ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ: ಹರ್ಷೋದ್ಘಾರದ ನಡುವೆ ವೈರಮುಡಿ ಉತ್ಸವ

Last Updated 1 ಏಪ್ರಿಲ್ 2023, 15:53 IST
ಅಕ್ಷರ ಗಾತ್ರ

ಮೇಲುಕೋಟೆ (ಮಂಡ್ಯ ಜಿಲ್ಲೆ): ಸಾವಿರಾರು ಭಕ್ತರ ಜಯಘೋಷಗಳ ನಡುವೆ ಐತಿಕಾಸಿಕ ಮೇಲುಕೋಟೆ ಕ್ಷೇತ್ರದಲ್ಲಿ ಶನಿವಾರ ರಾತ್ರಿ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಸಡಗರ, ಸಂಭ್ರಮದಿಂದ ನೆರವೇರಿತು.

ವಜ್ರಖಚಿತ ವೈರಮುಡಿ ಧರಿಸಿದ್ದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತರು ‘ಗೋವಿಂದ, ಗೋವಿಂದ’ ಮಂತ್ರ ಜಪಿಸಿದರು. ಗಂಡುಭೇರುಂಡಸ್ವರೂಪಿ ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ಅಲಂಕಾರಸ್ವರೂಪಿಯಾಗಿದ್ದ ಚೆಲುವನಾರಾಯಣಸ್ವಾಮಿ ಉತ್ಸವ ದೇವಾಲಯದ ಹೊರಕ್ಕೆ ಬರುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿದರು.

ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 8.30ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನಿಡಲಾಯಿತು.

ವೈರಮುಡಿ ಉತ್ಸವ ಸಾಗುವ ರಾಜಬೀದಿ ತಳಿರು, ತೋರಣ, ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಬೀದಿಯ ಎರಡೂ ಬದಿಯಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ರಾಜ್ಯ ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದಲೂ ಭಕ್ತರು ಬಂದಿದ್ದರು. ಮೇಲುಕೋಟೆಯ ವಸತಿ ಗೃಹಗಳು, ಛತ್ರಗಳು ಭಕ್ತರಿಂದ ಕಿಕ್ಕಿರಿತು ತುಂಬಿದ್ದವು.

ಮಂಡ್ಯದ ಜಿಲ್ಲಾ ಖಜಾನೆ ಕಚೇರಿಯಲ್ಲಿದ್ದ ವೈರಮುಡಿ ಹಾಗೂ ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಬೆಳಿಗ್ಗೆ ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಪೂಜೆ ಸಲ್ಲಿಸುವ ಮೂಲಕ ಹೊರ ತೆಗೆದರು. ನಂತರ ಮಂಡ್ಯದ ಲಕ್ಷ್ಮಿಜನಾರ್ಧನ ದೇವಾಲಯದಲ್ಲಿ ಆಭರಣ ಪೆಟ್ಟಿಗೆಗೆ ಪೂಜೆ ಸಲ್ಲಿಸಲಾಯಿತು. ವಿಶೇಷ ವಾಹನದಲ್ಲಿ ಪೊಲೀಸ್‌ ಭದ್ರತೆಯೊಂದಿಗೆ ಮೇಲುಕೋಟೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಆಭರಣ ಪೆಟ್ಟಿಗೆ ತೆರೆಯಲಾಯಿತು. ದೇವಾಲಯದ ಸ್ಥಾನೀಕರು ಆಭರಣ ಜೋಡಣೆ (ಪರ್ಕಾವಣೆ) ಪೂರ್ಣಗೊಳಿಸಿ ಕಿರೀಟ ಸಿದ್ಧಗೊಳಿಸಿದರು. ನಂತರ ಮಹಾಮಂಗಳಾರತಿಯೊಂದಿಗೆ ಚೆಲುವನಾರಾಯಣ ಉತ್ಸವ ಮೂರ್ತಿಯ ಮುಡಿಗೇರಿಸಲಾಯಿತು. ಉತ್ಸವ ಭಾನುವಾರ ಬೆಳಿಗ್ಗೆ 3 ಗಂಟೆಯವರೆಗೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT