ಶನಿವಾರ, ಫೆಬ್ರವರಿ 22, 2020
19 °C
ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹ, ಮೀನುಗಾರರಿಂದ ಕಸಕ್ಕೆ ಬೆಂಕಿ, ಕಲ್ಲುಗಳು ಒಡೆಯುವ ಆತಂಕ

ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬುಡಕ್ಕೇ ಬೆಂಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ತಳದಲ್ಲಿ ಸಂಗ್ರಹವಾಗಿರುವ ತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಸೇತುವೆಗೆ ಆಧಾರವಾಗಿರುವ ಕಲ್ಲುಗಳು ಒಡೆಯುವ ಆತಂಕ ಎದುರಾಗಿದೆ.

ಸೇತುವೆಯ ಕೆಳಗೆ ಅಪಾರ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿದೆ. ಕಳೆದ ಮುಂಗಾರು ಹಂಗಾಮು ವೇಳೆ ಕೊಚ್ಚಿಕೊಂಡು ಬಂದ ಮರಗಳು ಮತ್ತು ಹುಲ್ಲಿನ ತ್ಯಾಜ್ಯ ಸೇತುವೆಗೆ ಸಿಕ್ಕಿಕೊಂಡಿದೆ. ಸದ್ಯ ಈ ಕಸ ಒಣಗಿದ್ದು, ಕಾವೇರಿ ನದಿಯಲ್ಲಿ ಮೀನು ಹಿಡಿಯಲು ಬರುವವರು ಬೆಂಕಿ ಹಚ್ಚುತ್ತಿದ್ದಾರೆ. ಭಾನುವಾರ ಹಚ್ಚಿರುವ ಬೆಂಕಿಗೆ ಸೇತುವೆಯ ಒಂದು ಪಾರ್ಶ್ವದಲ್ಲಿದ್ದ ಮರ ಮುಟ್ಟುಗಳು ಸುಟ್ಟು ಹೋಗಿವೆ. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದು, ಬೆಂಕಿಯನ್ನು ನಂದಿಸಲಾಗಿದೆ.

‘ವೆಲ್ಲೆಸ್ಲಿ ಸೇತುವೆ 220 ವರ್ಷಗಳಷ್ಟು ಹಳೆಯದು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಸರ್‌ ಅರ್ಥರ್‌ ವೆಲ್ಲೆಸ್ಲಿ ಅವರ ಗೌರವಾರ್ಥ ಈ ಸೇತುವೆ ನಿರ್ಮಿಸಿದ್ದಾರೆ. ಶೇ 90ರಷ್ಟು ಭಾಗ ಕಲ್ಲು ಚಪ್ಪಡಿಗಳನ್ನು ಬಳಸಿ ಇದನ್ನು ನಿರ್ಮಿಸಲಾಗಿದೆ. ಆದರೆ, ಸೇತುವೆ ನಿರ್ವಹಣೆ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ನದಿಯಲ್ಲಿ ಪ್ರವಾಹ ಬಂದರೆ ಅಪಾರ ಪ್ರಮಾಣದ ತ್ಯಾಜ್ಯ ತೇಲಿಕೊಂಡು ಬಂದು ಸಿಕ್ಕಿಕೊಳ್ಳುತ್ತದೆ. ಅದನ್ನು ಕಾಲ ಕಾಲಕ್ಕೆ ತೆಗೆಯುತ್ತಿಲ್ಲ. ಬೇಸಿಗೆ ದಿನಗಳಲ್ಲಿ ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಬೆಂಕಿಯ ಕಾವಿಗೆ ಸೇತುವೆಗೆ ಆಧಾರವಾಗಿರುವ ಕಲ್ಲು ಚಪ್ಪಡಿಗಳು ಒಡೆದರೆ ಸೇತುವೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಪುರಸಭೆ ಸದಸ್ಯರಾದ ಎಂ.ಎಲ್‌. ದಿನೇಶ್‌, ವಸಂತಕುಮಾರಿ ಲೋಕೇಶ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಕಸಕ್ಕೆ ಬೆಂಕಿ ಹಚ್ಚಿದರೆ ಕ್ರಮ’

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್‌ ಎನ್‌.ಎನ್‌.ಗೌಡ, ‘ವೆಲ್ಲೆಸ್ಲಿ ಸೇತುವೆ 200 ವರ್ಷಗಳಿಗಿಂತ ಹಳೆಯದು. ಸೇತುವೆಯ ಬುಡಕ್ಕೆ ಬೆಂಕಿ ಹಚ್ಚುವುದು, ಆಸುಪಾಸಿನಲ್ಲಿ ಮರಳು ತೆಗೆಯುವುದು ಅಪಾಯಕಾರಿ. ತ್ಯಾಜ್ಯ ತೆಗೆಸುವ ಸಂಬಂಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ. ದುಷ್ಕೃತ್ಯ ಎಸಗುವವರ ಬಗ್ಗೆ ಮಾಹಿತಿ ನೀಡಿದರೆ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು