ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ: ಲಾಠಿ ಬೀಸಿದ ಪೊಲೀಸರು

ಜಿಲ್ಲೆಯಾದ್ಯಂತ ಚಟುವಟಿಕೆ ಸಂಪೂರ್ಣ ಸ್ತಬ್ಧ, ಪ್ರಮುಖ ರಸ್ತೆಗಳ ಪ್ರವೇಶ ಬಂದ್‌
Last Updated 25 ಏಪ್ರಿಲ್ 2021, 5:16 IST
ಅಕ್ಷರ ಗಾತ್ರ

ಮಂಡ್ಯ: ವಾರಾಂತ್ಯ ಕರ್ಫ್ಯೂ ಅಂಗವಾಗಿ ಶನಿವಾರ ನಗರ ಸೇರಿದಂತೆ ಇಡೀ ಜಿಲ್ಲೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದೇಶ ಜಾರಿಗಾಗಿ ನಗರದಲ್ಲಿ ಪೊಲೀಸ್‌ ಸರ್ಪಗಾವಲಿತ್ತು. ಕರ್ಫ್ಯೂ ನಿಯಮ ಉಲ್ಲಂಘಿಸಿ ಹೊರ ಬಂದವರಿಗೆ ಪೊಲೀಸರು ಲಾಠಿ ಬೀಸಿದರು.

ದಿನಸಿ, ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 10 ಗಂಟೆಯ ನಂತರ ಔಷಧ ಅಂಗಡಿ ಹೊರತುಪಡಿಸಿ ಮಿಕ್ಕೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಆಗಿದ್ದವು. ನಗರದ ಮಾರುಕಟ್ಟೆ, ವಿವಿ ರಸ್ತೆ, ಆರ್‌.ಪಿ.ರಸ್ತೆ, ನೂರಡಿ ರಸ್ತೆ, ವಿನೋಬಾ ರಸ್ತೆ ಸೇರಿದಂತೆ ಇಡೀ ಸಕ್ಕರೆ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಜನಜಂಗುಳಿ ಇರುತ್ತಿದ್ದ ರಸ್ತೆಗಳು ಭಣಗುಡುತ್ತಿದ್ದವು.

ಸೂಚನೆ ಮೀರಿ ರಸ್ತೆಗೆ ಇಳಿದಿದ್ದ ಜನರನ್ನು ತಡೆದು ಪ್ರಶ್ನಿಸಿದ ಪೊಲೀಸರು ಲಾಠಿ ರುಚಿ ತೋರಿಸಿ ವಾಪಸ್‌ ಕಳುಹಿಸಿದರು. ನಗರದ ಗುತ್ತಲು ರಸ್ತೆ, ಮಹಾವೀರ, ಜೆ.ಸಿ ವೃತ್ತ, ಕರ್ನಾಟಕ ಬಾರ್‌ ವೃತ್ತದಲ್ಲಿ ತಪಾಣೆಯಲ್ಲಿ ನಿರತರಾಗಿದ್ದ ಪೊಲೀಸರು ಪ್ರತಿ ವಾಹನ ತಡೆದು ತಪಾಸಣೆ ಮಾಡಿದರು.

ಆಸ್ಪತ್ರೆಗೆ ತೆರಳುವವರಿಗೆ ಅವಕಾಶ ಕಲ್ಪಿಸಿ, ಉಳಿದವರನ್ನು ಮನೆಗೆ ಕಳುಹಿಸಿದರು. ಗುತ್ತಲು ರಸ್ತೆಯಲ್ಲಿ ಗೂಡ್ಸ್‌ ವಾಹನವೊಂದು ಅನವಶ್ಯಕ ವಾಗಿ ಸಂಚಾರ ಮಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಚಾಲಕನಿಗೆ ಲಾಠಿ ರುಚಿ ತೋರಿಸಿ ಮತ್ತೆ ರಸ್ತೆಗೆ ಬರದಂತೆ ಎಚ್ಚರಿಕೆ ನೀಡಿದರು.

ಅನಗತ್ಯ ಸಂಚಾರ ತಡೆಯುವುದಕ್ಕಾಗಿ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯ ಮುಂದಿನ ಮಂಡ್ಯ–ಬನ್ನೂರು ರಸ್ತೆ, ಆರ್‌ಪಿ ರಸ್ತೆ ಪ್ರವೇಶವನ್ನು ಬ್ಯಾರಿಕೇಡ್‌ ಹಾಕುವ ಮೂಲಕ ಸಂಪೂರ್ಣ ಬಂದ್ ಮಾಡಲಾಗಿತ್ತು. ಜೆ.ಸಿ ವೃತ್ತದಲ್ಲಿ ಪೊಲೀಸ್‌ ಸಿಬ್ಬಂದಿ ಮೈಕ್‌ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ನಿಮಗಾಗಿ ಸರ್ಕಾರ ಲಾಕ್‌ಡೌನ್‌ ಮಾಡಿದ್ದು, ನಿಯಮ ಉಲ್ಲಂಘಿಸದೆ ಮನೆಯಲ್ಲೇ ಇರಬೇಕು’ ಎಂದು ಸೂಚನೆ ನೀಡಿದರು.

ಒಂದೆಡೆ ಪಾರ್ಕ್‌ಗಳ ಪ್ರವೇಶವನ್ನು ನಿರ್ಬಂಧಿಸಿದ್ದರೆ ವಾಯುವಿಹಾರಿಗಳು ನಿಯಮ ಉಲ್ಲಂಘಿಸಿ ಸರ್‌ ಎಂ.ವಿ. ಕ್ರೀಡಾಂಗಣದಲ್ಲಿ ವಾಕಿಂಗ್‌ ಮಾಡುತ್ತಿದ್ದರು. ನಂತರ ಪೊಲೀಸರು ಬಂದೊಡನೆ ಎಲ್ಲರೂ ಮನೆಗೆ ತೆರಳಿದರು. ವಾಹನಗಳ ಓಡಾಟವಿಲ್ಲದೆ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬಿಕೋ ಎನ್ನುತ್ತಿತ್ತು.

ಸರ್ಕಾರದ ನಿಬಂಧನೆಗೆ ಒಳಪಟ್ಟಂತೆ ಬಸ್‌, ರೈಲು ಸಂಚಾರ ಎಂದಿನಂತಿತ್ತು. ಆದರೆ ಕರ್ಫ್ಯೂ ಕಾರಣದಿಂದ ಹೆಚ್ಚು ಪ್ರಯಾಣಿಕರು ಬಸ್‌, ರೈಲು ನಿಲ್ದಾಣಕ್ಕೆ ಬರಲಿಲ್ಲ. ಜಿಲ್ಲೆಯ ಪ್ರತಿ ಬಸ್‌ ನಿಲ್ದಾಣದಲ್ಲೂ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪ್ರಯಾಣಿಕರು ಬಾರದ ಕಾರಣ ಹೆಚ್ಚಿನ ಮಾರ್ಗಗಳಲ್ಲಿ ಬಸ್‌ಗಳು ಸಂಚಾರ ಮಾಡಲಿಲ್ಲ.

ನಿಯಮದಂತೆ ಶೇ 50 ರಷ್ಟು ಪ್ರಯಾಣಿಕರಿಗೆ ಅಂದರೆ 25–30 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ ಅಷ್ಟು ಪ್ರಯಾಣಿಕರಿಲ್ಲದೆ ಭಣಗುಡುತ್ತಿದ್ದವು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ನಗರದ ವಿವಿ ರಸ್ತೆ, ಆರ್‌.ಪಿ ರಸ್ತೆ, ನೂರಡಿ ರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ರಸ್ತೆಯ ಎರಡೂ ಬದಿಯಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿದರು.

ಬಂದ್‌ ನಡುವೆ ರಾಜ್‌ ಜನ್ಮದಿನ: ಬಂದ್‌ ನಡುವೆಯೂ ಡಾ.ರಾಜ್‌ಕುಮಾರ್‌ ಅಭಿಮಾನಿಗಳು ಸರಳವಾಗಿ ವಿವಿಧೆ ಅವರ ಜನ್ಮದಿನ ಆಚರಣೆ ಮಾಡಿದರು. ವಿವಿಧ ರಸ್ತೆಗಳಲ್ಲಿ ಕಟೌಟ್‌ಗಳನ್ನು ಅಳವಡಿಸಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT