ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ಲಸಿಕೆ

ಚುಚ್ಚುಮದ್ದು ನೀಡುವ ಕಾರ್ಯ 27 ಕೇಂದ್ರಗಳಿಗೆ ವಿಸ್ತರಣೆ, ಅಡ್ಡ ಪರಿಣಾಮ ಕಂಡುಬಂದಿಲ್ಲ
Last Updated 19 ಜನವರಿ 2021, 12:17 IST
ಅಕ್ಷರ ಗಾತ್ರ

ಮಂಡ್ಯ: ಮೊದಲ ಹಂತದ ಕೋವಿಡ್‌ ಲಸಿಕೆ ಹಾಕುವ ಅಭಿಯಾನ ಜಿಲ್ಲೆಯಾದ್ಯಂತ ಭರದಿಂದ ಸಾಗಿದ್ದು ಬುಧವಾರದಿಂದ (ಜ.20) ಜಿಲ್ಲೆಯ 27 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸರ್ಕಾರದ ಮಾರ್ಗಸೂಚಿಯಂತೆ ವೈದ್ಯರು, ಶುಶ್ರೂಷೆ ಸಿಬ್ಬಂದಿ, ಎಎನ್‌ಎಂ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪ್ರಯೋಗಾಲಯ ತಂತ್ರಜ್ಞರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲ ದಿನ ಮಿಮ್ಸ್‌ ಆಸ್ಪತ್ರೆ, ಎಲ್ಲಾ ತಾಲ್ಲೂಕು ಆಸ್ಪತ್ರೆ, ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 477 ಮಂದಿ ಲಸಿಕೆ ಪಡೆದಿದ್ದಾರೆ.

2ನೇ ದಿನ ಲಸಿಕೆ ಹಾಕುವ ಕೇಂದ್ರಗಳ ಸಂಖ್ಯೆ 24ಕ್ಕೆ ವಿಸ್ತರಣೆಯಾಗಿದ್ದು 1,538 ಮಂದಿಗೆ ಔಷಧಿ ನೀಡಲಾಗಿದೆ. ಇಲ್ಲಿಯವರೆಗೂ 2 ಸಾವಿರಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದಿದ್ದು ಯಾರಿಗೂ ವ್ಯಕಿರಿಕ್ತ ಪರಿಣಾಮ ಕಾಣಿಸಿಕೊಂಡಿಲ್ಲ. ಆದರೂ ಲಸಿಕೆ ನೀಡಿದ ನಂತರ ಅರ್ಧ ಗಂಟೆಯವರೆಗೆ ಅವರ ಮೇಲೆ ವೈದ್ಯರು ನಿಗಾ ವಹಿಸುತ್ತಿದ್ದಾರೆ. ಅಡ್ಡ ಪರಿಣಾಮ ಉಂಟಾದರೂ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 15,316 ಮಂದಿ ಆರೋಗ್ಯ ಸಿಬ್ಬಂದಿ ಇದ್ದು ಎಲ್ಲರಿಗೂ ಹಂತಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಹೆಸರು ನೋಂದಣಿ ಮಾಡಿಸಿಕೊಂಡ ಸಿಬ್ಬಂದಿಗಷ್ಟೇ ಔಷಧ ಹಾಕಲಾಗುತ್ತಿದೆ.

ಜಿಲ್ಲೆಯ 74 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಅವಕಾಶವಿದೆ. ಆದರೆ ಮೊದಲ ಹಂತದಲ್ಲಿ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು ಅಷ್ಟು ಕೇಂದ್ರಗಳ ಅಗತ್ಯವಿಲ್ಲ. 3, 4ನೇ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡುವ ಪ್ರಕ್ರಿಯೆ ಆರಂಭಗೊಂಡ ನಂತರ ಎಲ್ಲಾ ಕೇಂದ್ರಗಳಲ್ಲೂ ಲಸಿಕೆ ವಿತರಣೆ ಮಾಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸರ್ವರಿಗೂ ಲಸಿಕೆ: ‘ಕೋವಿಡ್‌ ಬಂದವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂಬ ತಪ್ಪು ತಿಳಿವಳಿಕೆ ಜನರಲ್ಲಿ ಇದೆ. ಸೋಂಕು ಬಾರದಂತೆ ತಡೆಯುವ ರೋಗ ನಿರೋಧಕ ಶಕ್ತಿ ಲಸಿಕೆಯಲ್ಲಿದ್ದು ರೋಗ ಹರಡಂತೆ ತಡೆಯಲು ಸರ್ವರಿಗೂ ಲಸಿಕೆ ನೀಡಲಾಗುತ್ತದೆ. ವಿವಿಧ ರೋಗಗಳ ತಡೆಗೆ ಮಕ್ಕಳಿಗೆ ಹಂತಹಂತವಾಗಿ ಚುಚ್ಚುಮದ್ದು ಹಾಕುವಂತೆ ಕೋವಿಡ್‌ ತಡೆಗೆ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಗುರಿ ಸರ್ಕಾರಕ್ಕಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಜನವರಿ ಅಂತ್ಯದವರೆಗೂ ಮೊದಲ ಹಂತದ ಲಸಿಕೆ ನೀಡುವ ಕಾರ್ಯ ನಡೆಯಲಿದೆ. 2ನೇ ಹಂತದಲ್ಲಿ ಪೊಲೀಸರು, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಲಸಿಕೆ ನೀಡಲಾಗುವುದು. ನಂತರ ಸರ್ಕಾರ ನೀಡುವ ಕಾರ್ಯಸೂಚಿಯಂತೆ ಸಾರ್ವಜನಿಕರಿಗೆ ಲಸಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಭಯ ಬೇಡ: ಕೋವಿಡ್‌ ಲಸಿಕೆ ಸಂಬಂಧ ಕೆಲವರು ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೇ ನಡೆಯುತ್ತಿದೆ. ಬೇರೆ ಬೇರೆ ದೇಶಗಳಲ್ಲಿ ಲಸಿಕೆ ಪಡೆದ ನಂತರ ಅಪಾರ ಸಂಖ್ಯೆ ಜನರು ಮೃತಪಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ತಪ್ಪು ಸುದ್ದಿಗಳನ್ನು ನಂಬದಂತೆ ವೈದ್ಯರು ಸಲಹೆ ನೀಡುತ್ತಾರೆ.

‘ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಲಸಿಕೆಯಲ್ಲಿದೆ. ಇತರ ಔಷಧಿಗಳಂತೆ ಇದನ್ನು ಸಾಕಷ್ಟು ಸಂಶೋಧನೆಯ ನಂತರ ಬಿಡುಗಡೆ ಮಾಡಲಾಗಿದೆ. ಇದರ ಬಗ್ಗೆ ಜನರು ಅನುಮಾನ ಪಡಬಾರದು. ಭಯ ದೂರ ಮಾಡುವ ಉದ್ದೇಶದಿಂದಲೇ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಲಾಗುತ್ತಿದೆ’ ಎಂದು ಮಂಚೇಗೌಡ ಹೇಳಿದರು.

ಮಂಗಳವಾರ, ಗುರುವಾರ ಇಲ್ಲ

ತಾಲ್ಲೂಕು ಆಸ್ಪತ್ರೆ ಹಾಗೂ ಇತರ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ, ಗುರುವಾರಗಳಂದು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳು ಇರುತ್ತವೆ. ಮಕ್ಕಳು, ಮಹಿಳೆಯರಿಗೆ ನಿಯಮಿತವಾಗಿ ಅನ್ಯ ಕಾಯಿಲೆಗಳ ಸಂಬಂಧ ಲಸಿಕೆ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಕೋವಿಡ್‌ ಲಸಿಕೆ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.

ಅದರಂತೆ ಮಂಗಳವಾರ ಮಿಮ್ಸ್‌ ಆಸ್ಪತ್ರೆ ಹಾಗೂ ಆದಿಚುಂಚಗಿರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾತ್ರ ಕೋವಿಡ್‌ ಲಸಿಕೆ ನೀಡಲಾಗಿದೆ. ಕೇವಲ 100 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT