ನಾಗಮಂಗಲ: ನಾಲ್ಕು ಮಂದಿ ದರೋಡೆಕೋರರು ನುಗ್ಗಿ ಮನೆಯಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದಾರೆ. ಘಟನೆ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಚಾಮಲಾಪುರ ಗೇಟ್‌ನಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ ಚಾಮಲಾಪುರ ಗೇಟ್ ಬಳಿ ಮಂಜುನಾಥ್ ಎಂಬುವರ ಮನೆಗೆ ಇಟಿಯೋಸ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಕಾರಿನ ಬಳಿ ಒಬ್ಬ ಕಾವಲು ನಿಂತು ಉಳಿದ ಮೂವರು ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ. ಮನೆ ಬಾಗಿಲು ಮುರಿದು ನುಗ್ಗಿ ಮಾಲೀಕರ ಪತ್ನಿ ಮೇಲೂ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಚಿನ್ನಾಭರಣ ದೋಚಿದ್ದಾರೆ. ಕೊಠಡಿಯಲ್ಲಿ ಮಲಗಿದ್ದ ಮಾಲೀಕರ ತಂದೆ, ತಾಯಿ, ಪುತ್ರಿ ಮೇಲೂ ಹಲ್ಲೆ ಮಾಡಿದ್ದಾರೆ.
ಆ ಸಮಯದಲ್ಲಿ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿದ್ದಕ್ಕೆ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿದರು. ಆದರೆ, ಕರೆ ಕಡಿತವಾಗದೇ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಂಜುನಾಥ್ ಸೋದರ ಸ್ಥಳಕ್ಕೆ ಬಂದ ಕೂಡಲೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬೆಳ್ಳೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.