ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24X7 ಕುಡಿಯುವ ನೀರಿನ ಯೋಜನೆ ಏನಾಯ್ತು?

ಎರಡು ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ, ಅರ್ಧಕ್ಕೆ ನಿಂತ ಟ್ಯಾಂಕ್‌ ಕೆಲಸ, ಅಪಾಯಕ್ಕೆ ಆಹ್ವಾನ
Last Updated 14 ಅಕ್ಟೋಬರ್ 2019, 11:25 IST
ಅಕ್ಷರ ಗಾತ್ರ

ಮಂಡ್ಯ: ನಗರಕ್ಕೆ 24X7 ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಕೇಂದ್ರ ಪುರಸ್ಕೃತ ಅಮೃತ್‌ (ಅಟಲ್‌ ನಗರ ನವೀಕರಣ ಹಾಗೂ ಪುನರುಜ್ಜೀವನ) ಯೋಜನೆಯಡಿ 2017ರಲ್ಲೇ ಆರಂಭವಾದ ಕಾಮಗಾರಿ ಎರಡು ವರ್ಷಗಳು ಕಳೆದರೂ ಅಂತಿಮ ಹಂತಕ್ಕೆ ಬಂದಿಲ್ಲ.

ಕುಡಿಯುವ ನೀರು ಸೇರಿ ಉದ್ಯಾನ, ಒಳಚರಂಡಿ ಕಾಮಗಾರಿಗೆ 2017ರ ಸೆ.8ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಚಾಲನೆಗೂ ಆರು ತಿಂಗಳು ಮೊದಲೇ ಕಾಮಗಾರಿ ಆರಂಭಗೊಂಡಿತ್ತು. ಮುಖ್ಯಮಂತ್ರಿ ಅವರ ದಿನಾಂಕ ಸಿಗದ ಕಾರಣ ಅಧಿಕಾರಿಗಳು ಉದ್ಘಾಟನೆಯನ್ನೇ ಆರು ತಿಂಗಳು ಎಳೆದಾಡಿದ್ದರು. ಕೆಲಸ ಆರಂಭವಾಗಿ ಇಲ್ಲಿ 2 ವರ್ಷ ಎಂಟು ತಿಂಗಳು ಕಳೆದಿವೆ. 12 ತಿಂಗಳಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 30 ತಿಂಗಳಾದರೂ ಮುಗಿಯದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಕಾವೇರಿ ನದಿ ಸಮೀಪವಿದ್ದರೂ ನಾಲ್ಕು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಕೆಲವು ಬಡಾವಣೆಗಳಿಗೆ ವಾರಕ್ಕೊಮ್ಮೆ ನೀರು ಬರುತ್ತಿದೆ. ಹೀಗಾಗಿ 24X7 ಕುಡಿಯುವ ನೀರು ಪಡೆಯುವ ಕನಸು ಜನರಲ್ಲಿ ಸಂತಸ ಸೃಷ್ಟಿಸಿತ್ತು. ಆದರೆ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಜನರ ಕನಸು ಕನಸಾಗೇ ಉಳಿಯುವಂತಾಗಿದೆ.

ಕುಡಿಯುವ ನೀರಿನ ಕಾಮಗಾರಿ ಜಲಮಂಡಳಿ ಉಸ್ತುವಾರಿಯಲ್ಲಿ ನಡೆಯುತ್ತಿದ್ದು, ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ₹113 ಕೋಟಿ, ಐದು ವರ್ಷಗಳ ನಿರ್ವಹಣೆಗೆ ₹124 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾವೇರಿ ನದಿಯ ವೆಲ್ಲೆಸ್ಲಿ ಸೇತುವೆ ಬಳಿಯಿಂದ ಗಣಂಗೂರು ಬಾರೆ ನೀರು ಶುದ್ಧೀಕರಣ ಘಟಕದಿಂದ ನಗರಕ್ಕೆ ನೀರು ಪೂರೈಸುವ ಯೋಜನೆ ಇದಾಗಿದ್ದು, ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ವರ್ಷದ ಹಿಂದೆಯೇ ತೂಬಿನಕೆ ರೆವರೆಗೂ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಬಂದಿತ್ತು. ಈಗ ಅದು ಕಲ್ಲಹಳ್ಳಿ ಬಳಿ ಕುಂಟುತ್ತಾ ಸಾಗುತ್ತಿದೆ.

ಅಮೃತ್‌ ಕಾಮಗಾರಿಯು ವಸತಿ ಸಚಿವರಾಗಿದ್ದ ಅಂಬರೀಷ್‌ ಅವರ ಕನಸಿನ ಯೋಜನೆಯಾಗಿತ್ತು. ಅವರು ಮುಖ್ಯಮಂತ್ರಿ ಅವರನ್ನೇ ಕರೆದುಕೊಂಡು ಬಂದು ಕಾಮಗಾರಿಗೆ ಚಾಲನೆ ಕೊಡಿಸಿದ್ದರು. ಸಚಿವ ಸ್ಥಾನ ಕಳೆದುಕೊಂಡ ನಂತರವೂ ಅವರು 2018ರ ಜೂನ್‌ 5ರಂದು ಮಂಡ್ಯಕ್ಕೆ ಭೇಟಿ ನೀಡಿ, ಅಮೃತ್‌ ಯೋಜನೆ ಕಾಮಗಾರಿಗಳನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಅವರು ಸೂಚನೆ ನೀಡಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಅಂಬರೀಷ್‌ ನಿಧನರಾದ ಕಾರಣ ಅಧಿಕಾರಿಗಳಿಗೆ ನೀಡಿದ್ದ ಗಡುವಿನ ಬಗ್ಗೆ ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಅಮೃತ್‌ ಯೋಜನೆ ಕಾಮಗಾರಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಯೋಜನೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ಆರೋಪಿಸಿದರು.

ಓವರ್‌ಹೆಡ್‌ ಟ್ಯಾಂಕ್‌ ಕಾಮಗಾರಿ ಸ್ಥಗಿತ: ಕಾವೇರಿ ನದಿಯಿಂದ ಹರಿದು ಬಂದ ನೀರನ್ನು ಸಂಗ್ರಹಿಸಲು ನಗರದಾದ್ಯಂತ 10 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲು ಚಾಲನೆ ನೀಡಲಾಗಿತ್ತು. ಕಳೆದ ಎರಡು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಇಲ್ಲಿಯವರೆಗೆ ಒಂದು ಟ್ಯಾಂಕ್‌ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಬಹುತೇಕ ಟ್ಯಾಂಕ್‌ಗಳು ಉದ್ಯಾನದೊಳಗೆ ನಿರ್ಮಾಣಗೊಳ್ಳುತ್ತಿದ್ದು, ವಿಹಾರಿಗಳಿಗೆ ತೊಂದರೆಯಾಗುತ್ತಿದೆ. ಕಟ್ಟಡಕ್ಕೆ ಪೋಲು ಕಟ್ಟಿ ನಿಲ್ಲಿಸಿದ್ದು, ಅದು ಬಿದ್ದರೆ ಏನು ಗತಿ ಎಂಬ ಭೀತಿ ನಿರ್ಮಾಣವಾಗಿದೆ.

ಬಾಲಭವನ ಉದ್ಯಾನದಲ್ಲಿ ಕಳೆದ ಎರಡು ವರ್ಷಗಳಿಂದ ಟ್ಯಾಂಕ್‌ ಕಾಮಗಾರಿ ನಡೆಯುತ್ತಿದೆ. ಸಿಮೆಂಟ್‌ ಹಾಕುವ ಹಂತಕ್ಕೆ ಬಂದು ಕಾಮಗಾರಿ ಸ್ಥಗಿತಗೊಂಡಿದೆ. ಪೋಲುಗಳು ಕಳಚಿಬೀಳುವ ಅಪಾಯದ ಹಂತಕ್ಕೆ ಬಂದಿದೆ ಎಂದು ಅಶೋಕ್‌ ನಗರದ ನಿವಾಸಿ ಶಿವರಾಜು ಹೇಳಿದರು.

ನಿರ್ವಹಣೆ ಕಾಣದ ಉದ್ಯಾನ: ಅಮೃತ್‌ ಯೋಜನೆ ಅಡಿ ನಗರದ ಬಾಲಭವನ ಉದ್ಯಾನ ಅಭಿವೃದ್ಧಿಗೊಳಿಸಲಾಗಿದೆ. ಕಾಮಗಾರಿ ವರ್ಷದ ಹಿಂದೆಯೇ ಮುಗಿದಿದೆ. ಆದರೆ, ನಿರ್ವಹಣೆ ಕೊರತೆಯಿಂದಾಗಿ ಉದ್ಯಾನದಲ್ಲಿರುವ ಕಲ್ಲು ಬೆಂಚುಗಳು ಕಳಚಿ ಬಿದ್ದಿವೆ. ವಿದ್ಯುತ್‌ ದೀಪಗಳು ಹಾಳಾಗಿದ್ದು, ರಾತ್ರಿಯ ವೇಳೆ ವಿಹಾರ ಮಾಡಲು ನಾಗರಿಕರು ಭಯಪಡಬೇಕಾದ ಸ್ಥಿತಿ ಇದೆ.

ಅಮೃತ್ ಕಾಮಗಾರಿ ಪೂರ್ಣಗೊಳಿಸುವುದಕ್ಕೂ ಮೊದಲೇ ನೀರಿನ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೈಪ್‌ಲೈನ್‌ ಕಾಮಗಾರಿಗೆ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡಿಲ್ಲ. 2020ರ ಮಾರ್ಚ್‌ ವೇಳೆಗೆ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು.

-ಸಿ.ಎನ್‌.ಮಹದೇವು, ಕಾರ್ಯಪಾಲಕ ಎಂಜಿನಿಯರ್‌, ಜಲಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT