ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧದ ಭೀತಿ ಎದುರಿಸುತ್ತಿದೆ ಜಗತ್ತು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್

ಲಯನ್ಸ್‌ ಪ್ರಾಂತೀಯ ಸಮ್ಮೇಳನದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅಭಿಮತ
Last Updated 21 ಜನವರಿ 2020, 9:22 IST
ಅಕ್ಷರ ಗಾತ್ರ

ಮಂಡ್ಯ: ‘‍ಶೈಕ್ಷಣಿಕವಾಗಿ, ಆರ್ಥಿಕವಾಗಿ ಎಷ್ಟೇ ಮುಂದುವರೆದರೂ ಜಗತ್ತು ಯುದ್ಧದ ಭೀತಿ ಎದುರಿಸುತ್ತಿದ್ದು, ಇದರ ವಿರುದ್ಧ ಧ್ವನಿ ಎತ್ತಬೇಕಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಹೇಳಿದರು.

ಅಂತರರಾಷ್ಟ್ರೀಯ ಲಯನ್ಸ್‌ ಸಂಸ್ಥೆಗಳ ಒಕ್ಕೂಟ (ಜಿಲ್ಲೆ 317ಎ) ವತಿಯಿಂದ ಭಾನುವಾರ ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಾಂತೀಯ ಸಮ್ಮೇಳನದಲ್ಲಿ ಮಾತನಾಡಿದರು.

‘ಅಮೆರಿಕ ಇರಾನ್‌ನ ಮೇಲೆ ದಾಳಿ ನಡೆಸಿ ಅಲ್ಲಿನ ಸೇನಾ ಅಧಿಕಾರಿಯನ್ನು ಕೊಂದಿತು. ಅದಕ್ಕೆ ಪ್ರತಿಕಾರವಾಗಿ ಇರಾನ್‌ ಕೂಡ ಅಮೆರಿಕ ಸೇನಾ ನೆಲೆ ಮೇಲೆ ದಾಳಿ ಮಾಡಿತು. ಇರಾಕ್‌, ಇರಾನ್‌ ಮೇಲೆ ಧ್ವನಿ ಎತ್ತಿದೆ. ಟರ್ಕಿ, ರಷ್ಯಾ, ಸಿರಿಯಾ ಜಗತ್ತಿನಲ್ಲಿ ಯುದ್ಧ ಭೀತಿ ಎದುರಿಸುತ್ತಿವೆ. ಯುದ್ಧ ಮಾಡುವವರನ್ನು, ಪ್ರೇರೇಪಿಸುವವರು, ಸನ್ನದ್ಧರಾಗಿರುವವರ ವಿರುದ್ಧ ಧ್ವನಿ ಎತ್ತದಿದ್ದರೆ ಜಗತ್ತಿನ ಶಾಂತಿಗೆ ಭಂಗ ಉಂಟಾಗುತ್ತದೆ’ ಎಂದು ಹೇಳಿದರು.

‘ಪ್ರಸ್ತುತ ದೇಶಗಳು ಯುದ್ಧ ಸಾಮಗ್ರಿಗಳನ್ನು ಖರೀದಿಸಲು ಹೆಚ್ಚಿನ ಹಣ ವಿನಿಯೋಗಿಸುತ್ತಿವೆ. ಯುದ್ಧ ಸಾಮಗ್ರಿಗಳು ಸೈನ್ಯ ಏತಕ್ಕೆ ಬೇಕು. ಇನ್ನೊಬ್ಬರ ಮೇಲೆ ಯುದ್ಧ ಮಾಡಿದರೆ ಶಾಂತಿ ಸ್ಥಾಪನೆಯಾಗುತ್ತಾ? ಹಿಂಸೆ ಸ್ಥಾಪನೆಯಾಗುತ್ತಾ? ಯುದ್ಧ ಹುಡುಗಾಟವಲ್ಲ, ಇಷ್ಟೆಲ್ಲ ನಾಗರಿಕತೆ ಬೆಳೆದರೂ ಹಾಗೂ ಆರ್ಥಿಕವಾಗಿ ಅಭಿವೃದ್ಧಿಯಾದರೂ ದೇಶಗಳು ಮಾತ್ರ ಯುದ್ಧದ ಭೀತಿಯಿಂದ ಹೊರಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತ ಶಾಂತಿಯ ತೋಟ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ನಿತ್ಯ ಶೋಷಣೆ, ಹಿಂಸೆ ನಡೆಯುತ್ತಲೇ ಇದೆ. ಇವುಗಳು ನಮ್ಮ ಸುತ್ತ ಮುತ್ತಲೂ ನಡೆಯುತ್ತಿವೆ. ಎಲ್ಲಿಯವರೆಗೂ ಹಿಂಸೆ, ಅಶಾಂತಿ, ದಬ್ಬಾಳಿಕೆ, ಕ್ರೌರ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ಶಾಂತಿ ಕೂಗು ಕಮರಿ ಹೋಗುತ್ತದೆ. ಯುದ್ಧದ ವಿರುದ್ಧ, ಹಿಂಸೆಯ ವಿರುದ್ಧ ದನಿ ಎತ್ತಬೇಕು’ ಎಂದು ಸಲಹೆ ನೀಡಿದರು.

ಯೋಗ ಗುರು ಕೆ.ರಾಘವೆಂದ್ರ ಆರ್.ಪೈ ಮಾತನಾಡಿ, ‘ಯೋಗದ ಅರ್ಥವೇ ಸಮ್ಮಿಲನವಾಗಿದೆ. ಪಂಚೇಂದ್ರಿಯಗಳು ಸಕ್ರಿಯಗೊಳ್ಳಲು ಯೋಗ ಅವಶ್ಯಕವಾಗಿದೆ. ಮನಸ್ಸಿನ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಯೋಗ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಮೈಸೂರಿನ ಯೋಗಪಟು ಖುಷಿ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು.

ಪ್ರಾಂತೀಯ ಅಧ್ಯಕ್ಷ ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಮೊದಲನೇ ಉಪ ಜಿಲ್ಲಾ ಗವರ್ನರ್‌ ಡಾ.ಜಿ.ಎ.ರಮೇಶ್, ಸಲಹೆಗಾರ ಕೆ.ದೇವೇಗೌಡ, ಅಧ್ಯಕ್ಷ ಡಾ.ಶಂಕರ್, ಸಂಯೋಜಕ ಕೆ.ಎಲ್.ರಾಜಶೇಖರ್, ಉಪಾಧ್ಯಕ್ಷ ಹನುಮಂತಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT