ಸೋಮವಾರ, ಜನವರಿ 18, 2021
25 °C

ರಾಮನ ಆರಾಧನೆಯಿಂದ ರಾಮರಾಜ್ಯ ನಿರ್ಮಾಣ: ಪೇಜಾವರಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ (ಮಂಡ್ಯ ಜಿಲ್ಲೆ): ‘ಶ್ರೀರಾಮನ ಆರಾಧನೆ ನಿತ್ಯವೂ ನಡೆದರೆ ಮಾತ್ರ ರಾಮರಾಜ್ಯ ನಿರ್ಮಾಣ ಸಾಧ್ಯ. ಅಯೋಧ್ಯೆಯಲ್ಲಿ ಮಾತ್ರ ರಾಮಮಂದಿರ ನಿರ್ಮಾಣವಾಗದೆ ನಮ್ಮ ದೇಹವೇ ರಾಮಮಂದಿರವಾಗಬೇಕಿದೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದ ಆವರಣದಲ್ಲಿ ಬುಧವಾರ ನಡೆದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಸಂತ ಸಮಾವೇಶದಲ್ಲಿ ಅವರು ಮಾತನಾಡಿದರು.

‘ರಾಮಮಂದಿರ ನಿರ್ಮಾಣ ಕನಸು ನನಸಾಗಿದೆ, ಮುಂದೆ ರಾಮರಾಜ್ಯ ನಿರ್ಮಾಣವಾಗಬೇಕು. ರಾಮಜನ್ಮಭೂಮಿ ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ದೇಶದ ಜನರ ಮನಸ್ಸುಗಳನ್ನು ಒಂದುಗೂಡಿಸುವ ಉದ್ದೇಶದಿಂದ ಮನೆಮನೆಗೆ ತೆರಳಿ ನಿಧಿ ಸಂಗ್ರಹ ಮಾಡಲಾಗುತ್ತಿದೆ. ಮಂದಿರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಶ್ರೀರಾಮನ ಆದರ್ಶಗಳನ್ನು ಸರ್ವರೂ ಪಾಲನೆ ಮಾಡಬೇಕು’ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸಂಚಾಲಕ ಸುಧೀರ್ ಮಾತನಾಡಿ ‘ಜ.15 ರಿಂದ ಫೆ.5ರವರೆಗೆ ದೇಶ ಮತ್ತು ರಾಜ್ಯದಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯಲಿದೆ. ಯಾರಿಂದಲೂ ಬಲವಂತವಾಗಿ ನಿಧಿ ಸಂಗ್ರಹಕ್ಕೆ ಮುಂದಾಗುವುದಿಲ್ಲ. ಮಂಡಲ, ನಗರ, ಮಹಾನಗರ ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಅಭಿಯಾನ ನಡೆಯಲಿದೆ’ ಎಂದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಬೇಲಿಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ತೆಂಕಲಗೂಡು ಮಠದ ಚೆನ್ನಸಿದ್ದರಾಯ ಶಿವಾಚಾರ್ಯ ಸ್ವಾಮೀಜಿ, ಹೆಗ್ಗಡಹಳ್ಳಿ ‌ಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು