ಶ್ರೀರಂಗಪಟ್ಟಣಕ್ಕೆ ಲಗ್ಗೆಯಿಟ್ಟ ಇತಿಹಾಸಪ್ರಿಯರು

7
ದನಿವಿಲ್ಲದ ನಡಿಗೆ; ಸ್ಮಾರಕಗಳ ಮಾಹಿತಿ ಆಲಿಕೆ

ಶ್ರೀರಂಗಪಟ್ಟಣಕ್ಕೆ ಲಗ್ಗೆಯಿಟ್ಟ ಇತಿಹಾಸಪ್ರಿಯರು

Published:
Updated:
Deccan Herald

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಭಾನುವಾರ ನಡೆದ ಪಾರಂಪರಿಕ ನಡಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳ ಇತಿಹಾಸಪ್ರಿಯರ ದಂಡೇ ಪಾಲ್ಗೊಂಡಿತ್ತು.

ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ಆರಂಭವಾದ ಪಾರಂಪರಿಕ ನಡಿಗೆ 6 ತಾಸು ನಿರಾತಂಕವಾಗಿ ಕಾಲ ನಡೆಯಿತು. ಥಾಮಸ್‌ ಇನ್‌ಮಾನ್ಸ್‌ ಜೈಲು, ಬಿದ್ದುಕೋಟೆ, ಜೀಬಿ ಗೇಟ್‌, ಕರ್ನಲ್‌ ಬೇಯ್ಲಿ ಡಂಜನ್‌, ಒಬೆಲಿಸ್ಕ್‌ ಸ್ಮಾರಕ ಸ್ತಂಭ, ರಾಕೆಟ್‌ ತಯಾರಿಕಾ ತಾಣ, ಗುಲಾಂ ಅಲಿಖಾನ್‌ ಗುಂಬಸ್‌, ಸಬ್ಬಲ್‌ರಾಣಿ ಬೋರೆ, ರಣಗಂಭ, ಟಿಪ್ಪು ಸಮಾಧಿ ಸ್ಥಳ ಗುಂಬಸ್‌ ಸೇರಿದಂತೆ ಮುಖ್ಯ ಸ್ಮಾರಕಗಳನ್ನು ಕಣ್ತುಂಬಿಕೊಂಡರು.

ಕೋಟೆ, ಬುರುಜು, ಕಂದಕ, ಐತಿಹಾಸಿಕ ಪ್ರಾರ್ಥನಾ ಸ್ಥಳಗಳನ್ನು ಎಡತಾಕಿ ತಮ್ಮ ಕುತೂಹಲವನ್ನು ತಣಿಸಿಕೊಂಡರು. ಸುಡು ಬಿಸಿಲನ್ನೂ ಲೆಕ್ಕಿಸದೆ ಸ್ಮಾರಕದಿಂದ ಸ್ಮಾರಕದೆಡೆಗೆ ದುಡು ದುಡು ಹೆಜ್ಜೆ ಹಾಕಿದರು. ಇತಿಹಾಸ ಸಂಶೋಧಕ ಧರ್ಮೇಂದ್ರಕುಮಾರ್‌, ಶಾಸನತಜ್ಞ ಮಹಮದ್‌ ಕಲೀಮುಲ್ಲಾ ಪಟ್ಟಣದ ಪರಂಪರೆ ಮತ್ತು ಸ್ಮಾರಕಗಳ ಮಹತ್ವ ಕುರಿತು ಮಾಹಿತಿ ನೀಡಿದರು.

ಸಂಸ್ಕೃತಿ ಚಿಂತಕ ನಾ.ಸು.ನಾಗೇಶ್‌, ಕತೆಗಾರ ನಾಗಮಂಗಲ ಕೃಷ್ಣಮೂರ್ತಿ, ಲೇಖಕರಾದ ಹರವು ದೇವೇಗೌಡ, ಕ್ಯಾತನಹಳ್ಳಿ ಚಂದ್ರಣ್ಣ, ಪತ್ರಕರ್ತ ವಸಂತಕುಮಾರ್‌, ಶಶಿ ಅಪೂರ್ವ, ಅನಾರ್ಕಲಿ ಸಲೀಂ, ಪುರಾತತ್ವ ಸಂಗ್ರಹಕಾರ ರಾಮಕೃಷ್ಣ, ಎಂಜಿನಿಯರ್‌ ಉಮೇಶ್‌, ಟಿ.ಡಿ. ನಾಗರಾಜು, ಪ್ರಿಯಾ ರಮೇಶ್‌, ವೈರಮುಡಿ ಅವರನ್ನು ಒಳಗೊಂಡ ತಂಡ ಸ್ಮಾರಕಗಳ ಐತಿಹಾಸಿಕ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿತು.

ಕುಸಿಯುತ್ತಿರುವ ಕೋಟೆ, ವಿರೂಪಗೊಂಡಿರುವ ಬುರುಜು, ಸ್ಮಾರಕ ಸ್ತಂಭಗಳು, ಗಿಡ ಗಂಟಿಗಳ ನಡುವೆ ಮರೆಯಾಗುತ್ತಿರುವ ಇನ್‌ಮಾನ್ಸ್‌ ಡಂಜನ್‌, ಗುರುತೇ ಸಿಗದಂತೆ ಮುಚ್ಚಿ ಹೋಗುತ್ತಿರುವ ಕಂದಕ, ಅತಿಕ್ರಮಕ್ಕೆ ಒಳಗಾಗಿರುವ ರಾಕೆಟ್‌ ತಯಾರಿಕಾ ತಾಣ, ನಿರ್ವಹಣೆ ಇಲ್ಲದ ಮದ್ದಿನ ಮನೆಗಳು, ಮಣ್ಣಿನಲ್ಲಿ ಹೂತು ಹೋಗುತ್ತಿರುವ ಅರಮನೆಗಳ ಅವಶೇಷಗಳ ದುಸ್ಥಿತಿಗೆ ಇತಿಹಾಸಪ್ರಿಯರು ಮಮ್ಮಲ ಮರುಗಿದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್‌ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು. ಈ ನಡಿಗೆ ಟಿಪ್ಪು ಸಮಾಧಿ ಸ್ಥಳ ಗುಂಬಸ್‌ನಲ್ಲಿ ಅಂತ್ಯಗೊಂಡಿತು. ಗುಂಬಸ್‌ನ ಹುಲ್ಲು ಹಾಸಿನ ಮೇಲೆ ಸ್ಮಾರಕಗಳ ರಕ್ಷಣೆ ಕುರಿತು ಒಂದು ತಾಸು ಚರ್ಚೆ ನಡೆಯಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !