ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ ಉತ್ಸವ: ಅಗತ್ಯ ಸಿದ್ಧತೆಗೆ ಸೂಚನೆ

ಸಿ.ಎಸ್.ಪುಟ್ಟರಾಜು ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ, ಮೂಲಸೌಕರ್ಯ ಒದಗಿಸಲು ತಾಕೀತು
Last Updated 12 ಮಾರ್ಚ್ 2020, 10:19 IST
ಅಕ್ಷರ ಗಾತ್ರ

ಮೇಲುಕೋಟೆ: ಮೇಲುಕೋಟೆಯಲ್ಲಿ ಏಪ್ರಿಲ್ 2ರಂದು ವೈರಮುಡಿ ಉತ್ಸವ ನಡೆಸಲು ಅಗತ್ಯ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಸಿ.ಎಸ್ ಪುಟ್ಟರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಯುಗಾದಿ ಹಬ್ಬದ ನಂತರ ಜಾತ್ರಾ ಮಹೋತ್ಸವ ನಡೆಯುವ ಕಾರಣ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಹೀಗಾಗಿ, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸ್ವಚ್ಛತೆಗೆ ಒತ್ತು ನೀಡಬೇಕು. ಮೇಲುಕೋಟೆಯ ಪ್ರಮುಖ ಬೀದಿಗಳನ್ನು ನಿರಂತರವಾಗಿ ಸ್ವಚ್ಛಗೊಳಿಸಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆ, ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ ಹಾಗೂ ಆಂಬುಲೆನ್ಸ್, ವೈದ್ಯರ ಸೇವೆ ಒದಗಿಸಬೇಕು ಎಂದು ಸೂಚಿಸಿದರು.

ಯೋಗನರಸಿಂಹಸ್ವಾಮಿ ಬೆಟ್ಟದ ರಾಜಗೋಪುರ ಹಾಗೂ ಕಲ್ಯಾಣಿಗೆ ವಿಶೇಷ ದೀಪಾಲಂಕಾರ ಮಾಡಬೇಕು. ಕಣಿವೆಯಿಂದ ದೇವಾಲಯದವರೆಗೆ ಎಲ್ಲಾ ಬೀದಿಗಳು ವರ್ಣಮಯ ವಿದ್ಯುತ್ ದೀಪಗಳ ತೋರಣಗಳಿಂದ ಸಿಂಗಾರ ಮಾಡಬೇಕು. ಚೆಲುವನಾರಾಯಣ ಸ್ವಾಮಿಯ ಉತ್ಸವ ಬೀದಿಗಳಲ್ಲಿ ದೀಪಾಲಂಕಾರ ಮಾಡಬೇಕು ಎಂದರು.

ಮಂಡ್ಯ, ಕೆ.ಆರ್.ಪೇಟೆ, ಮೈಸೂರು, ಬೆಂಗಳೂರು ಹಾಗೂ ಹಾಸನ ಭಾಗದಿಂದ ವಿಶೇಷ ಬಸ್ ಸೌಕರ್ಯ ಕಲ್ಪಿಸಬೇಕು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಏಪ್ರಿಲ್ 1 ಮತ್ತು ವೈರಮುಡಿ ಉತ್ಸವದಂದು, ಮರುದಿನ ಮಂಡ್ಯ, ಪಾಂಡವಪುರ ರೈಲ್ವೆ ನಿಲ್ದಾಣದಿಂದ ನೇರ ಬಸ್ ಸೌಕರ್ಯ ಕಲ್ಪಿಸಬೇಕು. ಮಂಡ್ಯ, ಮೈಸೂರಿನಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ಭದ್ರತೆ ಹೆಚ್ಚಿಸಿ: ವೈರಮುಡಿ ಉತ್ಸವ ಮತ್ತು ಜಾತ್ರಾ ಮಹೋತ್ಸವದ ವೇಳೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಬೇಕು. ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳವನ್ನು ಗುರುತಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ‘ವೈರಮುಡಿ ಉತ್ಸವ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತವಾಗಿದ್ದು, ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಶ್ರದ್ಧೆಯಿಂದ ಮಾಡಬೇಕು. ಭಕ್ತರ ಸ್ನೇಹಿಯಾಗಿ ಜಾತ್ರಾ ಮಹೋತ್ಸವ ನಡೆಸಬೇಕು’ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಯಾಲಕ್ಕಿಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಶೈಲಜಾ ಇದ್ದರು.

ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ

ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕರು, ಕಣಿವೆಯಿಂದ ಮೇಲುಕೋಟೆಯವರೆಗೆ ರಸ್ತೆ ಹಳ್ಳಗುಂಡಿಗಳಿಂದ ಕೂಡಿದೆ. ಕೂಡಲೇ ಈ ಗುಂಡಿಗಳನ್ನು ಮುಚ್ಚಿಸಬೇಕು. ವೈರಮುಡಿ ಜಾತ್ರಾ ಮಹೋತ್ಸವದ ನಂತರ ಚತುಷ್ಪಥ ರಸ್ತೆಯ ಕಾಮಗಾರಿಗಳನ್ನು ಉತ್ತಮವಾಗಿ ಮಾಡಬೇಕು. ಬೆಟ್ಟದ ರಸ್ತೆಯ ಗುಂಡಿಗಳನ್ನೂ ಮುಚ್ಚಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಪುಟ್ಟರಾಜು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT