ಹೂಬಿಟ್ಟ ಮಾವು; ಹೆಚ್ಚಿದ ನಿರೀಕ್ಷೆ

7
ಈ ವರ್ಷ ‘ಅರೆ ಫಸಲು’; ಉತ್ಪನ್ನ ಕಡಿಮೆಯಾಗುವ ಸಾಧ್ಯತೆ

ಹೂಬಿಟ್ಟ ಮಾವು; ಹೆಚ್ಚಿದ ನಿರೀಕ್ಷೆ

Published:
Updated:
Prajavani

ರಾಮನಗರ: ಮಾವಿನ ತೋಟಗಳೀಗ ಹೂವಿನಿಂದ ತುಂಬಿಕೊಂಡಿದ್ದು, ವರ್ಷದ ಮಾವು ಋತುವಿನ ಸ್ವಾಗತಕ್ಕೆ ಸಿದ್ಧವಾಗಿವೆ. ಈ ವರ್ಷ ‘ಅರೆ ಫಸಲು’ (ಆಫ್‌ ಇಯರ್‌) ಎಂಬುದು ತೋಟಗಾರಿಕೆ ಇಲಾಖೆ ತಜ್ಞರ ಅಂದಾಜು.

ಜಿಲ್ಲೆಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ವಿಸ್ತೀರ್ಣದಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಇದೆ. ರಾಜ್ಯದಲ್ಲಿಯೇ ಮೊದಲ ಉತ್ಪನ್ನ ಸಿಗುವುದು ಇಲ್ಲಿಯೇ. ಸೇಂದೂರ ಮೊದಲಾದ ಆರಂಭಿಕ ತಳಿಯ ಮರಗಳಲ್ಲಿ ಈಗಾಗಲೇ ಈಚು ಕಾಯಿ ಕಾಣಿಸಿಕೊಂಡಿದೆ. ಬದಾಮಿ, ರಸಪುರಿ ಮರಗಳು ಈಗಷ್ಟೇ ಹೂವು ಬಿಡುತ್ತಿವೆ. ಅರ್ಧದಷ್ಟು ಮರಗಳಲ್ಲಿ ಹೂವು ಇದ್ದರೆ, ಇನ್ನೂ ಅರ್ಧದಷ್ಟು ಮರಗಳು ಚಿಗುರು ಎಲೆಗಳಿಂದ ತುಂಬಿವೆ. ಒಂದೇ ತೋಟದಲ್ಲಿ ಮೂರ್ನಾಲ್ಕು ಹಂತದಲ್ಲಿ ಉತ್ಪನ್ನ ರೈತರ ಕೈಸೇರುವ ನಿರೀಕ್ಷೆ ಇದೆ.

ಈ ವರ್ಷ ‘ಆಫ್‌ ಸೀಸನ್‌’ ಆಗಿರಲಿದ್ದು, ಉತ್ಪನ್ನದಲ್ಲಿ ಇಳಿಕೆ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಮಾವಿನ ಫಸಲು ಅಧಿಕವಾಗಿತ್ತು. ಎರಡೂವರೆ ಲಕ್ಷ ಟನ್‌ಗೂ ಅಧಿಕ ಉತ್ಪನ್ನ ಬಂದಿತ್ತು. ಕೆಲವು ಮರಗಳು ನವೆಂಬರ್‌–ಡಿಸೆಂಬರ್‌ನಲ್ಲಿ ಹೂಬಿಟ್ಟು ಕಾಯಿ ಕಚ್ಚಿದರೆ, ಇನ್ನೂ ಕೆಲವು ಕಡೆ ಸಂಕ್ರಾಂತಿ ಬಳಿಕ ಹೂವು ಕಾಣಿಸಿಕೊಂಡಿತ್ತು. ಹೀಗಾಗಿ ಫಸಲಿನಲ್ಲಿ ಏರಿಳಿತವಾಗಿತ್ತು. ಜೂನ್‌ವರೆಗೂ ಕೊಯ್ಲು ನಡೆದಿದ್ದು, ಅಷ್ಟರಲ್ಲಿ ಬೆಲೆ ಕುಸಿದಿತ್ತು. ಇದರಿಂದಾಗಿ ಸಾಕಷ್ಟು ರೈತರು ಹೊಲದಲ್ಲಿಯೇ ಫಸಲು ಬಿಟ್ಟು ಸುಮ್ಮನಾಗಿದ್ದರು. ಇನ್ನೂ ಕೆಲವರು ರಸ್ತೆಗೆ ಮಾವು ಸುರಿದು ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಈ ವರ್ಷ ಮುಂಗಾರು ಹೇಳಿಕೊಳ್ಳುವ ಮಟ್ಟಿಗೆ ಬಿದ್ದಿಲ್ಲ. ಎರಡು ತಾಲ್ಲೂಕಿನಲ್ಲಿ ಬರದ ಪರಿಸ್ಥಿತಿ ಇದೆ. ಉತ್ಪನ್ನ ಕಡಿಮೆ ಆಗಲಿರುವುದರಿಂದ ಬೆಲೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ರೈತರದ್ದು. ಒಂದು ವೇಳೆ ಈ ವರ್ಷವೂ ಧಾರಣೆ ಕುಸಿದರೆ ತೋಟಗಾರಿಕೆ ಕೃಷಿಯಿಂದ ಸಾಕಷ್ಟು ರೈತರು ವಿಮುಖರಾಗಬಹು ಎನ್ನುವ ಆತಂಕವೂ ಇದೆ.

ರೈತರು–ಖರೀದಿದಾರರ ಸಮಾವೇಶ
ಮಾವು ಬೆಳೆಗಾರರನ್ನು ಖರೀದಿದಾರರೊಡನೆ ಸಂಪರ್ಕಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯು ನೇರ ಸಮಾವೇಶವನ್ನು ಆಯೋಜಿಸಲಿದೆ. ಫೆಬ್ರುವರಿ ಆರಂಭದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

‘ಈ ವರ್ಷ ಎಷ್ಟು ಉತ್ಪನ್ನ ಸಿಗಲಿದೆ. ಯಾವ ಬೆಳೆಗಾರರು ಯಾವ ತಳಿ ಬೆಳೆದಿದ್ದಾರೆ ಎಂಬುದರ ಮಾಹಿತಿಯನ್ನು ಖರೀದಿದಾರರಿಗೆ ಮೊದಲೇ ಮಾಹಿತಿ ನೀಡಲಾಗುವುದು. ಮಾವಿನ ದರ ಕುರಿತು ಚರ್ಚೆ ಸಹ ನಡೆಯಲಿದೆ. ಖರೀದಿದಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಮುಂಗಡ ಖರೀದಿ ಮಾಡಲು ಅನುವು ಮಾಡಿಕೊಡಲಾಗುವುದು. ಇದರಿಂದ ರೈತರಿಗೆ ಆಗುವ ನಷ್ಟವನ್ನು ತಗ್ಗಿಸುವ ಉದ್ದೇಶವಿದೆ’ ಎಂದು ಗುಣವಂತ ತಿಳಿಸಿದರು.

ಔಷದೋಪಚಾರಕ್ಕೆ ಸಲಹೆ
ಮಾವಿಗೆ ಔಷದಿ ಸಿಂಪಡಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಸದ್ಯ ಚಳಿ ತೀವ್ರವಾಗಿದ್ದು, ಇಬ್ಬನಿಯ ಪ್ರಮಾಣ ಹೆಚ್ಚಿದ್ದಲ್ಲಿ ರೋಗ ಬಾಧೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಸದ್ಯ ಕೆಲವು ಮರಗಳಲ್ಲಿ ಜಿಗು ಹುಳುಗಳು ಕಾಣಿಸಿಕೊಂಡಿವೆ. ‘ಸ್ಯಾಪ್‌’ ಕ್ರಿಮಿನಾಶಕ ಸ್ಪ್ರೇ ಮಾಡುವ ಮೂಲಕ ಈ ಹುಳುಗಳನ್ನು ನಿಯಂತ್ರಿಸಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

*
ಈ ವರ್ಷ ಜಿಲ್ಲೆಯಲ್ಲಿ ಮಾವಿನ ಇಳುವರಿ ಕಡಿಮೆ ಇರಲಿದೆ. ಸುಮಾರು 1.5ರಿಂದ 1.75 ಟನ್‌ ಉತ್ಪನ್ನ ಸಿಗುವ ನಿರೀಕ್ಷೆ ಇದೆ
ಗುಣವಂತ.
-ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

*
ಒಂದೇ ಮಾವಿನ ತೋಟದಲ್ಲಿ ಕೆಲವು ಹೂಬಿಟ್ಟಿದ್ದರೆ, ಕೆಲವು ಕಡೆ ಚಿಗುರಿದೆ. ಹೀಗಾಗಿ ಒಂದೇ ಹಂತದಲ್ಲಿ ಉತ್ಪನ್ನ ರೈತರ ಕೈಸೇರುವ ಸಾಧ್ಯತೆ ಕಡಿಮೆ.
-ಸಿ. ಪುಟ್ಟಸ್ವಾಮಿ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !