆ ಮದ್ದು ಅರೆಯುವ ಶಕ್ತಿ ಕೋಟಿಗಾನಹಳ್ಳಿ ರಾಮಯ್ಯ ಅವರಿಗಿದೆ. ಸಿದ್ಧಾಂತಕ್ಕೆ ಎಂದೂ ರಾಜಿ ಮಾಡಿಕೊಳ್ಳದ ಅದರು ಬದ್ಧತೆಯಿಂದ ಬದುಕಿದ್ದಾರೆ. ಕೋಲಾರದಲ್ಲಿ ಆದಿಮ ಕಟ್ಟಿದಾಗ ಅವರಿಗೆ ಕಾರ್ಪೊರೇಟ್‌ ಕಂಪನಿಗಳಿಂದ ಹಣದ ಉಡುಗೊರೆ ಬಂದಿತ್ತು, ಆದರೆ ಅವರು ಅದನ್ನು ನಯವಾಗಿ ತಿರಸ್ಕರಿಸಿ ಮಾದರಿಯಾದರು’ ಎಂದರು.

‘ವೈಚಾರಿಕಾ ಪ್ರಶಸ್ತಿಗೆ ಕೋಟಿಗಾನಹಳ್ಳಿ ರಾಮಯ್ಯ ಅವರ ಆಯ್ಕೆಯಿಂದ ಎಚ್ಚೆಲ್ಕೆ ಪ್ರತಿಷ್ಠಾನಕ್ಕೆ ಹೆಚ್ಚು ಗೌರವ ಸಿಕ್ಕಿದೆ. ರಾಮಯ್ಯ ಅವರಿಗೂ ಮಂಡ್ಯಕ್ಕೂ ಅವಿನಾಭಾ ಸಂಬಂಧವಿದೆ. ಎಚ್‌.ಎಲ್‌.ಕೇಶವಮೂರ್ತಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು ಮಂಡ್ಯಕ್ಕೆ ಆಪ್ತರಾಗಿದ್ದಾರೆ’ ಎಂದರು.

ಹುರುಗಲವಾಡಿ ರಾಮಯ್ಯ, ಗೋವಿಂದರಾಜು, ಮಂಜುಳಾ ಅವರು ಕೋಟಿಗಾನಹಳ್ಳಿ ರಾಮಯ್ಯ ಅವರ ಗೀತೆಗಳಿಗೆ ಧ್ವನಿಯಾದರು. ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಪ್ರೊ.ಎಚ್‌.ಎನ್‌.ಶಿವಣ್ಣಗೌಡ, ಪ್ರತಿಷ್ಠಾನದ ಸದಸ್ಯ ಗುರುಪ್ರಸಾದ್‌ ಕೆರಗೋಡು, ಸದಸ್ಯ ಪೂರ್ಣಚಂದ್ರ ಇದ್ದರು.

**********

ಎಚ್ಚೆಲ್ಕೆ ಎಂದರೆ ಒಂದು ಬಳಗ

‘ಎಚ್‌.ಎಚ್‌.ಕೇಶವಮೂರ್ತಿ ಎಂದರೆ ಒಬ್ಬ ವ್ಯಕ್ತಿ ಮಾತ್ರವೇ ಆಗಿರಲಿಲ್ಲ, ಅದೊಂದು ಬಳಗವಾಗಿತ್ತು. ಬೆಸಗರಹಳ್ಳಿ ರಾಮಣ್ಣ, ಕೆ.ಎಸ್‌.ಸಚ್ಚಿದಾನಂದ, ಬೋರಯ್ಯ ಮುಂತಾದವರ ಸಮೂಹವೇ ಎಚ್ಚೆಲ್ಕೆ ಬಳಗವಾಗಿತ್ತು’ ಎಂದು ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

‘ಕೇಶವಮೂರ್ತಿ ಅವರ ಮಾತಿಗೆ ಪಿ.ಲಂಕೇಶ್‌ ಅವರು ಉಸಿರೆತ್ತುತ್ತಿರಲಿಲ್ಲ. ಸಾಕ್ಷರತಾ ಆಂದೋಲನದಲ್ಲಿ ಎಚ್ಚೆಲ್ಕೆ ಅವರು ಮಾಡಿರುವ ಸೇವಾ ಕಾರ್ಯವನ್ನು ಯಾರೂ ಮರೆಯುವಂತಿಲ್ಲ. ಅವರು ಅಕ್ಷರ, ನುಡಿ, ನೆನಪುಗಳಲ್ಲಿ ಸದಾ ಜೀವಂತವಾಗಿ ಇರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT