ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಥೆಯ ಅಭಿವೃದ್ಧಿಯೇ ನಮ್ಮ ಆದ್ಯತೆ

ಎಚ್‌ಕೆಇ ಸಂಸ್ಥೆ ಚುನಾವಣೆ: ಬಸವರಾಜ ಭೀಮಳ್ಳಿ ಹೇಳಿಕೆ
Last Updated 22 ಮಾರ್ಚ್ 2018, 10:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇಎಸ್‌)ಯ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಆದ್ಯತೆಯಾಗಿದೆ’ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ಭೀಮಳ್ಳಿ ಹೇಳಿದರು.

‘ನಮ್ಮ ಮೂರು ವರ್ಷಗಳ ಆಡಳಿತದ ಅವಧಿಯಲ್ಲಿ 11 ಸ್ನಾತಕೋತ್ತರ ವೈದ್ಯಕೀಯ ಸೀಟು, 3 ಪಿಜಿ ಮತ್ತು ಪಿಜಿ ಡಿಪ್ಲೊಮಾ ಸೀಟು, ಹೋಮಿಯೋಪಥಿ ಕಾಲೇಜಿನಲ್ಲಿ 3 ಸೀಟು, ಔಷಧ ವಿಜ್ಞಾನ ಸಂಸ್ಥೆಯಲ್ಲಿ 40 ಸೀಟು, ಪಿಡಿಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ 129 ಮತ್ತು ಆರ್ಕಿಟೆಕ್ಟ್ ವಿಭಾಗದಲ್ಲಿ 40 ಸೀಟುಗಳನ್ನು ಹೆಚ್ಚಿಸಲಾಗಿದೆ. ಬಸವೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಖರೀದಿಸಲಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಆರ್.ಎಸ್.ಹೊಸಗೌಡ ಮಾತನಾಡಿ, ‘ಶಶೀಲ್ ನಮೋಶಿ ಅವರು ಈ ಹಿಂದೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಅವರಿಗೆ ಮೂರು ನೋಟಿಸ್ ನೀಡಲಾಗಿದೆ. ಆದರೆ ಇದುವರೆಗೂ ಅವರು ಉತ್ತರ ನೀಡಿಲ್ಲ. ಶೀಘ್ರವೇ ನ್ಯಾಯಾಲಯದ ಮೊರೆ ಹೋಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಭೀಮಳ್ಳಿ ಗುಂಪಿನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ಸೂರ್ಯಕಾಂತ ಜಿ.ಪಾಟೀಲ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಅರುಣಕುಮಾರ ಎಂ.ವೈ.ಪಾಟೀಲ, ಡಾ. ಬಸವರಾಜ ಜಿ.ಪಾಟೀಲ, ಚಂದ್ರಶೇಖರ್ ಹಿರೇಮಠ, ಜಿ.ಡಿ.ಅಣಕಲ್, ಎಂ.ವೀರನಗೌಡ, ಎನ್.ಡಿ.ಪಾಟೀಲ, ಡಾ. ಶರದ್ ಎಂ.ರಾಂಪುರೆ, ಡಾ. ಶರಣಬಸವಪ್ಪ ಕಾಮರೆಡ್ಡಿ, ಶಿವರಾಜ ನಿಗ್ಗುಡಗಿ, ಡಾ. ಎಸ್.ಎನ್.ಪಾಟೀಲ, ಉದಯಕುಮಾರ ಚಿಂಚೋಳಿ, ವೆಂಕಟೇಶ್ ಸಾರಡಾ ಇದ್ದರು.
**
‘ಆರೋಪ ನಿರಾಧಾರ’
ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇಎಸ್‌)ಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು, ಆರ್ಥಿಕ ಶಿಸ್ತು ಕಾಣೆಯಾಗಿದೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭೀಮಾಂಶಕರ ಬಿಲಗುಂದಿ ಹಾಗೂ ಶಶೀಲ್ ಜಿ.ನಮೋಶಿ ಮಾಡಿರುವ ಆರೋಪ ನಿರಾಧಾರವಾಗಿವೆ’ ಎಂದು ಇನ್ನೊಂದು ಗುಂಪಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಸವರಾಜ ಭೀಮಳ್ಳಿ ಹೇಳಿದರು.

‘ನಮ್ಮ ಸಂಸ್ಥೆಯಲ್ಲಿ ಓದಿರುವ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ. ನಮ್ಮ ಅವಧಿಯಲ್ಲಿ ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿಲ್ಲ. ಪ್ರತಿ ತಿಂಗಳು ಆಡಳಿತ ಮಂಡಳಿ ಸಭೆ ನಡೆಸಲಾಗಿದೆ. ಮನೆಯಲ್ಲಿಯೇ ಕುಳಿತು ಕಡತಗಳಿಗೆ ಸಹಿ ಹಾಕುತ್ತಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

‘ನಮೋಶಿ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕಿತ್ತು. ಆದರೆ ನಮ್ಮ ಅವಧಿಯಲ್ಲಿ ಎಲ್ಲವೂ ಪಾರದರ್ಶಕವಾಗಿತ್ತು’ ಎಂದು ಹೇಳಿದರು.

‘ದಂತವೈದ್ಯಕೀಯ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶಾತಿ ಕಡಿಮೆಯಾಗಿದೆ. ಹಂತ ಹಂತವಾಗಿ ಇದನ್ನು ಉತ್ತಮ ಪಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಮ್ಮ ಅವಧಿಯಲ್ಲಿ ಸಂಸ್ಥೆಯ ಉದ್ಯೋಗಿಗಳಿಗೆ ಪ್ರತಿ ತಿಂಗಳ ಮೊದಲನೆ ವಾರದಲ್ಲಿ ವೇತನ ನೀಡಲಾಗಿದೆ. ₹16.5 ಕೋಟಿ ಮೊತ್ತವನ್ನು ವೇತನ ಮತ್ತು ಬಾಕಿ ಪಾವತಿಗೆ ಬಳಸಲಾಗಿದೆ. ಗುತ್ತಿಗೆದಾರರ ₹6 ಕೋಟಿ ಬಾಕಿ ಪಾವತಿಸಲಾಗಿದೆ. ಉಪಕರಣ ಮತ್ತು ಪುಸ್ತಕಗಳ ಖರೀದಿಗೆ ₹11 ಕೋಟಿ ವ್ಯಯಿಸಲಾಗಿದೆ. ನಿವೃತ್ತ ನೌಕರರಿಗೆ ₹1.6 ಕೋಟಿ ಗ್ರ್ಯಾಚುಟಿ ಪಾವತಿಸಲಾಗಿದೆ’ ಎಂದರು.
**
ಭೀಮಳ್ಳಿ ಗುಂಪಿನ ಪ್ರಣಾಳಿಕೆಗಳು
*350 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಹಾಸ್ಟೆಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಪೂರ್ಣಗೊಳಿಸಲಾಗುವುದು
* ಕಲಬುರ್ಗಿಯ ಬಿದ್ದಾಪುರ ಕಾಲೊನಿಯಲ್ಲಿ ವಸತಿ ಸಹಿತ ಶಾಲೆಯನ್ನು ಪ್ರಾರಂಭಿಸಲಾಗುವುದು
* ಬೀದರ್‌ನ ಬಿವಿಬಿ ಕಾಲೇಜಿನ 54 ಎಕರೆ ಆವರಣದಲ್ಲಿ ಹಂತ ಹಂತವಾಗಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ
* ಬೀದರ್‌ನಲ್ಲಿ ಹೋಮಿಯೋಪಥಿ ಕಾಲೇಜು ಪ್ರಾರಂಭಿಸಲಾಗುವುದು
* ಬೋಧನಾ–ಕಲಿಕೆ ಪ್ರಕ್ರಿಯೆಯನ್ನು ಉನ್ನತೀಕರಿಸಲು ‘ಸಂವೇದನಾ ಕಾರ್ಯಕ್ರಮ’ಗಳನ್ನು ಹಮ್ಮಿಕೊಳ್ಳಲಾಗುವುದು
* ಸಂಸ್ಥೆಯ ವಿವಿಧ ವಿದ್ಯಾಲಯಗಳಲ್ಲಿ ತರಬೇತಿ ಮತ್ತು ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು
* ಸಂಸ್ಥೆಗಾಗಿ ಗಣನೀಯ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ಉಪನ್ಯಾಸ ಮಾಲಿಕೆಗಳನ್ನು ಹಮ್ಮಿಕೊಳ್ಳಲಾಗುವುದು
* ನಿವೃತ್ತಿ ಮತ್ತು ಕಲ್ಯಾಣ ಸೌಲಭ್ಯಗಳನ್ನು ಕಡಿಮೆ ಸಮಯದಲ್ಲಿ ದೊರಕುವಂತೆ ಮಾಡಲಾಗುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT