ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಾಚರಣೆ ಯಶಸ್ವಿ: 2 ಕಾಡಾನೆ ಸೆರೆ

ಕಾಳೇನಹಳ್ಳಿ ಬಳಿ ಕಾಣಿಸಿಕೊಂಡಿದ್ದ ಆನೆಗಳು, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಅರಣ್ಯಾಧಿಕಾರಿಗಳು
Last Updated 17 ನವೆಂಬರ್ 2019, 15:35 IST
ಅಕ್ಷರ ಗಾತ್ರ

ಪಾಂಡವಪುರ: ಮೂರು ದಿನಗಳಿಂದ ವಿವಿಧೆಡೆ ಕಾಣಿಸಿಕೊಂಡಿದ್ದ ಎರಡು ಕಾಡಾನೆಗಳನ್ನು ತಾಲ್ಲೂಕಿನ ಕಾಳೇನಹಳ್ಳಿ ಬಳಿ ಶನಿವಾರ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾದರು.

ಕೆ.ಆರ್‌.ಪೇಟೆ ತಾಲ್ಲೂಕಿನ ಮತ್ತೀಕೆರೆ ಬಳಿ ಗುರುವಾರ ಕಾಣಿಸಿಕೊಂಡಿದ್ದವು. ಶುಕ್ರವಾರ ತಾಲ್ಲೂಕಿನ ಕಡಬಾ ಗ್ರಾಮದ ರೈತನ ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟು ಜನರಲ್ಲಿ ಆತಂಕ ಮೂಡಿಸಿದ್ದವು. ಅರಣ್ಯಾಧಿಕಾರಿಗಳು ಆನೆಗಳನ್ನು ಹಿಡಿಯಲು 4 ಸಾಕಾನೆಗಳ ಜೊತೆಯಲ್ಲಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ, ಕಾರ್ಯಾಚರಣೆ ಅರ್ಧಕ್ಕೆ ಮೊಟಕುಗೊಂಡಿತ್ತು.

ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಬಳಿ ಶನಿವಾರ ಮತ್ತೆ ಆನೆಗಳು ಕಾಣಿಸಿಕೊಂಡವು. ದಸರಾ ಆನೆಗಳಾದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಗಣೇಶ್‌, ಅಜೇಯ ಆನೆಗಳ ಜೊತೆ ಕಾರ್ಯಾಚರಣೆಗೆ ಇಳಿದರು. ಅರವಳಿಕೆ ತಜ್ಞರಾದ ಡಾ.ನಾಗರಾಜು, ಡಾ.ಮುರಳಿ ಸಹಾಯದೊಂದಿಗೆ ಸೆರೆ ಹಿಡಿಯುವ ಪ್ರಯತ್ನ ಆರಂಭವಾಯಿತು.

ಅರವಳಿಕೆ ಚುಚ್ಚು ಮದ್ದನ್ನು ಆನೆಗಳಿಗೆ ಹೊಡೆದು ಪ್ರಜ್ಞೆ ತಪ್ಪಿಸಲಾಯಿತು. ಆನೆಗಳ ಕಾಲು ಕಟ್ಟಿ ಎಚ್ಚರಿಸಲಾಯಿತು. ಸಾಕಾನೆಗಳ ಸಹಾಯದಿಂದ ಕಬ್ಬಿನ ಗದ್ದೆಯಿಂದ ಪಕ್ಕದ ಬಯಲು ಪ್ರದೇಶಕ್ಕೆ ಕರೆತರಲಾಯಿತು. ಸಂಜೆ 5 ಗಂಟೆಗೆ ಆನೆಗಳನ್ನು ಕ್ರೇನ್ ಮೂಲಕ ಲಾರಿಗಳಿಗೆ ಹಾಕಲಾಯಿತು. ಸಂಜೆ 7 ಗಂಟೆಗೆ ಕಾರ್ಯಾಚರಣೆ ಪೂರ್ಣಗೊಂಡಿತು.

‘ಮೈಸೂರು ಜಿಲ್ಲೆ ನುಗು ಅರಣ್ಯದಿಂದ ಈ ಆನೆಗಳು ತಪ್ಪಿಸಿಕೊಂಡಿದ್ದವು. ಮಾದಾಪುರ ಗ್ರಾಮದ ಮೂಲಕ ಅರಬಿತಿಟ್ಟು ಬಳಿಗೆ ಬಂದವು. ನಂತರ ಕೆ.ಆರ್‌.ನಗರ ತಾಲ್ಲೂಕಿನ ತಿಟ್ಟೂರು ತಲುಪಿದವು. ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ, ಮತ್ತೀಕೆರೆ ಮೂಲಕ ಕಡಬಾ, ಕಾಳೇನಹಳ್ಳಿ ಪ್ರವೇಶಿಸಿದವು. ಸೆರೆಹಿಡಿದ ಆನೆಗಳನ್ನು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಶಿವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸಿಎಫ್‌ ಭೈರಾರೆಡ್ಡಿ, ವಲಯ ಅರಣ್ಯಾಧಿಕಾರಿಗಳಾದ ಮುನಿಕೃಷ್ಣ, ಹಿರಿಲಾಲ್‌, ಪ್ರಶಾಂತ್ ಕುಮಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT