ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಜೆಡಿಎಸ್‌ಗೆ ಪಾಠ ಕಲಿಸಿ

ಮಡಿವಾಳ ಸಮಾಜದ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಮನವಿ
Last Updated 1 ಡಿಸೆಂಬರ್ 2019, 13:58 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳ ಬಾಗಿಲು ಮುಚ್ಚಿಸಿದ ಕಾಂಗ್ರೆಸ್‌, ಜೆಡಿಎಸ್‌ ಮುಖಂಡರಿಗೆ ಈ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಯಶಸ್ವಿನಿ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಡಿವಾಳ ಜನಾಂಗದ ಸಮಾವೇಶ ಹಾಗೂ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಮಂಡ್ಯ ಜಿಲ್ಲೆಯ ರೈತರ ಜೀವನದೊಂದಿಗೆ ಚೆಲ್ಲಾಟವಾಡಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರಿಗೆ ಪಾಠ ಕಲಿಸಬೇಕು. ರೈತ ಪರವಾಗಿ ದುಡಿಯಲು ಸಿದ್ಧರಿರುವ, ರೈತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರ ಸರ್ಕಾರಕ್ಕೆ ಶಕ್ತಿ ತುಂಬಲು ಹಿಂದುಳಿದ ವರ್ಗದ ಜನ ಮುಂದಾಗಬೇಕು ಎಂದು ಹೇಳಿದರು.

ತಾಲ್ಲೂಕಿನ ಅಭಿವೃದ್ಧಿಯ ಉದ್ದೇಶ ಮುಂದಿಟ್ಟುಕೊಂಡು ನಾರಾಯಣಗೌಡ ಬಿಜೆಪಿ ಸೇರಿದ್ದಾರೆ. ನಾರಾಯಣಗೌಡರು ಹಾಗೂ ಬಿಜೆಪಿ ನಡುವೆ ಯಾವುದೇ ಹಣಕಾಸಿನ ವ್ಯವಹಾರ ನಡೆದಿಲ್ಲ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಚುನಾವಣೆಯ ಸಂದರ್ಭವಾದ್ದರಿಂದ ಸುಳ್ಳು ಹೇಳಿದ್ದಾರೆ. ಸಮಾಜದಲ್ಲಿನ ಶೋಷಿತ ವರ್ಗಗಳು, ಅಸಂಘಟಿತ ಸಮಾಜಗಳು, ಹಿಂದುಳಿದ ವರ್ಗಗಳನ್ನು ಅಪಾರವಾಗಿ ಪ್ರೀತಿಸುವ ಯಡಿಯೂರಪ್ಪ ಅವರ ಸರ್ಕಾರ ಉಳಿಸಲು ಶ್ರಮಿಸಬೇಕು ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯೆ ತೇಜಸ್ವಿನಿಗೌಡ ಮಾತನಾಡಿ, ‘ಅಭಿವೃದ್ಧಿ ವಿರೋಧಿಯಾದ ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ಸರ್ಕಾರವನ್ನು ಪದಚ್ಯುತಗೊಳಿಸಿದ 17 ಶಾಸಕರು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದಾರೆ. 14 ತಿಂಗಳ ಕಾಲ ರಾಜ್ಯದ ಅಭಿವೃದ್ಧಿಯನ್ನು ಮರೆತು ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಪರಿಣಾಮವಾಗಿ ರಾಜ್ಯ ಸಂಕಷ್ಟ ಎದುರಿಸಬೇಕಾಯಿತು. ತಾಲ್ಲೂಕಿನ ಹೆಣ್ಣು ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ’ ಎಂದು ದೂರಿದರು.

ಮಡಿವಾಳ ಸಮಾಜದ ಮುಖಂಡ ಕೌಟಿಲ್ಯ ರಘು ಮಾತನಾಡಿ, ‘ಹಿಂದುಳಿದ ವರ್ಗಗಳು ಹಾಗೂ ಶೋಷಿತ ವರ್ಗಗಳ ಜನರಿಗೆ ಸಾಮಾಜಿಕ ಮತ್ತು ರಾಜಕೀಯ ಸ್ಥಾನಮಾನ ನೀಡಲು ಬದ್ಧರಾಗಿರುವ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಮುಖಂಡರಾದ ಅಶೋಕ್, ಬೂಕಹಳ್ಳಿ ಮಂಜು, ಶೀಳನೆರೆ ಸಿದ್ದೇಶ್, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT