ಬುಧವಾರ, ಜನವರಿ 27, 2021
16 °C
ಶ್ರೀರಂಗಪಟ್ಟಣ: ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿದ ಎಚ್‌.ಡಿ.ಕುಮಾರಸ್ವಾಮಿ ಟೀಕೆ

‘ಲಕ್ಷ ಕೋಟಿಯ ಯೋಜನೆ; ಇಟ್ಟಿದ್ದು ಸಾವಿರ ಕೋಟಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ‘ಅಧಿಕಾರದ ಕೊನೆಯ ದಿನಗಳಲ್ಲಿ ಸಿದ್ದರಾಮಯ್ಯ ಅವರು ₹1.3 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ಘೋಷಿಸಿ ₹ 9 ಸಾವಿರ ಕೋಟಿಯಷ್ಟು ಮಾತ್ರ ಹಣ ಇಟ್ಟಿದ್ದರು. ಹಾಗಾಗಿ ಅವರು ಘೋಷಿಸಿದ ಯಾವ ಯೋಜನೆಗಳೂ ಸರಿಯಾಗಿ ಕಾರ್ಯಗತವಾಗಲಿಲ್ಲ’ ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತಾಲ್ಲೂಕಿನ ನೇರಲಕೆರೆಯಲ್ಲಿ ಗಾಮನಹಳ್ಳಿ ಮತ್ತು ಇತರ ಊರುಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ತರಾತುರಿಯಲ್ಲಿ ಯೋಜನೆ ಘೋಷಿಸಿದ ಪರಿಣಾಮ, ವಸತಿ ಯೋಜನೆಯ ಮನೆಗಳು ಅರ್ಧಕ್ಕೆ ನಿಂತು ಹೋದವು. ನೀರಾವರಿ ಯೋಜನೆ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ನನೆಗುದಿಗೆ ಬಿದ್ದವು ಎಂದರು.

‘ಸಾಲ ಪಡೆದಿದ್ದ ಬಡವರ ಅನುಕೂಲಕ್ಕಾಗಿ ಋಣಮುಕ್ತ ಕಾಯ್ದೆ ಜಾರಿ ಮಾಡಿದೆ. ಆದರೆ, ಆಳುವ ಸರ್ಕಾರದ ನಿರ್ಲಕ್ಷ್ಯದಿಂದ ಅದು ನ್ಯಾಯಾಲಯದವರೆಗೆ ಹೋಗಿದೆ. ಈ ಕಾಯ್ದೆ ಜಾರಿಗೆ ಬಂದಿದ್ದರೆ 2 ಲಕ್ಷ ಜನರಿಗೆ ಅನುಕೂಲವಾಗುತ್ತಿತ್ತು. ಮಂಡ್ಯ ನಗರವೂ ರಾಮನಗರ ಮಾದರಿಯಲ್ಲಿ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದ ಜಿಲ್ಲೆಗೆ ₹ 9 ಸಾವಿರ ಕೋಟಿ ಅನುದಾನ ನೀಡಿದೆ. ಮೈಸೂರು ರಾಜರು ಕಟ್ಟಿದ ಮೈಷುಗರ್‌ ಸಕ್ಕರೆ ಕಾರ್ಖಾನೆಯನ್ನು ಉಳಿಸಲು ₹ 100 ಕೋಟಿ ತೆಗೆದಿರಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಈ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ಹೊರಟಿದೆ’ ಎಂದು ಟೀಕಿಸಿದರು.

ರಾಮಮಂದಿರ ಕಟ್ಟುತ್ತಿರುವ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ನಿತ್ಯದ ಸಂಗತಿಗಳಾಗಿವೆ. ರಾಜ್ಯದ ಬಿಜೆಪಿ ಸರ್ಕಾರವೂ ಜನರ ಹಿತ ಮರೆತಿದ್ದು, ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ ಸ್ವತಂತ್ರವಾಗಿ ಸರ್ಕಾರ ನಡೆಸಲು ಒಮ್ಮೆ ಅಧಿಕಾರ ಸಿಕ್ಕರೆ ಇಡೀ ದೇಶಕ್ಕೇ ಮಾದರಿ ರಾಜ್ಯ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬಸ್‌ ಬರಲಿ: ನೇರಲಕೆರೆಯ ರೈತರಿಗೆ ಸಾಲ ಮನ್ನಾ ಯೋಜನೆ ಹಣ ಇನ್ನೂ ಖಾತೆಗೆ ಬಂದಿಲ್ಲ ಎಂದು ಕುಮಾರಸ್ವಾಮಿ ಅವರಲ್ಲಿ ತಿಳಿಸಿದರು. ನೇರಲಕೆರೆಗೆ ಬಸ್‌ ಹಾಕಿಸಿಕೊಡಿ ಎಂದು ಮಹಿಳೆಯರು ಮನವಿ ಮಾಡಿದರು.

ಯಾರನ್ನೂ ದಬ್ಬುವುದಿಲ್ಲ: ಕಾರ್ಯಕ್ರಮಗಳಲ್ಲಿ ಪ್ರಶ್ನೆ ಮಾಡುವವರ ಮಾತನ್ನು ಸಾವಧಾನದಿಂದ ಆಲಿಸುತ್ತೇನೆ. ಸಿದ್ದರಾಮಯ್ಯ ಅಥವಾ ಯಡಿಯೂರಪ್ಪ ಅವರಂತೆ ಪ್ರಶ್ನೆ ಮಾಡಿದವರನ್ನು ಸಭೆಯಿಂದ ಹೊರಗೆ ದಬ್ಬುವುದಿಲ್ಲ. ಜನರ ಕಷ್ಟಗಳಿಗೆ ಕಿವಿಯಾಗುತ್ತೇನೆ ಎಂದು ಚನ್ನಹಳ್ಳಿಯ ಚನ್ನಯ್ಯ ಎಂಬವರು ‘ಮನೆ ಕಟ್ಟಲು ಎರಡು ವರ್ಷದಿಂದ ದುಡ್ಡು ಬಂದಿಲ್ಲ’ ಎಂದು ಪದೇ ಪದೆ ಕೇಳುತ್ತಿದ್ದ ಪ್ರಶ್ನೆಗೆ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯಿಸಿದರು.

ಚೂರಿ ಹಾಕಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ ನೇರವಾದಿ. ಸುಳ್ಳು, ಮೋಸ ಗೊತ್ತಿಲ್ಲ. ನಂಬಿದವರ ಬೆನ್ನಿಗೆ ಚೂರಿ ಹಾಕಲ್ಲ. ಶುದ್ಧ ಮನಸ್ಸಿನ ವ್ಯಕ್ತಿ. ಅರಕೆರೆ ಗ್ರಾಮದ ರಸ್ತೆ ವಿಸ್ತರಣೆಗೆ ಎರಡು ವರ್ಷಗಳ ಹಿಂದೆಯೇ ದುಡ್ಡು ತಂದಿದ್ದಾರೆ. ಮಾಜಿ ಶಾಸಕರೊಬ್ಬರು ತಂಟೆ ಮಾಡುತ್ತಿದ್ದಾರೆ. ನನ್ನ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾನವನ್ನು ಸಿದ್ದರಾಮಯ್ಯ ಸರ್ಕಾರದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ಅವರ ಮಾತು ನಂಬಬೇಡಿ, ದಾಖಲೆ ಬೇಕಿದ್ದರೆ ಕಳುಹಿಸಿಕೊಡುತ್ತೇನೆ’ ಎಂದು ಹೇಳಿದರು.

ಸಂಭ್ರಮದ ಸ್ವಾಗತ: ಕುಮಾರಸ್ವಾಮಿ ಅವರಿಗೆ ತಾಲ್ಲೂಕಿನ ಗಡಿಭಾಗದ ಗಾಮನಹಳ್ಳಿ, ಮಾರಸಿಂಗನಹಳ್ಳಿ ಗೇಟ್‌, ನೇರಲಕೆರೆ, ಬೆಟ್ಟಹಳ್ಳಿ, ಬಳ್ಳೇಕೆರೆ, ಅರಕೆರೆ, ಮಂಡ್ಯಕೊಪ್ಪಲು, ಮಹದೇವಪುರ, ಹಂಗರಹಳ್ಳಿ, ಚಿಕ್ಕಪಾಳ್ಯ, ದೊಡ್ಡಪಾಳ್ಯ ಗ್ರಾಮಗಳ ಬಳಿ ಸಂಭ್ರಮದ ಸ್ವಾಗತ ಕೋರಲಾಯಿತು. ಅವರು ಸಾಗಿದ ದಾರಿಯುದ್ದಕ್ಕೂ ಜೆಡಿಎಸ್‌ ಕಾರ್ಯಕರ್ತರು ಹೂ ಮಳೆ ಸುರಿಸಿದರು. ಪೂರ್ಣಕುಂಭ ಸ್ವಾಗತ ಕೋರಿ, ಮಂಗಳಾರತಿ ಬೆಳಗಿದರು. ಸಾಲು ಸಾಲು ಪಟಾಕಿಗಳು ಸಿಡಿದವು.

ಶಾಸಕರಾದ ಕೆ.ಟಿ.ಶ್ರೀಕಂಠೇಗೌಡ, ಎನ್‌.ಅಪ್ಪಾಜಿಗೌಡ, ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಜೆಡಿಎಸ್‌ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌, ತಾಲ್ಲೂಕು ಘಟಕದ ಅಧ್ಯಕ್ಷ ಪಾಲಹಳ್ಳಿ ಮುಕುಂದ, ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ, ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಸಂತೋಷ್‌, ಶಿವಕುಮಾರ್‌, ತಾ.ಪಂ.ಮಾಜಿ ಅಧ್ಯಕ್ಷ ಸತೀಶ್‌, ಸದಸ್ಯ ಟಿ.ಎಂ.ದೇವೇಗೌಡ, ಯುವ ಘಟಕದ ಅಧ್ಯಕ್ಷ ಸಂಜಯ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಎಸ್‌.ಎಲ್‌.ದಿವಾಕರ್‌, ಮಾಜಿ ಅಧ್ಯಕ್ಷ ವೆಂಕಟೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಬೆಳಗೊಳ ಸ್ವಾಮಿಗೌಡ, ಜಿ.ಪಂ. ಮಾಜಿ ಸದಸ್ಯ ದಶರಥ, ಗ್ರಾ.ಪಂ. ಮಾಜಿ ಅಧ್ಯಕ್ಷ ಜವನೇಗೌಡ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.