ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕುತ್ತಿವೆ ಚರಂಡಿ: ಪಟ್ಟಣದೆಲ್ಲೆಡೆ ದುರ್ನಾತ

ಕೆ.ಆರ್‌.ಪೇಟೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕವಿಲ್ಲ; ಮೂಗುಮುಚ್ಚಿ ಓಡಾಡುವ ಜನ, ರೋಗ ಭೀತಿ
Last Updated 2 ಮಾರ್ಚ್ 2020, 11:25 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪಟ್ಟಣದಾದ್ಯಂತ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಇಲ್ಲದೆ ಒಳಚರಂಡಿ ತುಂಬಿ ರಸ್ತೆಯಲ್ಲೆಲ್ಲಾ ಹರಿಯುತ್ತಿದ್ದು, ರೋಗಗಳ ಭೀತಿಯಲ್ಲಿ ಜನರು ಬದುಕುವಂತಾಗಿದೆ.

ಪಟ್ಟಣದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಒಳಚರಂಡಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಪಟ್ಟಣದಲ್ಲಿ ಪರಿಸ್ಥಿತಿ ತದ್ವಿರುದ್ಧ ವಾಗಿದ್ದು, ಒಳಚರಂಡಿಗಳು ಪಟ್ಟಣದ ಅಂದ ಗೆಡಿಸಿದೆ. ಕೊಳಚೆ ನೀರು ಶುದ್ಧೀಕರಣ ಘಟಕ ಇಲ್ಲದೆ ಒಳಚರಂಡಿಗಳು ತುಂಬಿ ತುಳುಕುತಿದ್ದು, ಪಟ್ಟಣದ ರಸ್ತೆಗಳೆಲ್ಲಾ ಗಬ್ಬು ನಾರುತ್ತಿದೆ. ದುರ್ವಾಸನೆಯ ನಡುವೆಯೇ ಮೂಗು ಮುಚ್ಚಿಕೊಂಡು ಸಾರ್ವಜನಿಕರು ಸಂಚರಿಸುವ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಘನ ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ನೀರು ಶುದ್ಧೀಕರಣ ಘಟಕಗಳಿಗೆ ಹರಿಹರಪುರ ರಸ್ತೆಯ ಕತ್ತರಘಟ್ಟ ಸಮೀಪ 16 ಎಕರೆ ಜಾಗ ಮಂಜೂರಾಗಿದ್ದು, ಕಾಮಗಾರಿ ಕುಂಟುತ್ತಾ ಸಾಗಿದೆ. ಪಟ್ಟಣದಲ್ಲಿನ ನಿವಾಸಿಗಳು ನರಕಯಾತನೆ ಅನುಭವಿ ಸುತ್ತಿದ್ದಾರೆ. ಹೊರಗಿನಿಂದ ಬಂದವರು ಪಟ್ಟಣದಲ್ಲಿನ ದೈನೇಸಿ ಸ್ಥಿತಿ ನೋಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಕ್ಕಿ ಹರಿಯುವ ಒಳಚರಂಡಿಗಳು: ಪಟ್ಟಣದ ಬಹುತೇಕ ಕಡೆ ಒಳಚರಂಡಿ ಗಳು ತುಂಬಿ ಹರಿಯುತ್ತಿವೆ. ಮಲಮೂತ್ರ ಮಿಶ್ರಿತ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರಿಗೆ ವಾಕರಿಕೆ ತರಿಸುತ್ತಿದೆ. ಇದರಿಂದ ವ್ಯಾಪಾರ ವಹಿವಾಟುಗಳಿಗೂ ಅಡಚಣೆ ಯಾಗುತ್ತಿದ್ದು, ಅನ್ಯ ಮಾರ್ಗವಿಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿ ರುತ್ತದೆ. ಶಾಲಾ, ಕಾಲೇಜು, ಕೆಲಸಕ್ಕೆ ತೆರಳಲು ಬಸ್‌ ನಿಲ್ದಾಣಕ್ಕೆ ಸಾಗುತ್ತಿರು ವಾಗ ವಾಹನಗಳು ರಭಸದಿಂದ ಹೋಗುವಾಗ ಕೊಳಚೆ ನೀರು ಹಾರಿ ತೀವ್ರ ಇರುಸು ಮುರುಸು ಎದುರಿಸುತ್ತಿದ್ದು, ವಿಧಿ ಇಲ್ಲದೆ ಅಲ್ಲೇ ತಿರುಗಾಡುವಂತಾಗಿದೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಸೇರಿದಂತೆ ತಾಲ್ಲೂಕು ಕ್ರೀಡಾಂಗಣದ ಬಳಿ ಸಮಸ್ಯೆ ವಿಪರೀತವಾಗಿದ್ದು, ಇದು ಕೊಳೆಗೇರಿಯೋ ಪಟ್ಟಣವೋ ಎಂಬ ಸಂದೇಹ ಮೂಡಿಸುತ್ತದೆ. ಇಲ್ಲಿ ನಿತ್ಯ ಒಂದಿಲ್ಲ ಒಂದು ಸರ್ಕಾರಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿಯೊಬ್ಬರೂ ಕೊಳಚೆ ನೀರಿನ ಅಭಿಷೇಕ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು.

ಪುರಸಭೆಯ ಪಕ್ಕದಲ್ಲೇ ಕೊಳಚೆ: ನಗರದಲ್ಲಿ ಕೊಳಚೆ ನೀರು ಉಂಟು ಮಾಡುತ್ತಿರುವ ರಾಡಿಗೆ ಪುರಸಭೆ ಕಚೇರಿ ಪಕ್ಕದಲ್ಲೇ ಹರಿಯುತ್ತಿರುವುದು ತಾಜಾ ಸ್ವಚ್ಛತೆಗೆ ಹಿಡಿದ ಕೈಗನ್ನಡಿಯಾಗಿದೆ. ಇತ್ತೀಚೆಗೆ ಸ್ವಚ್ಛ ಮಾಡಲು ಚರಂಡಿಯನ್ನು ತೆಗೆದು ಹಾಗೆ ಬಿಟ್ಟಿರುವುದರಿಂದ ಕೊಳಚೆ ನೀರು ಹರಿದು ಇಡೀ ರಸ್ತೆ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಪುರಸಭೆಯ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ಮಾಡಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಎರಡು ತಿಂಗಳಿನಿಂದ ವ್ಯಾಪಾರ ಕುಂಠಿತವಾಗಿದೆ.

‌‘ಈ ಸಂಬಂಧ ಅಧಿಕಾರಿಗಳನ್ನು ಪ್ರಶ್ನಿಸಿದರೆ ನೋಟಿಸ್ ನೀಡುತ್ತಾರೆ ಎಂಬ ಭಯದಿಂದ ಗಬ್ಬುವಾಸನೆಯ ಯಾತನೆಯನ್ನು ಅನುಭವಿಸುತ್ತಿದ್ದೇವೆ’ ಎಂದು ವಾಣಿಜ್ಯ ಮಳಿಗೆಯ ಅಂಗಡಿ ಮಾಲೀಕರು ಹೇಳುತ್ತಾರೆ.

ಒಳಚರಂಡಿಗೆ ಅಕ್ರಮ ಸಂಪರ್ಕ

ಕೆ.ಆರ್‌.ಪೇಟೆಯಲ್ಲಿ ಈಗಾಗಲೇ ಒಳಚರಂಡಿಯ ಪೈಪ್‌ಗಳಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಳ್ಳಲಾಗಿದೆ. ವಿವಿಧೆಡೆ ಶೌಚಾಲಯ, ಸ್ನಾನದ ಗೃಹದ ನೀರನ್ನು ರಸ್ತೆಗೆ ಹರಿಸಲಾಗುತ್ತಿದ್ದು, ಇದರ ನಿರ್ವಹಣೆ ಪುರಸಭೆಗೆ ತಲೆನೋವಾಗಿ ಪರಿಣಮಿಸಿದೆ.

ನೂತನವಾಗಿ ನಿರ್ಮಾಣವಾದ ಮನೆಗಳ ಮಾಲೀಕರು ಪುರಸಭೆ ಅನುಮತಿ ಪಡೆಯದೆ ರಾತ್ರೋರಾತ್ರಿ ಒಳಚರಂಡಿಗೆ ಸಂಪರ್ಕ ಕಲ್ಪಿಸಿಕೊಳ್ಳುತ್ತಿದ್ದಾರೆ. ಇದು ಪುರಸಭೆಗೆ ಸಾಕಷ್ಟು ನಷ್ಟ ಉಂಟು ಮಾಡುತ್ತಿದ್ದು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ಹೊಸ ಬಡಾವಣೆ ಬಗ್ಗೆ ಕಾಳಜಿ ಇಲ್ಲ

ಪಟ್ಟಣದ ಹೊಸದಾಗಿ ಜಯನಗರ ಬಡಾವಣೆ ಬೆಳೆಯುತ್ತಿದ್ದು, ಅತಿ ಹೆಚ್ಚು ಮನೆಗಳು ನಿರ್ಮಾಣವಾಗುತ್ತಿವೆ. ಮೂಲಸೌಕರ್ಯ ಅಭಿವೃದ್ಧಿ ಶುಲ್ಕ ಮತ್ತು ಕಂದಾಯವನ್ನು ಪ್ರತಿ ವರ್ಷ ವಸೂಲಿ ಮಾಡುತ್ತಾರೆ. ಆದರೆ, ಮೂಲ ಸೌಲಭ್ಯಗಳನ್ನು ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಸುಮಾರು ವರ್ಷಗಳಿಂದ ಚರಂಡಿ ನೀರು ಹರಿಯುತ್ತಿದೆ. ಆದರೆ, ಇದನ್ನು ಸರಿಪಡಿಸುವಂತೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಾರೆ.

ಎಲ್ಲೆಡೆ ಮಲಿನ ನೀರು

ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ರಸ್ತೆಯ ಗುಂಡಿಗಳಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ಬಡಾವಣೆಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಕಟ್ಟಡವನ್ನು ಬಾಡಿಗೆಗೆ ನೀಡಿದ್ದು, ಮಲಿನ ನೀರು ಹೆಚ್ಚಾಗಿದೆ. ಖಾಲಿ ನಿವೇಶನದಲ್ಲಿ ಹರಿಯುವ ಕೊಳಚೆ ನೀರಿನಲ್ಲಿ ಹಂದಿಗಳು ಓಡಾಡುತ್ತಿರುವುದರಿಂದ ರೋಗಗಳ ಭೀತಿ ಕಾಡುತ್ತಿದೆ. ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.

–ರಂಜಿನಿ ಕೆ.ಪಿ, ಜಯನಗರದ ನಿವಾಸಿ

ಅಧಿಕಾರಿಗಳ ಬೇಜವಾಬ್ದಾರಿ

ಕೊಳಚೆ ನೀರಿನ ಅವಾಂತರದ ಕುರಿತು ಪುರಸಭೆ ಮುಖ್ಯಾಧಿಕಾರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಾಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ನಮ್ಮ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಗಮನ ಹರಿಸುತ್ತಿಲ್ಲ. ಆಶ್ವಾಸನೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ.

–ತಿಮ್ಮೇಗೌಡ, 1ನೇ ವಾರ್ಡ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT