ಮಂಡ್ಯ: ಪ್ರೀತಿಸುವಂತೆ ನಾಲ್ವರು ಬಾಲಕರು ಕಿರುಕುಳ ನೀಡುತ್ತಿದ್ದುದರಿಂದ, ತಾಲ್ಲೂಕಿನ ಹನಕೆರೆ ಗ್ರಾಮದ ಬಾಲಕಿ (14) ಮನನೊಂದು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯನ್ನು ಹನಕೆರೆ ಗ್ರಾಮದ ಇಬ್ಬರು, ಕಚ್ಚಿಗೆರೆ ಹಾಗೂ ಮಲ್ಲಯ್ಯನದೊಡ್ಡಿ ಗ್ರಾಮದ ಬಾಲಕರು ರೇಗಿಸುವುದು ಹಾಗೂ ಪ್ರೀತಿಸುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ.
ಮಂಡ್ಯ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಶಾಲೆಯಿಂದ ಬಂದಿದ್ದ ಬಾಲಕಿಯನ್ನು ಬಾಲಕರು ಚುಡಾಯಿಸಿದ್ದಾರೆ. ಬೇರೆ ಯಾರನ್ನೋ ಪ್ರೀತಿಸುತ್ತಿದ್ದೀಯಾ ಎಂದು ಕಿರುಕುಳ ನೀಡಿದ್ದಾರೆ. ಇದನ್ನು ವಿರೋಧಿಸಿ ಬಾಲಕಿ ಮಾತನಾಡಿದ್ದನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರಿಂದ ಬಾಲಕಿ ತೀವ್ರ ಮನನೊಂದಿದ್ದಳು ಎಂದು ಪೋಷಕರು ದೂರಿದ್ದಾರೆ.
ತಂದೆ–ತಾಯಿ ಮನೆಯಲ್ಲಿ ಇಲ್ಲದ ವೇಳೆ ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಮೃತದೇಹವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಿ, ಪರೀಕ್ಷೆಗೆ ಒಳಪಡಿಸಿದ ನಂತರ ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದರು. ನಂತರ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಈ ಸಂದರ್ಭದಲ್ಲಿ ಪೋಷಕರ ರೋದನ ಮುಗಿಲುಮುಟ್ಟುವಂತಿತ್ತು.
ಮಂಡ್ಯ ತಾಲ್ಲೂಕಿನ ಹನಕೆರೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಘಟನೆಯ ಬಳಿಕ ಬಾಲಕರು ಮತ್ತು ಅವರ ಪೋಷಕರು ಪರಾರಿಯಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.