ಶನಿವಾರ, ಡಿಸೆಂಬರ್ 7, 2019
25 °C
ಕಡಬಾ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪತ್ತೆ

2 ಕಾಡಾನೆಗಳು ಪ್ರತ್ಯಕ್ಷ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಹೋಬಳಿಯ ಕಡಬಾ ಗ್ರಾಮದ ಬಳಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ.

ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಪೊಲೀಸರು, ವಲಯ ಅರಣ್ಯಾಧಿಕಾರಿ ಗಳು ಸ್ಥಳಕ್ಕೆ ಬಂದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಆನೆಗಳನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಆನೆಗಳ ಕ್ಯಾಂಪ್‌ನಿಂದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ
ಹಾಗೂ ಗಣೇಶ್ ಎಂಬ ಸಾಕು ಆನೆಗಳನ್ನು ತರಿಸಿದ್ದು, ಆನೆಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಜತೆಗೆ ಅರಿವಳಿಕೆ ತಜ್ಞರು ಬರುವಿಕೆಗಾಗಿ ಕಾಯುತ್ತಿದ್ದಾರೆ. ವೈದ್ಯರು ಬಂದ ತಕ್ಷಣ ಆನೆಗಳನ್ನು ಹಿಡಿಯಲು ಕ್ರಮವಹಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಎಂ.ಎನ್.ಮುನಿಕೃಷ್ಣ ತಿಳಿಸಿದ್ದಾರೆ.

ಗುರುವಾರ ಸಂಜೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಆನೆಗಳೇ ಇಲ್ಲಿಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು, ಎಸಿಎಫ್ ಬೈರಾರೆಡ್ಡಿ, ತಹಶೀಲ್ದಾರ್ ಪ್ರಮೋದ್ ಪಾಟೀಲ, ಶ್ರೀರಂಗಪಟ್ಟಣ ಸಿಪಿಐ ಕೃಷ್ಣ, ಪಾಂಡವಪುರ ಪಿಎಸ್‌ಐ ಸುಮಾರಾಣಿ, ಕೆಆರ್‌ಎಸ್ ಪಿಎಸ್ಐ ನವೀನ್‌ ಹಾಗೂ ಅರಣ್ಯಾಧಿಕಾರಿಗಳು ಮೊಕ್ಕಂ ಹೂಡಿದ್ದಾರೆ.

ಶಾಸಕ ಸಿ.ಎಸ್.ಪುಟ್ಟರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ ಭೇಟಿ ನೀಡಿ ಪರಿಶೀಲಿಸಿದರು.

ಮತ್ತೀಕೆರೆಯಿಂದ ಹೊರಟ ಆನೆಗಳು

ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದ ಸಮೀಪ ಗುರುವಾರ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಎರಡು ಕಾಡಾನೆ ಗಳು ಅಲ್ಲಿಂದ ಬೇರೆಡೆ ತೆರಳಿವೆ.

ಸಂಜೆ ಕಾಣಿಸಿಕೊಂಡಿದ್ದ ಕಾಡಾನೆಗಳು ಕಬ್ಬಿನ ಗದ್ದೆಯಲ್ಲಿ ಸೇರಿಕೊಂಡಿದ್ದವು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿ ದ್ದರು. ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಆನೆಗಳು ಮೋದೂರು ಮಾರ್ಗವಾಗಿ ಪಾಂಡವಪುರದ ಕಡೆ ಸಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)