ಸರ್ವರೋಗ ವಿನಾಶಕಾರಿ ದೊಣ್ಣೆಯೋಗ

7
ದೇವರಕಾಡು ಬಳಗದ ಸದಸ್ಯರಿಂದ ಶಿವನಂಜಪ್ಪ ಉದ್ಯಾನದಲ್ಲಿ ನಿತ್ಯ ಕಸರತ್ತು

ಸರ್ವರೋಗ ವಿನಾಶಕಾರಿ ದೊಣ್ಣೆಯೋಗ

Published:
Updated:
Prajavani

ಮಂಡ್ಯ: ಸರ್ವ ಅಂಗಗಳಿಗೂ ಶಕ್ತಿ ನೀಡುವ ದೊಣ್ಣೆ ಯೋಗದಿಂದ, ದೇವರಕಾಡು ಬಳಗದ ಸದಸ್ಯರು ಆರೋಗ್ಯ ಕಾಪಾಡಿಕೊಂಡು ಮಾದರಿಯಾಗಿದ್ದಾರೆ.

ನಗರದ ಶಿವನಂಜಪ್ಪ ಉದ್ಯಾನದಲ್ಲಿ ದೇವರಕಾಡು ಬಳಗದ ಸದಸ್ಯರು ಬೆಳಿಗ್ಗೆ 6.30ರಿಂದ 7.30ರವರೆಗೆ ಬಿದಿರಿನ 5 ಅಡಿ ಉದ್ದದ ಗಟ್ಟಿಯಾದ ದೊಣ್ಣೆ ಹಿಡಿದುಕೊಂಡು ವಿವಿಧ ಭಂಗಿಯ ಯೋಗ ಮಾಡುತ್ತಾರೆ. ಇದರಿಂದ ದೇಹದ ಎಲ್ಲ ಅಂಗಗಳಿಗೂ ಸಮಾನ ಒತ್ತಡ ಬೀಳುವುದರಿಂದ ದೇಹ ಹಗುರವಾಗುತ್ತದೆ. ಈ ಬಳಗದಲ್ಲಿ ಸುಮಾರು 15 ವರ್ಷದ ಬಾಲಕರಿಂದ 80 ವರ್ಷ ವಯಸ್ಸಿನವರು, ಅಂಗವಿಕಲರೂ ಇದ್ದಾರೆ.

ಶಿಕ್ಷಣ, ನೀರಾವರಿ, ಅರಣ್ಯ, ಆರೋಗ್ಯ ಇಲಾಖೆಯವರು, ಆಟೊ ಚಾಲಕ, ವ್ಯಾಪಾರಿಗಳು ಹಾಗೂ ರಾಜಕೀಯ ನಾಯಕರೂ ಈ ಬಳಗದ ಸದಸ್ಯರು.

ಪೋಲಿಗಳ ತಾಣವಾಗಿದ್ದ ಉದ್ಯಾನವನ್ನು ವಾಯುವಿಹಾರಕ್ಕೆ ಬರುವ ಬಳಗದ ಸದಸ್ಯರು ಸ್ವಚ್ಛಗೊಳಿಸಿ, ಸುಮಾರು 50ಕ್ಕೂ ಹೆಚ್ಚು ಔಷಧೀಯ ಗುಣದ ಗಿಡಗಳನ್ನು ಬೆಳೆಸಿದ್ದಾರೆ.

ಉದ್ಯಾನದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಜೊತೆಗೆ ತಮ್ಮ ಒಡನಾಡಿ ಸದಸ್ಯರ ಜನ್ಮದಿನ ಆಚರಣೆ ಮಾಡುತ್ತಾರೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡುವ ಮೂಲಕ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ.

ದೇವರಕಾಡು ಬಳಗದ ಕಾರ್ಯವೈಖರಿ ನೋಡುತ್ತಿದ್ದ ನ್ಯಾಚುರೋಪಥಿ ವೈದ್ಯ ಡಾ.ವಿಜಯ್‌ಕುಮಾರ್ ಅವರು ಸದಸ್ಯರಿಗೆ ದೊಣ್ಣೆಯೋಗ ತರಬೇತಿ ನೀಡಿದರು. 20 ಜನರಿಂದ ಆರಂಭವಾದ ದೊಣ್ಣೆಯೋಗ ಅಭ್ಯಾಸಕ್ಕೆ ಪ್ರಸ್ತುತ 70ಕ್ಕೂ ಹೆಚ್ಚು ಸದಸ್ಯರು ಸೇರಿಕೊಂಡಿದ್ದಾರೆ. ನಗರದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ಇಲ್ಲಿನ ಜನರ ದೇಹವೂ, ಸಕ್ಕರೆ ಕಾಯಿಲೆ ಮಳಿಗೆಯಾಗಿದೆ. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಕಡಿಮೆ ಮಾಡಿಕೊಳ್ಳಲು ದೊಣ್ಣೆಯೋಗ ಮಾಡುತ್ತಾರೆ. ಇದರಿಂದ ದೇಹದ ಕೊಬ್ಬು ಕಡಿಮೆಯಾಗಿ, ದಿನಪೂರ್ತಿ ಚಟುವಟಿಕೆಯಿಂದ ಇರಲು ಸಾಧ್ಯವಾಗಿದೆ ಎಂದು ನಿವೃತ್ತ ಎಎಸ್‌ಐ ಪಾಪಣ್ಣ ಹೇಳುತ್ತಾರೆ.

ಬೆಳಗಾವಿ ಅಧಿವೇಶನದಲ್ಲಿ ದೊಣ್ಣೆ ಯೋಗ: ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ದೇವರಕಾಡು ಬಳಗದಲ್ಲಿ ಸದಸ್ಯರಾಗಿದ್ದು, ಪ್ರತಿನಿತ್ಯ ಬೆಳಿಗ್ಗೆ ಯೋಗದಲ್ಲಿ ಪಾಲ್ಗೊಳ್ಳುತ್ತಾರೆ. ದೊಣ್ಣೆಯೋಗದಲ್ಲಿ ಪರಿಣತಿ ಹೊಂದಿದ ಅವರು ಈಚೆಗೆ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಹಾಗೂ ಮಂತ್ರಿಗಳಿಗೆ ದೊಣ್ಣೆಯೋಗ ಮಾಡಿಸಿದ್ದಾರೆ. ಇವರು ಉದ್ಯಾನದಲ್ಲಿ ಬೆಳಿಗ್ಗೆ ಯೋಗ ಮಾಡುವ ವೇಳೆ ಶಿಕ್ಷಕರು, ಪದವೀಧರರು ಹಾಗೂ ಸಾರ್ವಜನಿಕರು ಬಂದು ತಮ್ಮ ಸಮಸ್ಯೆ ಕುರಿತು ಮನವಿ ಪತ್ರ ಸಲ್ಲಿಸುತ್ತಾರೆ. ಹೀಗಾಗಿ ಉದ್ಯಾನ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸ್ಥಳವೂ ಆಗಿದೆ.

ಎರಡು ವರ್ಷ ಚಿಕ್ಕವನಾದ ಅನುಭವ
ಹಲವು ವರ್ಷಗಳಿಂದ ನಾನು ವಾಯುವಿಹಾರ ಹಾಗೂ ಯೊಗ ಮಾಡುತ್ತಿದ್ದೇನೆ. ಆರು ತಿಂಗಳಿಂದ ಮಾಡುತ್ತಿರುವ ದೊಣ್ಣೆ ಯೋಗದಿಂದ ಕೊಬ್ಬು ಕರಗಿ ಸಣ್ಣವಾಗಿದ್ದೇನೆ. ದಿನಪೂರ್ತಿ ಚಟುವಟಿಕೆಯಿಂದ ಇರಲು ಸಾಧ್ಯವಾಗಿದೆ. 2 ವರ್ಷ ಚಿಕ್ಕವನಾದ ಅನುಭವವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅನುಭವ ಹಂಚಿಕೊಂಡರು.

78ರ ಪ್ರಾಯದಲ್ಲೂ ಉತ್ತಮ ಆರೋಗ್ಯ
ನನಗೆ 78 ವರ್ಷ ವಯಸ್ಸಾಗಿದ್ದು, ಕಳೆದ 5 ತಿಂಗಳಿಂದ ದೊಣ್ಣೆಯೋಗ ಮಾಡುತ್ತಿದ್ದು ಹೆಚ್ಚು ಆರೋಗ್ಯವಾಗಿದ್ದೇನೆ. ಆಟೊ ಚಾಲಕ ಸತ್ಯನಾರಾಯಣ ಹಾಗೂ ಶಿಕ್ಷಣ ಇಲಾಖೆ ನೌಕರ ರಾಧಾಕೃಷ್ಣ ಅವರು ಯೋಗಭ್ಯಾಸದ ಗುಂಪಿನ ನಾಯಕರಾಗಿ ತರಬೇತಿ ನೀಡುತ್ತಾರೆ. ಜಾತಿ, ಧರ್ಮ ಹಾಗೂ ಉದ್ಯೋಗ ಕ್ಷೇತ್ರ ಮೀರಿದ ಬಾಂಧವ್ಯ ನಮ್ಮ ಬಳಗದಲ್ಲಿದೆ ಎಂದು ನಿವೃತ್ತ ಎಂಜಿನಿಯರ್ ಎಂ.ಎಲ್.ಲಿಂಗಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !