ಮಂಗಳವಾರ, ಫೆಬ್ರವರಿ 25, 2020
19 °C
ಕಾಲುವೆಗಳಿಗೆ ನೀರು ಬಿಡುವುದಿಲ್ಲ ಎಂಬ ಅಧಿಕಾರಿಗಳ ಹೇಳಿಕೆಗೆ ರೈತರು ಕಂಗಾಲು, ಕಬ್ಬು ಉಳಿಸಿಕೊಳ್ಳಲು ಪರದಾಟ

ಶ್ರೀರಂಗಪಟ್ಟಣ: ನಾಲೆಗೆ ಬಾರದ ನೀರು, ಒಣಗಿದ ಭತ್ತದ ಪೈರು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಲ್ಲಿ ಬೇಸಿಗೆ ಬೆಳೆಗೆ ಆಗುವಷ್ಟು ನೀರಿದೆ ಎಂಬ ಮಹದಾಸೆ ಯಿಂದ ಭತ್ತ, ಕಬ್ಬು ಬಿತ್ತನೆ ಮಾಡಿದ ರೈತರು, ನಾಲೆಗಳಿಗೆ ನೀರು ಬಿಡುವುದಿಲ್ಲ ಎಂಬ ಅಧಿಕಾರಿಗಳ ಹೇಳಿಕೆಯಿಂದ ಕಂಗಾಲಾಗಿದ್ದಾರೆ.

ಕಾವೇರಿ ನದಿ ಒಡ್ಡಿನ ನಾಲೆಗಳ ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸಲು ಕಾವೇರಿ ನ್ಯಾಯಾಧಿಕರಣ ನಿರ್ಬಂಧ ವಿಧಿಸಿರುವುದು ರೈತರನ್ನು ದಿಕ್ಕೆಡಿಸಿದೆ. ಒಡ್ಡಿನ ನಾಲೆಗಳಾದ ವಿರಿಜಾ, ಚಿಕ್ಕದೇವರಾಯಸಾಗರ ಮತ್ತು ಬಂಗಾರದೊಡ್ಡಿ ನಾಲೆಗಳ ಬಯಲುಗಳು ಬೆಂಗಾಡಿನಂತಾಗಿವೆ. ನಾಲೆಗಳನ್ನು ತೋಡಿದ 350 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಹೊಡೆತ ಬಿದ್ದಿದೆ. ವರ್ಷಪೂರ್ತಿ ಕಾವೇರಿ ನೀರುಣ್ಣುತ್ತಿದ್ದವರು ದಿಗ್ಮೂಢ ರಾಗಿದ್ದಾರೆ. ಭತ್ತದ ಬೆಳೆಯ ಮಾತಿರಲಿ; ಬೆಳೆದು ನಿಂತಿರುವ ಕಬ್ಬು ಉಳಿಸಿ ಕೊಳ್ಳಲು ರೈತರು ಪರದಾಡುವ ಸ್ಥಿತಿ ಬಂದಿದೆ. ಮುಂಗಾರು ಮಳೆ ಶುರುವಾಗಲು ಇನ್ನೂ ಮೂರು ತಿಂಗಳು ಬೇಕಿದ್ದು, ಅಲ್ಲಿಯವರೆಗೆ ಹೇಗಪ್ಪಾ ಎಂಬ ಚಿಂತೆ ರೈತರದ್ದು.

ಪಟ್ಟಣ ಮತ್ತು ಗಂಜಾಂನ ಕೃಷಿ ಭೂಮಿಗೆ ನೀರುಣಿಸುವ ಬಂಗಾರದೊಡ್ಡಿ ನಾಲೆ ಮೈಸೂರು ಸೀಮೆಯಲ್ಲೇ ಮೊದಲ ನಾಲೆ. ಕಂಠೀರವ ನರಸರಾಜ ಒಡೆಯರ್‌ (1638–59) ತೋಡಿಸಿದ ಈ ನಾಲೆ 42 ಕ್ಯುಸೆಕ್‌ ನೀರು ಹರಿಯುವ ಸಾಮರ್ಥ್ಯ ಹೊಂದಿದೆ. ಈ ನಾಲೆಯ ವ್ಯಾಪ್ತಿಯಲ್ಲಿ 998 ಎಕರೆ ಕೃಷಿ ಭೂಮಿ ಇದ್ದು, ಶೇ 50ರಷ್ಟು ಕಬ್ಬು, 30ರಷ್ಟು ತೋಟಗಾರಿಕೆ ಮತ್ತು 20ರಷ್ಟು ಭತ್ತ ಬೆಳೆಯುವ ಪ್ರದೇಶ ಇದೆ.

ಬಲಮುರಿ ಬಳಿ ಆರಂಭವಾಗುವ ವಿರಿಜಾ ನಾಲೆಯನ್ನು ಚಿಕ್ಕದೇವರಾಜ ಒಡೆಯರ್‌ (1673–1704) ತೋಡಿಸಿದ್ದು. 550 ಕ್ಯುಸೆಕ್‌ ನೀರು ಹರಿಯುವ ಸಾಮರ್ಥ್ಯದ ಈ ನಾಲೆಯ ವ್ಯಾಪ್ತಿಯಲ್ಲಿ 13,244 ಎಕರೆ ಕೃಷಿ ಭೂಮಿ ಇದೆ. ಈ ಪೈಕಿ ಶೇ 70ರಷ್ಟು ಕಬ್ಬು ಬೆಳೆಯಲಾಗುತ್ತದೆ. ಎಡಮುರಿ (ಸೇಟಿ ಕಟ್ಟೆ) ಒಡ್ಡಿನ ಬಳಿ ಆರಂಭವಾಗುವ ಚಿಕ್ಕದೇವರಾಜಸಾಗರ ನಾಲೆ ಕೂಡ ಚಿಕ್ಕದೇವರಾಜ ಒಡೆಯರ್‌ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಇದರಲ್ಲಿ 900 ಕ್ಯುಸೆಕ್‌ ನೀರು ಹರಿಯುತ್ತದೆ. ಈ ನಾಲೆಯ ವ್ಯಾಪ್ತಿಯಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು ಸೇರಿ 25,900 ಎಕರೆ ಅಚ್ಚುಕಟ್ಟು ಪ್ರದೇಶವಿದ್ದು, ಈ ನಾಲೆಯ ಬಯಲಿನಲ್ಲೂ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ.

ವಿರಿಜಾ, ಸಿಡಿಎಸ್‌ ಮತ್ತು ಬಂಗಾರದೊಡ್ಡಿ ನಾಲೆಗಳ ವ್ಯಾಪ್ತಿಯಲ್ಲಿ ಇದೀಗ ಕಟಾವು ಮಾಡಿ ಕೂಳೆ ಬಿಟ್ಟಿರುವ ಕಬ್ಬಿನ ಬೆಳೆಯೇ 15 ಸಾವಿರ ಎಕರೆಗೂ ಜಾಸ್ತಿ ಇದೆ. ಕಟಾವು ಮಾಡಬೇಕಾದ ಮತ್ತು ಪೈರನ್ನೂ ಉಳಿಸಿಕೊಳ್ಳಲು ರೈತರು ಒದ್ದಾಡುತ್ತಿದ್ದಾರೆ. ಸಾವಿರಾರು ಎಕರೆಯಲ್ಲಿರುವ ತೆಂಗು, ಬಾಳೆ, ಅಡಿಕೆ, ತರಕಾರಿ ಬೆಳೆಗಳು ಬಾಡುತ್ತಿವೆ.

ಜಲಾಶಯದಲ್ಲಿ ನೀರು ಇರುವುದರಿಂದ ರಾಜಕಾರಣಿಗಳು ಬೇಸಿಗೆ ಬೆಳೆಗೆ ನೀರು ಕೊಡಿಸುತ್ತಾರೆ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ರೈತರು ಭತ್ತ ಬಿತ್ತನೆ ಮಾಡಿದ್ದು, ಪೈರು ಒಣಗಿ ಹೋಗಿವೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಪ್ರಕಾರ ಜಲಾಶಯದಿಂದ ಹೊರಡುವ ವಿಶ್ವೇಶ್ವರಯ್ಯ ಮತ್ತು ಆರ್‌ಬಿಎಲ್‌ಎಲ್‌ ನಾಲೆಗಳ ವ್ಯಾಪ್ತಿಯಲ್ಲಿ ನಿಂತಿರುವ ಬೆಳೆಗೆ ಬೇಸಿಗೆಯಲ್ಲಿ ನೀರು ಹರಿಸಲು ಅವಕಾಶ ಇದ್ದು, ಇತರ ನಾಲೆಗಳಿಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಪಷ್ಟವಾಗಿ ಹೇಳಿರುವುದು ರೈತರ ದುಗುಡವನ್ನು ಹೆಚ್ಚಿಸಿದೆ.

ಸಚಿವರು ಮತ್ತು ಅಧಿಕಾರಿಗಳು ಬೇಸಿಗೆ ಬೆಳೆಗೆ ನೀರು ಕೊಡಿಸುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಯಿಂದ ಪುಳಕಿತರಾದ ರೈತರು ಉತ್ಸಾಹದಿಂದಲೇ ಭತ್ತದ ಬಿತ್ತನೆ ಬೀಜ ತಂದು, ಸ್ವಲ್ಪ ನೀರಿನಲ್ಲೇ ಒಟ್ಲು ಹಾಕಿದ್ದಾರೆ. ಆದರೆ, ಭತ್ತ ಬಿತ್ತನೆ ಮಾಡಿ 20–25 ದಿನಗಳು ಕಳೆದರೂ ನಾಲೆಗಳಲ್ಲಿ ನೀರು ಬಾರದೆ ನಿರಾಸೆ ಅನುಭವಿಸುತ್ತಿದ್ದಾರೆ.

‘₹50 ಸಾವಿರ ಪರಿಹಾರ ಕೊಡಲಿ’: ‘ಬೇಸಿಗೆ ಬೆಳೆಗೆ ನೀರು ಹರಿಸಲಾಗುತ್ತದೆ ಎಂದು ಸಚಿವರು, ಜಿಲ್ಲಾಧಿಕಾರಿ ಹೇಳಿದ್ದರಿಂದ ಭತ್ತ ಬಿತ್ತನೆ ಮಾಡಿದ್ದೇವೆ. ಅವರ ಮಾತು ನಂಬಿ ಕೆಟ್ಟಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಕೈಗೆ ಸಿಗುತ್ತಿಲ್ಲ. ಭರವಸೆ ಕೊಟ್ಟವರು ನೀರು ಕೊಡಿಸಬೇಕು. ಇಲ್ಲದಿದ್ದರೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಿಸಬೇಕು’ ಎಂದು ಜೆಡಿಎಸ್‌ ರೈತ ದಳದ ಅಧ್ಯಕ್ಷ ಡಿ.ಎಂ.ರವಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು