ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಯುಗಾದಿ ನೆಪದಲ್ಲಿ ಹಣದ ಮೇಲಾಟ, ತಲೆ ಎತ್ತಿದ ಜೂಜಿನ ಅಡ್ಡಗಳು

ಮೂಕ ಪ್ರೇಕ್ಷಕರಾದ ಪೊಲೀಸರು
Last Updated 31 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಮಂಡ್ಯ: ಯುಗಾದಿ ನೆಪದಲ್ಲಿ ಜಿಲ್ಲೆಯಾದ್ಯಂತ ಜೂಜಾಟ ಆರಂಭವಾಗಿದ್ದು ಯುವಜನರು ಲಕ್ಷದವರೆಗೂ ಬಾಜಿ ಕಟ್ಟುತ್ತಿದ್ದಾರೆ. ಹಳ್ಳಿ ಮನೆಯ ಜಗುಲಿಯ ಮೇಲೆ, ಅರಳಿ ಕಟ್ಟೆಯ ಮೇಲೆ, ಗದ್ದೆ ಬಯಲಿನಲ್ಲಿ, ಹೊಂಗೆ ಮರದ ಕೆಳಗೆ, ತೋಟದ ಮನೆ, ನಾಲೆ ಏರಿ ಮೇಲೆ ಯುವಕರು ಇಸ್ಪೀಟ್‌ ಎಲೆ ಎಣಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಯುಗಾದಿ ಬಂತೆಂದರೆ ಜಿಲ್ಲೆಯಾದ್ಯಂತ ಯುವಜನರ ಬಾಯಲ್ಲಿ ‘ಮೂರೆಲೆ ಆಟ’ದ ಮಾತುಗಳೇ ಉದುರುತ್ತವೆ. ಈ ಯುಗಾದಿಯ ತಗಾದೆಯಲ್ಲಿ ಜೂಜಾಟಕ್ಕೆ ಹಳ್ಳಿ, ನಗರವೆಂಬ ವ್ಯತ್ಯಾಸವಿಲ್ಲ. ಹಳ್ಳಿಯ ಜನರು ಗ್ರಾಮ್ಯ ಪರಿಸರದಲ್ಲಿ ಜೂಜಾಡಿದರೆ ನಗರ, ಪಟ್ಟಣಗಳಲ್ಲಿ ಕ್ಲಬ್‌, ಬಾರ್‌ ಇನ್ನಿತರ ಸ್ಥಳಗಳಲ್ಲಿ ಆಟಕ್ಕಿಳಿಯುತ್ತಾರೆ. ಜೂಜಿನಿಂದ ಜಿಲ್ಲೆಯಾದ್ಯಂತ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು ಇದನ್ನು ತಡೆಯುವುದು ಪೊಲೀಸರಿಗೆ ತಲೆನೋವಾಗಿದೆ.

ಆರು ಜನಕ್ಕೆ ಮೂರು ಇಸ್ಪೀಟ್‌ ಎಲೆ ಹಾಕಿ ಕೇವಲ 2 ನಿಮಿಷದಲ್ಲಿ ಮೂರೆಲೆ ಆಟ ಮುಗಿಸುತ್ತಾರೆ. ಅದೃಷ್ಟದ ಎಲೆ ಬಿದ್ದವರು ಹಣವನ್ನು ಬಾಚಿಕೊಳ್ಳುತ್ತಾರೆ. ‘ಅಂದರ್‌– ಬಾಹರ್‌’ ಅದೃಷ್ಟದ ಆಟವಂತೂ ಕಣ್ಣಂಚಿನಲ್ಲೇ ನಡೆಯುತ್ತದೆ. ರಾಜ, ರಾಣಿ, ಜೋಕರ್‌ ಎಲೆ ಬಿದ್ದವರು ಹಣವನ್ನು ಜೇಬಿಗೆ ತುಂಬಿಕೊಳ್ಳುತ್ತಾರೆ.

ಹಬ್ಬದ ನೆಪದಲ್ಲಿ ಕೆಲ ಕಿಡಿಗೇಡಿಗಳು ಯುವಕರಿಗೆ ಮದ್ಯಪಾನ ಮಾಡಿಸಿ ಹಣ ಕಟ್ಟಿಸುವ ಹಲವು ಪ್ರಕರಣಗಳು ಹಿಂದೆ ನಡೆದಿವೆ. ಯುಗಾದಿ, ವರ್ಷದ ತೊಡಕು ಆಚರಣೆ ಮುಗಿಯುವಷ್ಟರಲ್ಲಿ ಹಲವರು ಸಾಲಗಾರರಾಗಿ ಊರು ಬಿಡುವ ಪರಿಸ್ಥಿತಿ ತಂದುಕೊಳ್ಳುತ್ತಾರೆ. ಹಿಂದೆ ಕೆಲವರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಹಬ್ಬದ ದಿನ ಉರಿವ ಬಿಸಿಲಿನಲ್ಲಿ ಊರಿನ ಬೀದಿಗಳು, ರಸ್ತೆಗಳು ಜೂಜಾಟದ ಅಡ್ಡೆಗಳಾಗಿ ಮಾರ್ಪಾಡಾಗುತ್ತವೆ. ಊರಿನ ಹಿರಿಯರೂ ಇದನ್ನು ಪ್ರಶ್ನೆ ಮಾಡುವುದಿಲ್ಲ. ಪೊಲೀಸರು ಕೂಡ ಮೂಕ ಪ್ರೇಕ್ಷಕರಂತೆ ವರ್ತಿಸುತ್ತಾರೆ. ಹೊರ ಜಿಲ್ಲೆ, ಹೊರರಾಜ್ಯಗಳಲ್ಲಿ ನೆಲೆಸಿರುವ ವಲಸಿಗರು ಕೂಡ ಕೇವಲ ಜೂಜಾಟಕ್ಕಾಗಿ ತವರಿಗೆ ಮರಳುತ್ತಾರೆ. ಪಟ್ಟಣ, ನಗರ ಪ್ರದೇಶದಲ್ಲಿ ಪೊಲೀಸರ ನಿಗಾದಲ್ಲಿಯೇ ಜೂಜಾಟ ನಡೆಯುತ್ತವೆ.

‘ಹಬ್ಬದ ಅಂಗವಾಗಿ ಆಟವಾಡಿಕೊಳ್ಳಲಿ ಎಂಬ ಮನೋಭಾವ ಪೊಲೀಸರಲ್ಲಿದೆ, ಅವರ ನಿರ್ಲಕ್ಷ್ಯ ಮನೋಭಾವ ಸಲ್ಲದು. ಜೂಜಾಟ ಅನಿಷ್ಠ ಆಚರಣೆಯಾಗಿದ್ದು ಕೆಲವರು ಹಬ್ಬಕ್ಕೆ ಕೆಟ್ಟ ಹೆಸರು ತಂದಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಜೂಜು ಅಡ್ಡೆಗಳಿಗೆ ಕಡಿವಾಣ ಹಾಕಬೇಕು. ಜೂಜುಕೋರರನ್ನು ಬಂಧಿಸಬೇಕು’ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ವಿಶ್ವನಾಥ್ ಒತ್ತಾಯಿಸಿದರು.

ಮೋಜಿನ ಆಟದಿಂದ ತೊಂದರೆ ಇಲ್ಲ: ಕೆಲವರು ಹಣಕ್ಕಷ್ಟೇ ಜೂಜಾಡಿದರೆ ಇನ್ನೂ ಕೆಲವರು ಮೋಜಿಗಾಗಿ ಜೂಜಾಡುತ್ತಾರೆ. ಮೋಜಿಗೆ ಆಡುವ ಆಟದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹೋಳಿಗೆ ಉಂಡು, ಬೇವು–ಬೆಲ್ಲ ಮೆದ್ದು ಸಮಯ ಕಳೆಯಲು ಆಟಕ್ಕಿಳಿಯುತ್ತಾರೆ. ಎಲೆಗಳನ್ನು ಬಣ್ಣಕ್ಕೆ, ಅಂಕಿಗಳಿಗೆ ಅನುಗುಣವಾಗಿ ಜೋಡಿಸುತ್ತಾ (ಸೆಟ್‌ ಆಟ) ಸಂಭ್ರಮಿಸುತ್ತಾರೆ.

ಇಸ್ಪೀಟ್‌ ಇಷ್ಟಪಡದವರು ‘ಪಚ್ಚಿ’ ಆಟಕ್ಕೆ ಮೊರೆ ಹೋಗುತ್ತಾರೆ. ಮನೆಯಲ್ಲಿ ಮಹಿಳೆಯರು, ಮಕ್ಕಳು ಚೌಕಾಕಾರದ, ಮನೆಗಳಿರುವ ಘಟ್ಟ ಬರೆದುಕೊಂಡು ‘ಚೌಕಾಬಾರ’ ಆಡುತ್ತಾರೆ. ಇನ್ನು ಕೆಲವರು ಅಳಗುಳಿ ಮನೆ ಆಟವನ್ನೂ ಆಡುತ್ತಾರೆ.

ಶ್ರೀಮಂತರಿಂದ ರಮ್ಮಿ ಟೂರ್ನಿ...
ಜಿಲ್ಲೆಯಲ್ಲಿ ಜೂಜಾಟಕ್ಕೆ ಶಿಕ್ಷಕರು, ವಕೀಲರು, ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಹಲವು ವೃತ್ತಿನಿರತ ವಿದ್ಯಾವಂತರೂ ದಾಸರಾಗಿದ್ದಾರೆ. ಇವರೆಲ್ಲರೂ ಮಂಡ್ಯದ ಕ್ಲಬ್‌ಗಳು, ಹೊವಲಯದ ರೆಸಾರ್ಟ್‌ಗಳನ್ನೇ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಹಬ್ಬದ ಅಂಗವಾಗಿ ಕ್ಲಬ್‌ಗಳು ಐಶಾರಾಮಿ ಕಾರು ಸೇರಿದಂತೆ ಬೆಲಬಾಳುವ ವಸ್ತುವನ್ನಿಟ್ಟು ‘ರಮ್ಮಿ ಟೂರ್ನಿ’ ಆಯೋಜನೆ ಮಾಡಿದ್ದಾರೆ.

‘ಮಂಡ್ಯ ಜಿಲ್ಲೆಯಲ್ಲಿ ರಾಜಕಾರಣಗಳೂ ಜೂಜಾಟದ ದಾಸರಾಗಿದ್ದಾರೆ. ಪೊಲೀಸರು ಮನಸ್ಸು ಮಾಡಿದರೆ ಇವರೆಲ್ಲರನ್ನು ಮಟ್ಟಹಾಕಬಹುದು. ಆದರೆ ಪೊಲೀಸರು ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ರೈತರೊಬ್ಬರು ಆಶ್ರೋಕ ವ್ಯಕ್ತಪಡಿಸಿದರು.

**
ಜೂಜಾಟ ತಡೆಯಲು ಪೊಲೀಸ್‌ ಸಿಬ್ಬಂದಿಯ ಹಲವು ತಂಡಗಳನ್ನು ರಚನೆ ಮಾಡಲಾಗಿದೆ. ಅಡ್ಡೆಗಳ ಮೇಲೆ ನಿಗಾ ಇಡಲು ಜಿಲ್ಲೆಯ ಎಲ್ಲಾ ಠಾಣೆಗಳ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
– ಎನ್‌.ಯತೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT