ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪಿನ ದರ ಭಾರಿ ಇಳಿಕೆ

ತರಕಾರಿ ದರ ಯಥಾಸ್ಥಿತಿ; ಗಜ್ಜರಿಗೆ ಬೇಡಿಕೆ
Last Updated 25 ಜುಲೈ 2019, 16:46 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಸೊಪ್ಪಿನ ದರದಲ್ಲಿ ಭಾರಿ ಇಳಿಕೆಯಾಗಿದೆ.

ಬೇಸಿಗೆಯಲ್ಲಿ ಸೊಪ್ಪು, ತರಕಾರಿ ದರ ಗಗನಮುಖಿಯಾಗಿತ್ತು. ಕೆ.ಜಿ ಹಸಿ ಮೆಣಸಿನಕಾಯಿ ದರ ₹120ಕ್ಕೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿತ್ತು. ಸದ್ಯ ಮಳೆ ಆಗದಿದ್ದರೂ ವಾತಾವರಣ ತಂಪಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೊಪ್ಪು, ತರಕಾರಿ ಮಾರುಕಟ್ಟೆಗೆ ಆವಕವಾಗುತ್ತಿದೆ.

15 ದಿನಗಳ ಹಿಂದೆ ಒಂದು ಸೂಡ (ಕಂತೆ) ಕೊತ್ತಂಬರಿಗೆ ₹10 ಇತ್ತು. ಈಗ ₹10ಕ್ಕೆ ನಾಲ್ಕು ಸೂಡ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಮೆಂತೆ ಸೊಪ್ಪು ₹10ಕ್ಕೆ 3, ಕಿರಕಸಾನಿ ₹10ಕ್ಕೆ 3, ಪಾಲಕ್ ₹10ಕ್ಕೆ 5, ರಾಜಗಿರಿ ₹10ಕ್ಕೆ 3 ಹಾಗೂ ಕರಿಬೇವು ₹10ಕ್ಕೆ 4ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಪುದೀನಾ ದರ ಮಾತ್ರ ಕಡಿಮೆ ಆಗಿಲ್ಲ. ಒಂದು ಕಂತೆಗೆ ಈಗಲೂ ₹7 ರಿಂದ ₹8 ದರವಿದೆ. ತರಕಾರಿಗಿಂತ ಸೊಪ್ಪಿನ ದರ ಕಡಿಮೆ ಆಗಿರುವುದರಿಂದ ಗ್ರಾಹಕರು ಕೂಡ ಸೊಪ್ಪು ಖರೀದಿಸುತ್ತಿದ್ದಾರೆ.

ಇನ್ನು ತರಕಾರಿ ದರ ಸ್ವಲ್ಪ ಕಡಿಮೆಯಾಗಿದೆ. ಆದರೆ, ಗಜ್ಜರಿ, ಮೂಲಂಗಿ ದರ ಕಡಿಮೆ ಆಗಿಲ್ಲ. ಬದನೆಕಾಯಿ ಕೆ.ಜಿಗೆ ₹30–40, ಟೊಮೆಟೊ ₹30–40, ಹಿರೇಕಾಯಿ ₹40–50, ಹಸಿ ಮೆಣಸಿನಕಾಯಿ ₹40–50, ಸವತೆಕಾಯಿ ₹50 ದರವಿದೆ. ಗಜ್ಜರಿಗೆ ಬೇಡಿಕೆ ಇದ್ದರೂ ಮಾರುಕಟ್ಟೆಗೆ ಆವಕವಾಗುತ್ತಿಲ್ಲ.

‘ಕೆ.ಜಿ ಗಜ್ಜರಿ ₹80 ದರವಿದೆ. ಆದರೆ, ಮಾರುಕಟ್ಟೆಗೆ ಗಜ್ಜರಿ ಬರುತ್ತಿಲ್ಲ. ಮಳೆ ಕಡಿಮೆಯಾದ ಕಾರಣ ಹೆಚ್ಚಿನ ರೈತರು ಗಜ್ಜರಿ ಬೆಳೆದಿಲ್ಲ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬೆಳೆದ ಗಜ್ಜರಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ’ ಎಂದು ತರಕಾರಿ ವ್ಯಾಪಾರಿ ಆರ್.ಡಿ.ಬಾಗವಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೊಂದೆರಡು ದೊಡ್ಡ ಮಳೆಯಾದರೆ ತರಕಾರಿ ದರ ಕಡಿಮೆ ಆಗುತ್ತದೆ. ಸೊಪ್ಪಿನ ದರ ಇನ್ನೂ ಕಡಿಮೆ ಆಗಲಿದೆ. ಎಲ್ಲವೂ ಮಳೆ ಮೇಲೆ ಅವಲಂಬಿತವಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT