ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಲ್ಲಿ ಆಶಾಭಾವ ಮೂಡಿಸಿದ ಉದ್ಯೋಗ ಮೇಳ

39ಕ್ಕೂ ಹೆಚ್ಚು ಕಂಪನಿಗಳು ಭಾಗಿ, ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣೆ
Last Updated 7 ಸೆಪ್ಟೆಂಬರ್ 2019, 12:06 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾಡಳಿತ, ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಗರದ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಆವರಣದಲ್ಲಿ ಶನಿವಾರ ನಡೆದ ಉದ್ಯೋಗ ಮೇಳ ನಿರುದ್ಯೋಗಿಗಳಲ್ಲಿ ಆಶಾಭಾವ ಮೂಡಿಸಿತು.

ಸುಮಾರು 39ಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ನೂರಾರು ಯುವಜನರು ತಮ್ಮ ಆಯ್ಕೆಯ ಕೆಲಸ ಪಡೆಯಲು ಸಂದರ್ಶನ ನೀಡಿದರು. ಮುಖ್ಯ ದ್ವಾರದ ಬಳಿ ತಾಲ್ಲೂಕುವಾರು ಕೌಂಟರ್‌ ತೆರೆಯಲಾಗಿತ್ತು. ಮೊದಲಿಗೆ ಅರ್ಜಿ ಪಡೆದು ನೋಂದಣಿ ಮಾಡಿಸಿ, ನಂತರ ಸಂದರ್ಶನ ನಡೆಸಲಾಯಿತು.

ಕೆಲವರನ್ನು ಸ್ಥಳದಲ್ಲೇ ಆಯ್ಕೆ ಮಾಡಿಕೊಂಡರೆ ಮತ್ತೆ ಕೆಲವರನ್ನು ಕಂಪನಿಗೆ ಬರಹೇಳಲಾಗುತ್ತಿತ್ತು. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ, ವಿದ್ಯಾಭ್ಯಾಸ ಮುಗಿದಿರುವ, ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದವರು ಕೂಡ ಮೇಳದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ವಿದ್ಯಾರ್ಹತೆಗೆ ಅನುಗುಣವಾಗಿ ಕೆಲಸ ಸಿಗುವ ಭರವಸೆ ಹೊತ್ತು ನಡೆದರು.

‘ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸಿ ಬೆಂಗಳೂರು, ಮೈಸೂರಿಗೆ ಹೋದರೆ ಎಲ್ಲೂ ಕೆಲಸ ಇಲ್ಲ ಎನ್ನುತ್ತಾರೆ. ಎಲ್ಲವೂ ಖಾಸಗಿ ಕನ್ಸಲ್ಟೆಂಟ್‌ಗಳ ನಡುವೆ ಒಳ ಒಪ್ಪಂದಗಳಿಂದ ನೇರವಾಗಿ ಉದ್ಯೋಗವೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಕ್ಕಾಗಿ ಹಣ ಕೊಡಬೇಕಾದ ಸಂದರ್ಭ ನಿರ್ಮಾಣವಾಗಿದೆ. ಸರ್ಕಾರ ಹೆಚ್ಚೆಚ್ಚು ಉದ್ಯೋಗ ಮೇಳ ಆಯೋಜಿಸಿ ಯುವಜನರಿಗೆ ಉದ್ಯೋಗ ಸಿಗುವಂತೆ ಮಾಡಬೇಕು’ ಎಂದು ಉದ್ಯೋಗಿಯೊಬ್ಬರು ಒತ್ತಾಯಿಸಿದರು.

ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಶಿಕ್ಷಣ ಮುಗಿಸಿದ ನಂತರ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಜತೆಗೆ ಉದ್ಯೋಗ ಹುಡುಕುವುದರಲ್ಲಿ ತಲ್ಲೀನರಾಗಿರುತ್ತಾರೆ. ಅಂಥವರಿಗೆ ಉದ್ಯೋಗ ಮೇಳ ನೆರವಾಗಲಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಶ್ರೀನಿವಾಸ್, ಉದ್ಯೋಗ ಮೇಳವು ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಸಿಗುವ ಹಾಗೆ ಕೈಗಾರಿಕೋದ್ಯಮದಲ್ಲಿ ಸುಲಭವಾಗಿ ಕೆಲಸ ಸಿಗುವುದಿಲ್ಲ. ಇದರಲ್ಲಿ ಸಣ್ಣ ಉದ್ಯೋಗ ಪಡೆಯುವುದು ಕಷ್ಟವಾಗಿದೆ. ಆಸಕ್ತರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ತರಬೇತಿ ಪಡೆದ 100ಕ್ಕೂ ಹೆಚ್ಚು ತರಬೇತಿದಾರರಿಗೆ ಪ್ರಮಾಣ ಪತ್ರ ನೀಡಲಾಯಿತು. ಜತೆಗೆ ನಾನಾ ಕೌಶಲ ಕ್ಷೇತ್ರದಲ್ಲಿ ತರಬೇತಿ ಮುಗಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಉದ್ಯೋಗ ಮೇಳದಲ್ಲಿ ವಿಬ್‌ಸಿಟಿ, ಅಮೆಟೋ ಹೆಲ್ತ್ ಕೇರ್, ರುಡ್‌ಸೆಸ್ಟ್, ಯಂಗ್ ಇಂಡಿಯಾ, ಸ್ಯಾನ್ ಎಂಜಿನಿಯರಿಂಗ್ ಅಂಡ್ ಲೋಕೋಮೇಟಿಕ್ ಲಿ, ಶೈನ್ ಗ್ರೂಪ್, ಶಾಹಿ ಎಕ್ಸ್‌ಪೋರ್ಟ್‌ ಮುಂತಾದ ಕಂಪನಿಗಳು ಭಾಗವಹಿಸಿದ್ದವು. ಸುಮಾರು 800ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಂಡರು.

ತಹಸೀಲ್ದಾರ್ ನಾಗೇಶ್, ಪೌರಾಯುಕ್ತ ಲೋಕೇಶ್, ಪ್ರಾಂಶುಪಾಲ ಮಹಾಲಿಂಗು, ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಲಿಂಗರಾಜು, ಕೈಗಾರಿಕಾ ತರಬೇತಿ ಕೇಂದ್ರದ ಮುರುಳೇಶ್, ನಗರಾಭಿವೃದ್ಧಿ ಕೋಶದ ನಿರ್ದೇಶಕ ಟಿ.ಎನ್‌.ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT