ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಸಂಸ್ಕೃತಿ ಹೊಂದಿರುವ ಏಕೈಕ ದೇಶ ಭಾರತ

ಮೇಲುಕೋಟೆಯಲ್ಲಿ 5 ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಆರಂಭ; ವಿಷ್ಣುವರ್ಧನ್ ರೆಡ್ಡಿ ಹೇಳಿಕೆ
Last Updated 19 ಫೆಬ್ರುವರಿ 2020, 12:16 IST
ಅಕ್ಷರ ಗಾತ್ರ

ಮೇಲುಕೋಟೆ: ‘ವಿಭಿನ್ನ ಸಂಸ್ಕೃತಿ ಇರುವ ವಿಶ್ವದ ಏಕೈಕ ರಾಷ್ಟ್ರವಾದ ಭಾರತದಲ್ಲಿ ರಾಷ್ಟ್ರೀಯ ಭಾವೈಕ್ಯ ಬೆಳೆಸುವ ಉದ್ದೇಶದಿಂದ ದೇಶದಾದ್ಯಂತ ರಾಷ್ಟ್ರೀಯ ಭಾವೈಕ್ಯ ಶಿಬಿರ ನಡೆಸಲಾಗುತ್ತಿದೆ’ ಎಂದು ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ನೆಹರೂ ಯುವ ಕೇಂದ್ರ ಸಂಘಟನೆಯ ಉಪಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ಹೇಳಿದರು.

ಪಟ್ಟಣದ ಪುತಿನ ಕಲಾ ಭವನದಲ್ಲಿ ಮಂಗಳವಾರ ಆರಂಭಗೊಂಡ 5 ರಾಷ್ಟ್ರೀಯ ಭಾವೈಕ್ಯ ಶಿಬಿರ ಮತ್ತು ಜಾನಪದ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದರು.

‘ಭಾರತದ ಎಲ್ಲಾ ಪ್ರದೇಶ ಮತ್ತು ಸಂಸ್ಕೃತಿಯ ಜನಾಂಗದವರೂ ಒಂದೆಡೆ ಸೇರಿ ತಮ್ಮ ಕಲೆ ಅನಾವರಣ ಮಾಡುವ ಜೊತೆಗೆ ರಾಷ್ಟ್ರೀಯ ಭಾವೈಕ್ಯದ ಜಾಗೃತಿ ಮೂಡಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಏಕ ಭಾರತ, ಶ್ರೇಷ್ಠಭಾರತ ಈಗಾಗಲೇ ರೂಪುಗೊಂಡಿದೆ. ಭಾರತದಾದ್ಯಂತ 268 ಸ್ಥಳಗಳಲ್ಲಿ ಭಾವೈಕ್ಯ ಶಿಬಿರ ನಡೆಸಲಾಗುತ್ತಿದೆ’ ಎಂದರು.

‘ಸಮಾಜದ ಎಲ್ಲಾ ಹಿಂದುಳಿದ ಜನಾಂಗಗಳ ಯುವ ಜನರು ಒಂದಾಗಿ ಶ್ರೇಷ್ಠಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಇದಕ್ಕಾಗಿ ಭಾರತದ ಭವ್ಯ ಇತಿಹಾಸವಿರುವ ಮೇಲುಕೋಟೆಯಂತಹ 28 ಕೇಂದ್ರಗಳಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರತಿ ಶಿಬಿರದಲ್ಲೂ 25ಕ್ಕೂ ರಾಜ್ಯಗಳ ಯುಪ್ರತಿನಿಧಿಗಳು ಕಲಾ ನೈಪುಣ್ಯತೆಯೊಂದಿಗೆ ಭಾಗವಹಿಸುತ್ತಿದ್ದಾರೆ’ ಎಂದು ಹೇಳಿದರು.

‘ವಿಭಿನ್ನ ಸಂಸ್ಕೃತಿ ಹೊಂದಿದ ವಿವಿಧ ರಾಜ್ಯಗಳ ಪ್ರತಿಯೊಬ್ಬರೂ ತಮ್ಮ ವಿಶೇಷತೆಯೊಂದಿಗೆ ಶ್ರೇಷ್ಠಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಇದು ಸರ್ಧಾರ್‌ ವಲ್ಲಭಾ ಬಾಯ್‌ ಪಟೇಲ್ ವರ ಕನಸಾಗಿತ್ತು. ನರೇಂದ್ರಮೋದಿ ನೇತೃತ್ವದ ಭಾರತ ಸರ್ಕಾರ ನೆಹರೂ ಯುವ ಕೇಂದ್ರದ ಮೂಲಕ ರಾಷ್ಟ್ರೀಯ ಭಾವೈಕ್ಯ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡ.ಎಂ.ವಿ.ವೆಂಕಟೇಶ್‌ ಮಾತನಾಡಿ ‘ವಸುದೈವ ಕುಟುಂಬಕಂ ನಮ್ಮದೇಶದ ಶ್ರೇಷ್ಠ ಸಂಸ್ಕೃತಿ. ಭಾರತ 5000 ವರ್ಷಗಳ ಶ್ರೇಷ್ಠ ಇತಿಹಾಸ ಹೊಂದಿದೆ. ಅತಿಥಿ ದೇವೂಭವ ಎಂಬ ಶ್ರೇಷ್ಠ ಮಾನವೀಯ ಮೌಲ್ಯಹೊಂದಿದ ಜಗತ್ತಿನ ಏಕೈಕ ದೇಶ ಭಾರತ. ಶ್ರೇಷ್ಠ ಸಂವಿಧಾನವನ್ನು ಹೊಂದುವ ಮೂಲಕ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲುತ್ತಿದೆ’ ಎಂದರು.

‘ವಿಭಿನ್ನ ಭಾಷೆ, ಕಲೆ, ಆಚಾರ ವಿಚಾರಗಳನ್ನು ಹೊಂದಿದ್ದರೂ ರಾಷ್ಟ್ರೀಯ ಭಾವೈಕ್ಯ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವ ಬಿತ್ತಲಾಗಿದೆ. ಮೊದಲು ನಾನೊಬ್ಬ ಭಾರತೀಯ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಭಾರತದ ಶ್ರೇಷ್ಠ ಸಂಸ್ಕೃತಿ ಹೊಂದಿದ ಭವ್ಯತಾಣ ಮೇಲುಕೋಟೆಯ ಶಿಬಿರದಲ್ಲಿ ಭಾಗವಹಿಸುತ್ತಿರುವ ವಿವಿಧ ರಾಜ್ಯದ ಯುವ ಪ್ರತಿನಿಧಿಗಳು ವಿಶಿಷ್ಟ ಅನುಭವ ಪಡೆಯಲಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ. ಯಾಲಕ್ಕೀಗೌಡ, ಎನ್.ವೈ.ಕೆ ರಾಜ್ಯ ನಿರ್ದೇಶಕ ಅತುಲ್ ಜೆ. ನಿಕಮ್, ಮಂಡ್ಯಜಿಲ್ಲಾ ಸಮನ್ವಯಾಧಿಕಾರಿ ಅನಂತಪ್ಪ, ಮೈಸೂರು ಜನಸಂಪರ್ಕ ಕೇಂದ್ರದ ಉಪ ನಿರ್ದೇಶಕಿ ಡಾ.ಪೂರ್ಣಿಮಾ, ಹಿರಿಯ ಐಎಎಸ್ ಅಧಿಕಾರಿ ನಾಗೇಂದ್ರ, ವಿದ್ವಾಂಸ ಲಕ್ಷ್ಮಿ ತಾತಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT