ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲದ ಕೋಟೆಬೆಟ್ಟದ ರಸ್ತೆ ಕೆಸರುಮಯ

20 ವರ್ಷಗಳಿಂದ ಡಾಂಬರು ಕಾಣದೆ ಹದಗೆಟ್ಟ ರಸ್ತೆ; ಜನರ ಪರದಾಟ
Last Updated 21 ಜುಲೈ 2021, 5:15 IST
ಅಕ್ಷರ ಗಾತ್ರ

ನಾಗಮಂಗಲ: ತಾಲ್ಲೂಕಿನ ಸಲಾದ್ರಿ ಕ್ಷೇತ್ರವಾದ ಕೋಟೆಬೆಟ್ಟವು ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಪ್ರತಿ ನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುವ ಕ್ಷೇತ್ರವಾಗಿದೆ. ಆದರೆ, ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರು ಕಾಣದೆ ದಶಕಗಳೇ ಕಳೆದಿವೆ. ರಸ್ತೆ ಗುಂಡಿ ಬಿದ್ದಿದ್ದು, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿದೆ.

ನಾಗಮಂಗಲ ಪಟ್ಟಣದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಕೋಟೆಬೆಟ್ಟಕ್ಕೆ ಭಕ್ತರು ವರ್ಷ ಪೂರ್ತಿ ಭೇಟಿ ನೀಡುತ್ತಾರೆ. ಜೊತೆಗೆ‌ ಕೋಟೆ ಬೆಟ್ಟದ ಕಂಬದ ನರಸಿಂಹ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ ಬೆಟ್ಟಗಳು ಇವೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಪಟ್ಟಣದಿಂದ ಕೋಟೆಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯು ಕೇವಲ ಪಾಲಗ್ರಹಾರ ಗ್ರಾಮದವರೆಗೆ ಮಾತ್ರ ಪೂರ್ಣಗೊಂಡಿದೆ. ಮಳೆಗಾಲ ಬಂದರೆ ರಸ್ತೆ ಗದ್ದೆಯಾಗಿ ಬದಲಾಗುತ್ತದೆ. ಇದರಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗ್ರಾ.ಪಂ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯು ಪಾಲಾಗ್ರಹಾರ, ಹೊಸಹಳ್ಳಿ, ಬ್ಯಾಡರಹಳ್ಳಿ, ಕೆಂಚೇಗೌಡನಕೊಪ್ಪಲು, ನಲ್ಕುಂಡಿ, ಹರದನಹಳ್ಳಿ ಸೇರಿದಂತೆ ರಾಮೇನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ರೈತರು ಸೇರಿದಂತೆ ಜನಸಾಮಾನ್ಯರು ಸಂಚರಿಸು ತ್ತಾರೆ. ಪ್ರಮುಖವಾಗಿ ವೃದ್ಧರು, ರೋಗಿಗಳು ಸೇರಿದಂತೆ ಗರ್ಭಿಣಿಯರು ವಾಹನಗಳಲ್ಲಿ ಸಂಚರಿಸಲು ಸಮಸ್ಯೆ ಯಾಗುತ್ತಿದೆ. ಜೊತೆಗೆ ‌ಈ ಮಾರ್ಗದಲ್ಲಿ ಇರುವ ಸೇತುವೆಗಳು ಕುಸಿದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಸಾವಿರಾರು ಭಕ್ತರು ಓಡಾಡುವ ಕ್ಷೇತ್ರಕ್ಕೆ ಸರಿಯಾದ ರಸ್ತೆಯಿಲ್ಲದೆ ಪರದಾಡುವಂತಾಗಿದೆ. ಜೊತೆಗೆ ದಶಕಗಳೇ ಕಳೆದರೂ ಈ ರಸ್ತೆ ಡಾಂಬರು ಕಂಡಿಲ್ಲ. ಆದ್ದರಿಂದ ಶಾಸಕರು ಇತ್ತ ಗಮನಹರಿಸುವ ಮೂಲಕ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಸ್ಥಳೀಯರಾದ ಕೃಷ್ಣಾಚಾರ್ ಮನವಿ ಮಾಡಿದರು.

ಕೋಟೆಬೆಟ್ಟ ಗ್ರಾ.ಪಂ ಸದಸ್ಯ ಸುಂದರ್ ಮಾತನಾಡಿ, ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಒಳಗೊಂಡಿರುವ ಕೋಟೆಬೆಟ್ಟಕ್ಕೆ ಬರುವ ಭಕ್ತರಿಗೆ ಸಮಸ್ಯೆಯಾಗುತ್ತಿದ್ದು, ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ವಾಹನಗಳು ಸಂಚರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಶಾಸಕ ಸುರೇಶ್ ಗೌಡರು ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT