ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕಲ್ಲು ಗಣಿ ಮಾಲೀಕರಿಗೆ ‘ಕೈಕುಳಿ’ ಅಸ್ತ್ರ

ಕ್ರಷರ್‌ಗಳ ಪ್ರಭಾವದಿಂದ ಅನ್ಯ ಉದ್ಯೋಗ ನೋಡಿಕೊಂಡ ಭೋವಿ ಸಮುದಾಯದ ಜನ
Last Updated 28 ಜುಲೈ 2020, 19:30 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಿಷೇಧಗೊಂಡ ಸಂದರ್ಭಗಳಲ್ಲಿ ಗಣಿ ಮಾಲೀಕರು ‘ಕೈಕುಳಿ’ ಅಸ್ತ್ರ ಪ್ರಯೋಗ ಮಾಡುತ್ತಾರೆ. ವಾಸ್ತವವಾಗಿ ಕೈಕುಳಿ ಪ್ರಕ್ರಿಯೆ ಇಲ್ಲದಿದ್ದರೂ ಭೋವಿ ಸಮುದಾಯದ ಕಾರ್ಮಿಕರನ್ನು ಮುಂದಿಟ್ಟುಕೊಂಡು ಗಣಿಗಾರಿಕೆಗೆ ಒತ್ತಾಯಿಸುವುದು ಸಾಮಾನ್ಯವಾಗಿದೆ.

ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗಲಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಬೇಬಿಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿಪುರದ ಭೋವಿ ಸಮುದಾಯದ ಜನರು ಕೈಕುಳಿ ಚಟುವಟಿಕೆಗೆ ಅವಕಾಶ ನೀಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಬೇಬಿಬೆಟ್ಟದಲ್ಲಿ ಕೈಕುಳಿ ಇಲ್ಲದಿದ್ದರೂ ಗಣಿ ಮಾಲೀಕರು ಕಾರ್ಮಿರನ್ನು ಮುಂದಿಟ್ಟುಕೊಂಡು ಹೋರಾಟ ರೂಪಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗಣಿಗಾರಿಕೆ ನಿಷೇಧದಿಂದ ಕೈಕುಳಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರನ್ನು ರಕ್ಷಿಸಲು ಕೈಕುಳಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಮಾಡಲಾಗುತ್ತಿದೆ. ಗಣಿಗಾರಿಕೆ ನಿಷೇಧದ ಸಂದರ್ಭದಲ್ಲಿ ಮಾತ್ರ ಕೈಕುಳಿ ಪ್ರಶ್ನೆ ಏಳುತ್ತಿರುವುದು ಅನುಮಾನಾಸ್ಪದವಾಗಿದ್ದು ಇದು ಕಲ್ಲು ಗಣಿ ಮಾಲೀಕರು ಸೃಷ್ಟಿ ಮಾಡುವ ಕೈಕುಳಿ ನಾಟಕ ಎಂದು ರೈತ ಮುಖಂಡರು ಆರೋಪಿಸುತ್ತಾರೆ.

ಕೆಆರ್‌ಎಸ್‌ ಜಲಾಶಯ ನಿರ್ಮಿಸುವ ಸಂದರ್ಭದಲ್ಲಿ ಕಲ್ಲು ಕೆಲಸ ಮಾಡುವ ಭೋವಿ ಸಮುದಾಯದ ಜನರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಹೊರರಾಜ್ಯಗಳಿಂದ ಕರೆಸಿದ್ದರು. ಜಲಾಶಯ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳದೇ ಇಲ್ಲಿಯೇ ಉಳಿದುಕೊಂಡರು. ಜೀವನೋಪಾಯಕ್ಕೆ ಬೇಬಿಬೆಟ್ಟದಲ್ಲಿ ಕೈಕುಳಿ ಮಾಡಿಕೊಂಡಿರಲು ಅವಕಾಶ ನೀಡಲಾಗಿತ್ತು.

ಕ್ರಮೇಣ ಕಲ್ಲು ಕ್ರಷರ್‌ಗಳು ಬೇಬಿಬೆಟ್ಟಕ್ಕೆ ಲಗ್ಗೆ ಇಟ್ಟ ನಂತರ ಕೈಕುಳಿ ಕಾರ್ಮಿಕರು ಕೆಲಸ ಕಳೆದುಕೊಂಡರು. ಕಾವೇರಿಪುರದ ಜನರು ಕ್ರಷರ್‌ಗಳಲ್ಲೇ ಕಾರ್ಮಿಕರಾದರು. ಕೆಲವರು ಗಾರೆ, ಕೃಷಿ ಕೆಲಸ ಸೇರಿ ಅನ್ಯ ಉದ್ಯೋಗ ನೋಡಿಕೊಂಡರು. ಆಧುನಿಕ ಮೆಗ್ಗರ್‌ ಸ್ಫೋಟದಿಂದಾಗಿ ಕಲ್ಲುಕುಳಿ ಕೆಲಸಕ್ಕೆ ಬೇಡಿಕೆ ಇಲ್ಲದಂತಾಯಿತು.

‘ಕೇವಲ ಕಲ್ಲುಕುಳಿ ನಡೆದಿದ್ದರೆ ಬೇಬಿಬೆಟ್ಟ ನಾಶವಾಗುತ್ತಿರಲಿಲ್ಲ, ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಆಗುತ್ತಿರಲಿಲ್ಲ. ಆಧುನಿಕ ತಂತ್ರಜ್ಞಾನದ ಮೂಲಕ ಪ್ರಾಕೃತಿಕ ಸಂಪನ್ಮೂಲವನ್ನು ಸರ್ವನಾಶ ಮಾಡಲಾಗುತ್ತಿದೆ. ಹೀಗಾಗಿ ತಲತಲಾಂತದಿಂದಲೂ ಕೈಕುಳಿ ಮಾಡಿಕೊಂಡಿದ್ದ ಕಾರ್ಮಿಕರು ಬದುಕು ಕಳೆದುಕೊಂಡಿದ್ದಾರೆ. ಆದರೆ ಗಣಿಗಾರಿಕೆ ನಿಷೇಧ ಎಂದಾಗ ಗಣಿ ಮಾಲೀಕರು ಕೈಕುಳಿ ಹೆಸರಿನಲ್ಲಿ ಜನರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸುತ್ತಾರೆ. ತಮ್ಮ ಉದ್ದೇಶ ಸಾಧನೆಗೆ ಬಡ ಕಾರ್ಮಿಕರನ್ನು ನೆಪ ಮಾಡಿಕೊಂಡಿದ್ದಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪುಗೌಡ ಹೇಳಿದರು.

‘ನಮ್ಮ ತಾತ, ತಂದೆಯ ಕಾಲದಲ್ಲಿ ಕೈಕುಳಿ ಮಾಡುತ್ತಿದ್ದೆವು. ಆದರೆ ಈಗ ಬೇಬಿಬೆಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಕಲ್ಲು ಸ್ಫೋಟ ಮಾಡುತ್ತಿರುವ ಕಾರಣ ಕೈಕುಳಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾವು ಕೃಷಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದೇವೆ’ ಎಂದು ಕಾವೇರಿಪುರದ ಆನಂದ್‌ ಹೇಳಿದರು.

‘ಸರ್ಕಾರದ ನಿರ್ದೇಶನದಂತೆ ಬೇಬಿಬೆಟ್ಟದಲ್ಲಿ ಎಲ್ಲಾ ರೀತಿಯ ಕಲ್ಲು ಗಣಿ ಚಟುವಟಿಕೆ ನಿಷೇಧಿಸಲಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಗಣಿ ಮಾಲೀಕರ ಪಾತ್ರವಿಲ್ಲ

‘ಬೇಬಿಬೆಟ್ಟದಲ್ಲಿ ಈಗಲೂ ಕೈಕುಳಿ ಜೀವಂತವಾಗಿದೆ. ಕ್ರಷರ್‌ಗಳ ಜೊತೆಗೆ ಭೋವಿ ಸಮುದಾಯದ ಜನರು ಕೈಕುಳಿ ಮುಂದುವರಿಸುತ್ತಿದ್ದಾರೆ. ಎಲ್ಲಾ ಗಣಿ ಚಟುವಟಿಕೆ ನಿಷೇಧಿಸಿರುವ ಕಾರಣ ಕಾರ್ಮಿಕರು ಕೈಕುಳಿಗೆ ಅವಕಾಶ ಕೇಳುತ್ತಿದ್ದಾರೆ. ಅವರ ಪ್ರತಿಭಟನೆಯ ಹಿಂದೆ ಗಣಿ ಮಾಲೀಕರ ಪಾತ್ರವಿಲ್ಲ’ ಎಂದು ಕಲ್ಲು ಕ್ರಷರ್‌ ಮಾಲೀಕರ ಸಂಘದ ಅಧ್ಯಕ್ಷ ಕೆ.ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT