ಜಲಮೂಲ ಸಂರಕ್ಷಣೆಗೆ ಎಲ್ಲರೂ ಪಣ ತೊಡಲಿ

ಶನಿವಾರ, ಜೂಲೈ 20, 2019
25 °C
ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎಸ್. ಪ್ರಕಾಶ್ ಸಲಹೆ

ಜಲಮೂಲ ಸಂರಕ್ಷಣೆಗೆ ಎಲ್ಲರೂ ಪಣ ತೊಡಲಿ

Published:
Updated:
Prajavani

ಮೇಲುಕೋಟೆ: ಕಲುಷಿತಗೊಳ್ಳುತ್ತಿರುವ ಜಲಮೂಲಗಳು ಸಂರಕ್ಷಣೆ ಮಾಡದಿದ್ದರೆ ಮನುಷ್ಯನ ಉಳಿಗಾಲವಿಲ್ಲ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪಿ.ಎಸ್. ಪ್ರಕಾಶ್ ಎಚ್ಚರಿಕೆ ನೀಡಿದರು.

ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಆವರಣದಲ್ಲಿ ಡಿಎಸ್‌ಸಿಇ ಸಿವಿಲ್ ಎಂಜಿನಿಯರಿಂಗ್ ಸಮುದಾಯ ಸೇವಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

ನದಿಗಳನ್ನು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಕಸವನ್ನು ಸಮರ್ಪಕವಾಗಿ ವಿಂಗಡಿಸಬೇಕು. ಅರಣ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು. ಪ್ರಪಂಚದಲ್ಲಿ ಕನಿಷ್ಠ ಶೇ 30ರಷ್ಟು ಕಾಡು ಇರಬೇಕು. ಆದರೆ, ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಶೇ 15ಕ್ಕಿಂತ ಕಡಿಮೆ ಕಾಡು ಇದೆ. ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಎಂದರು.

ಮಂಡ್ಯ ಪಿ.ಇ.ಟಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ರಾಮಲಿಂಗಯ್ಯ, ‘ಕುಡಿಯುವ ನೀರು ಕಲುಷಿತವಾದರೆ ಅನೇಕ ಕಾಯಿಲೆಗಳು ಬರುತ್ತವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಹೀಗಾಗಿ, ಎಲ್ಲರೂ ಶುದ್ಧ ನೀರನ್ನೇ ಕುಡಿಯಬೇಕು. ಮನೆ, ಶಾಲೆ, ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡಬೇಕು’ ಎಂದರು.

ಡಿಎಸ್‌ಸಿಇ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ 200 ವಿದ್ಯಾರ್ಥಿಗಳು ಮೇಲುಕೋಟೆಯ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಪರಿಸರ ಹಾಗೂ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು 12 ತಂಡಗಳಲ್ಲಿ ಪೌರಕಾರ್ಮಿಕರ ಜೊತೆ ಸ್ವಚ್ಛತಾ ಕಾರ್ಯ ಮಾಡಿದರು.

ಸರ್ಕಾರಿ ಬಾಲಕರ ಶಾಲೆಯ ಮಕ್ಕಳು ಮನೆಮನೆಗೆ ತೆರಳಿ ನೀರು ಮತ್ತು ನೈರ್ಮಲ್ಯದ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು. ಉತ್ತಮವಾಗಿ ಸ್ವಚ್ಛತಾ ಕಾರ್ಯ ಮಾಡಿದ 3 ತಂಡಗಳಿಗೆ ತಲಾ ₹5 ಸಾವಿರ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದಯಾನಂದ ಸಾಗರ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮರಾಜು, ಉಪ ಪ್ರಾಂಶುಪಾಲ ಡಾ. ರಾಮಕೃಷ್ಣ, ಪತ್ರಕರ್ತ ಸತೀಶ್ ಕುಮಾರ್, ಮೇಲುಕೋಟೆ ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್, ಕಾರ್ಯದರ್ಶಿ ಶೈಲಜಾ, ಬಾಲಕರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷೆ ಪವಿತ್ರಾ, ಕಾರ್ಯಕ್ರಮ ಸಂಚಾಲಕ ಪ್ರೊ.ಜಿ.ಪಿ ಶಿವಶಂಕರ್, ಪ್ರೊ.ಸಂಜೀವ್, ಶಿಕ್ಷಕರಾದ ಮಹಾಲಕ್ಷ್ಮಿ, ಆನಂದ್, ಪ್ರಭಾರಿ ಮುಖ್ಯಶಿಕ್ಷಕ ಸಂತಾನರಾಮನ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !