ಮಂಗಳವಾರ, ಮಾರ್ಚ್ 21, 2023
20 °C
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಭಿಮತ; ಎನ್.ಎಂ. ತಿಮ್ಮೇಗೌಡರ ಏಳು ಕೃತಿಗಳ ಬಿಡುಗಡೆ

ಕೆ.ಆರ್.ಪೇಟೆ: ‘ಕನ್ನಂಬಾಡಿ ಕಟ್ಟೆ ಕಟ್ಟಲು ಪ್ರಯತ್ನಿಸಿದ್ದ ಟಿಪ್ಪು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ‘ಕನ್ನಂಬಾಡಿ ಕಟ್ಟೆಯನ್ನು ಕಟ್ಟಲು ಮೊದಲು ಪ್ರಯತ್ನಿಸಿದ್ದು ಟಿಪ್ಪು. ಆದರೆ, ಆಂಗ್ಲೋ– ಮೈಸೂರು ಯುದ್ಧದಿಂದ ಅದು ಸಾಧ್ಯವಾಗಲಿಲ್ಲ. ಟಿಪ್ಪುವಿನ ಉತ್ತಮ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆಯ ಸಾಹುಕಾರ್ ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಎನ್.ಎಂ. ತಿಮ್ಮೇಗೌಡ ರಚಿಸಿರುವ ‘ಅವರ್ ಇಂಡಿಯಾ’, ‘ಲಾರ್ಡ್ ಕೃಷ್ಣ ದಿ ಬ್ಲಾಕ್ ಹೋಲ್’, ‘ಫ್ರಾಗ್ರಾನ್ಸ್ ಆಫ್ ಫ್ರೀ ವಿಲ್’, ‘ಸಾಂಗ್ಸ್ ಆಫ್ ಲವ್ ಪಾರ್ಟ್– 1 ಮತ್ತು 2’, ‘ಆಧ್ಯಾತ್ಮ’, ‘ಆರಿಜನ್ ಆಫ್ ದಿ ಯೂನಿವರ್ಸ್ ಅಂಡ್ ಥಿಯರಿ ಆಫ್ ಸ್ಪೇಷ್’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಬುದ್ಧ ಮತ್ತು ವಿವೇಕಾನಂದರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಇಷ್ಟೊಂದು ಮತೀಯ ದ್ವೇಷ, ಕೋಮು ಭಾವನೆ ಹೆಚ್ಚಾಗುತ್ತಿರಲಿಲ್ಲ. ಹಿಂದೂ ಧರ್ಮದ ತತ್ವಗಳನ್ನು ಬುದ್ಧ, ವಿವೇಕಾ ನಂದರಷ್ಟು ವಿಮರ್ಶಿಸಿದವರು ಬೇರೆ ಯಾರೂ ಇಲ್ಲ. ಆದರೆ, ಅವರ ವಿಚಾರ ಮತ್ತು ತತ್ವಗಳನ್ನು ಭಾರತೀಯರು ಗಂಭೀರವಾಗಿ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದಾರೆ’ ಎಂದರು.

‘ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣ ಗ್ರಂಥದಲ್ಲಿ ರಾಮನನ್ನು ದೇವರೆಂದು ಪರಿಗಣಿಸಲಿಲ್ಲ. ಆದರೆ, ಕೆಟ್ಟ ಆಡಳಿತ ನಡೆಸಿದ್ದ ರಾಮನನ್ನು ದೇವರೆಂದು ಪರಿಗಣಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತಿರುವುದು ಬೇಸರದ ಸಂಗತಿ. ನಮಗೆ ಬೇಕಿರುವುದು ಸರ್ವ ಸಮಾನತೆಯ ರಾಜ್ಯವೇ ವಿನಃ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ, ಸಹೋದರ ಲಕ್ಷ್ಮಣನನ್ನು ಗಡಿಪಾರು ಮಾಡಿದ, ವಿಚಾರಣೆಯೇ ಇಲ್ಲದೆ ಶೂದ್ರ ಶಂಬೂಕನ ಹತ್ಯೆಗೆ ಕಾರಣನಾದ ರಾಮನ ರಾಜ್ಯ ನಮಗೆ ಬೇಕಿಲ್ಲ. ನಾವು ಶ್ರೀರಾಮನ ಮಂತ್ರವನ್ನು ಪಠಿಸಿ, ದಾಸ್ಯವನ್ನು ಒಪ್ಪಿಕೊಳ್ಳುವ ಬದಲಿಗೆ ಶಾಂತಿಪುರುಷ ಭಗವಾನ್ ಬುದ್ಧನ ತತ್ವ ಸಂದೇಶಗಳನ್ನು ಪಾಲಿಸಿದರೆ ಸಾಕು. ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮಾನತೆಯ ಸಮಾಜವನ್ನು ಸುಲಭ ವಾಗಿ ಕಟ್ಟಬಹುದು’ ಎಂದು ಸಲಹೆ ನೀಡಿದರು.

‘ಇಂದು ಭಾರತದಾದ್ಯಂತ ಅಜ್ಞಾನ ವನ್ನು ತುಂಬಲಾಗುತ್ತಿದೆ. ಕಾಣದ ದೇವರಿಗೆ ಜೋತು ಬಿದ್ದು ನಮ್ಮ ಹೊರೆಯನ್ನು ಅವನಿಗೆ ಹೊರಿಸಿ ನಾವು ನಿರಾಳರಾಗಿರುವುದು ಮಾನವತೆಗೆ ಬಗೆದ ದ್ರೋಹ’ ಎಂದರು.

ಕುವೆಂಪು ಕುರಿತ ನಿಮ್ಮ ಹೇಳಿಕೆ ಸರಿಯಲ್ಲ ಎಂದು ಸಭಿಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಭಗವಾನ್‌ ಸ್ಪಷ್ಟನೆ ನೀಡಿದರು.

ವಿಚಾರವಾದಿ ಮಾಯೀಗೌಡ ಅವರು ರಾಜಕಾರಣಿಗಳಾದ ಬಸವ ಲಿಂಗಪ್ಪ, ದೇವರಾಜ ಅರಸು ಮತ್ತು ಮಹಾಕವಿ ಕುವೆಂಪು ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ನಿವೃತ್ತ ಉಪನ್ಯಾಸಕ ಟಿ.ಎ.ತಮ್ಮೇಗೌಡ ಕೃತಿಗಳ ಕುರಿತು ಮಾತನಾಡಿದರು. ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ. ಎಸ್.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟ ವಾಸು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕೆ.ಎಸ್. ಶಿವಕುಮಾರ್, ಲೇಖಕ ಎನ್.ಎಂ.ತಿಮ್ಮೇಗೌಡ ಪತ್ನಿ ಇಂದ್ರಮ್ಮ, ಪುತ್ರಿ ಡಾ.ಪ್ರಿಯಾಂಕ, ಶಿಕ್ಷಕ ಶೀಳನೆರೆ ಶಿವಕುಮಾರ್, ಗ್ರಾಮಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಇದ್ದರು

ಪೊಲೀಸ್ ಸರ್ಪಗಾವಲು: ಕೆ.ಎಸ್.ಭಗವಾನ್ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ಕಾರ್ಯ ಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು