ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಿಸುವ ಮಹಿಳೆಯರಿಗೆ ಸಾಕಷ್ಟು ಅವಕಾಶ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ; ಜಿಲ್ಲಾ ನ್ಯಾಯಾಧೀಶರಾದ ಎಸ್‌.ಬಿ.ವಸ್ತ್ರಮಠ ಹೇಳಿಕೆ
Last Updated 8 ಮಾರ್ಚ್ 2022, 12:56 IST
ಅಕ್ಷರ ಗಾತ್ರ

ಮಂಡ್ಯ: ‘ಹಲವು ಅಡೆತಡೆಗಳ ನಡುವೆಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಸವಾಲುಗಳನ್ನು ಮೆಟ್ಟಿ ಮುನ್ನಡೆಯುತ್ತಿದ್ಧಾರೆ. ಹಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ್ ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮಹಿಳೆಯು ಸಾಧನೆಯ ಹಾದಿಯಲ್ಲಿ ನಡೆಯುವಾಗ ಹಲವು ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ಮೆಟ್ಟಿ ನಡೆಯಲು ಸಮಾಜದ ಪ್ರತಿಯೊಬ್ಬರೂ ಸಹಕಾರ ನಿಡಬೇಕು. ಪ್ರತಿಯೊಬ್ಬ ಮಹಿಳೆಯರನ್ನು ಗೌರವಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ಸಿಗಬೇಕು’ ಎಂದರು.

‘ಮಹಿಳೆಯರ ಹಕ್ಕುಗಳನ್ನು ರಕ್ಷಣೆ ಮಾಡುವುದಕ್ಕೆ ಹಲವು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅವುಗಳ ಅರಿವು ಪಡೆಯಬೇಕು. ಮಹಿಳೆಯರ ರಕ್ಷಣೆಗೆ ಕಾನೂನು ಇದ್ದೇ ಇದೆ. ಗಂಡು ಮಕ್ಕಳಿಗೆ ಸರಿಸಮನಾಗಿ ಹಕ್ಕುಗಳನ್ನು ನೀಡಲಾಗಿದೆ. ಕಾನೂನುಗಳ ಅರಿವು ಪಡೆದು ಮಹಿಳೆಗೆ ಇರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಜಿ.ಪಂ ಸಿಇಒ ದಿವ್ಯಾ ಪ್ರಭು ಮಾತನಾಡಿ ‘ಪ್ರತಿಯೊಬ್ಬ ಮಹಿಳೆಯೂ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಇನ್ನೂ ಹೆಚ್ಚು ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ಸಾಧನೆ ಮಾಡುತ್ತಿದ್ದಾಳೆ. ಇನ್ನಷ್ಟು ಸಬಲೀಕರಣ ಆಗಬೇಕಾಗಿದೆ. ಅದಕ್ಕಾಗಿ ಮಹಿಳೆಯರು ಮೊದಲು ತಮ್ಮ ಮನೋಭಾವವನ್ನು ಬದಲಾವಣೆ ಮಾಡಿಕೊಳ್ಳಬೇಕು’ ಎಂದರು.

‘ಅಡುಗೆ ಮನೆಯಿಂದ ಹಿಡಿದು ಕುಟುಂಬ ನಡೆಸುವವರೆಗೂ, ಕಚೇರಿ ನಿರ್ವಹಣೆವರೆಗೂ ಮಹಿಳೆ ಸಾಧಿಸಿದ್ದಾಳೆ. ಅದರಿಂದ ಗಂಡು ಮತ್ತು ಹೆಣ್ಣು ಅಂತ ಭೇದ ಇಲ್ಲವಾಗಿದೆ. ಮಹಿಳೆಯನ್ನು ಸಮಾನತೆಯ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ಮಹಿಳೆಯರು ಮೊದಲು ತಮಗೆ ತಾವೇ ಒಂದು ಚೌಕಟ್ಟಿನೊಳಗೆ ಇರಬೇಕು ಎನ್ನುವ ಮನೋಭಾವದಿಂದ ಹೊರಬರಬೇಕು. ಪ್ರತಿದಿನವು ತಾವು ಮಾಡುವ ವ್ಯಾಪಾರ, ವೃತ್ತಿ ಮಾದಲಾದ ಸಣ್ಣ ಪುಟ್ಟ ಕೆಲಸವನ್ನು ಬದ್ಧತೆಯಿಂದ ಮಾಡಿ ದೊಡ್ಡ ಮಟ್ಟಕ್ಕೆ ಸಾಧನೆ ಮಾಡಬೇಕು’ ಎಂದರು.

ಹಿರಿಯ ನ್ಯಾಯಾಧೀಶರಾದ ಎ.ಎಂ ನಳಿನಿಕುಮಾರಿ, ಎಎಸ್‌ಪಿ ವೇಣು ಗೋಪಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ರಾಜಮೂರ್ತಿ, ವಕೀಲರ ಸಂಘದ ಅಧ್ಯಕ್ಷರಾದ ಎಂ.ಟಿ.ರಾಜೇಂದ್ರ, ಕಾರ್ಯದರ್ಶಿ ಸಿದ್ದರಾಜು ಇದ್ದರು.

ಸವಿತಾ ಸಮಾಜ: ‘ಶಿಕ್ಷಣ, ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ದುಡಿಯುವ ಮಹಿಳೆಯರ ಶ್ರೇಯೋಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕು’ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾದೇವಿ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಮಂಗಳವಾರ ಜಿಲ್ಲಾ ಸವಿತಾ ಸಮಾಜ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಕಾರ್ಮಿಕ ಇಲಾಖೆಯಿಂದ ಪಿಂಚಣಿ ಸಪ್ತಾಹ ಆರಂಭಿಸಲಾಗಿದೆ. ಜೊತೆಗೆ ಇ-ಶ್ರಮ್ ಮತ್ತಿತರೆ ಯೋಜನೆ ಜಾರಿಗೆ ತರಲಾಗಿದ್ದು ಎಲ್ಲಾ ಅಸಂಘಟಿತ ಕಾರ್ಮಿಕರು ನೋಂದಣಿಯಾಗಿ ಸವಲತ್ತು ಪಡೆದುಕೊಳ್ಳಬೇಕು’ ಎಂದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ ‘ಮಹಿಳೆಯರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮೀಸಲಾತಿ ದೊರೆತಿಲ್ಲ. ಆದ್ದರಿಂದ ಲೋಕಸಭೆಯಲ್ಲಿ ನೆನೆಗುದಿಗೆ ಬಿದ್ದಿರುವ ಮಹಿಳಾ ಮೀಸಲು ಮಸೂದೆ ಅನುಷ್ಠಾನಕ್ಕೆ ರಾಷ್ಟ್ರೀಯ ಚಳವಳಿ ನಡೆಯಬೇಕು’ ಎಂದರು.

ಸವಿತಾ ಸಮಾಜದ ಮಹಿಳಾ ಮುಖಂಡರಾದ ನಾಗಮ್ಮ, ಮಂಜಮ್ಮ, ಗೀತಾ ಹರೀಶ್, ಕಾರ್ಮಿಕ ನಿರೀಕ್ಷಕಿ ನಾಗರತ್ನ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್, ಭಜಂತ್ರಿ ಸೇವಾ ಸಮಿತಿ ಅಧ್ಯಕ್ಷ ರಾಜಣ್ಣ, ಸವಿತಾ ಸಮಾಜದ ಮುಖಂಡರಾದ ಹಲ್ಲೆಗೆರೆ ಬೋರಪ್ಪ, ಶ್ರೀನಿವಾಸ್‌ ಪುಟ್ಟಸ್ವಾಮಿ, ರಮೇಶ್, ವೆಂಕಟೇಶ ಇದ್ದರು.

*********

ಸಬಲೀಕರಣದಿಂದ ಸಮಾನತೆ

‘ಮಹಿಳೆಯರ ಸಬಲೀಕರಣ ಆದಾಗ ಮಾತ್ರ ಸಮಾನತೆ ಸಾಧ್ಯ. ಸಮಾನತೆಯ ಮುಖ್ಯ ಉದ್ದೇಶ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದೇ ಆಗಿದೆ’ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಎ.ಎಂ.ನಳಿನಿಕುಮಾರಿ ತಿಳಿಸಿದರು.

ಮಾಂಡವ್ಯ ಶಿಕ್ಷಣ ಮಹಾವಿದ್ಯಾಲಯ, ಮಾಂಡವ್ಯ ಪ್ರಥಮ ದರ್ಜೆ ಕಾಲೇಜು,ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಕ್ಕರೆ ವೃತ್ತದಿಂದ ಡಿ.ಸಿ ಕಚೇರಿವರೆಗೆ ನಡೆದ ವಾಕ್ -ಎ-ಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಮನೆಯ ಹೆಣ್ಣು ಮಕ್ಕಳು ಸೇರಿದಂತೆ ಬೇರೆ ಹೆಣ್ಣುಮಕ್ಕಳಿಗೂ ಗೌರವ ಕೊಟ್ಟಾಗ ಮಾತ್ರ ಸಮಾನತೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯ ಸಾಧನೆಗೆ ಎಲ್ಲರೂ ಕೈಜೋಡಿಸಿ ಸಹಕಾರ ನೀಡಬೇಕು’ ಎಂದರು.

ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಪ್ರಾಚಾರ್ಯರಾದ ಭವಾನಿಶಂಕರ್ ಸುಮಾರಾಣಿ, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಕೆ.ಟಿ. ಹನುಮಂತು, ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT